ಮೇಘದೂತ

🌹ಮೇಘದೂತದ ಒಂದು ಬಿಂದು🌹

*नूनं तस्या: प्रबलरुदितोच्छूननेत्रं प्रियाया निश्वासानामशिशिरतया भिन्नवर्णाधरोष्ठम् | हस्तन्यस्तं मुखमसकलव्यक्तिलम्बालकत्वात् इन्दोर्दैन्यं त्वदनुपसरणक्लिष्टकान्तेर्बिभर्ति ||*

_ಹೇ ಮೇಘನೇ, ನೀನು ನನ್ನವಳ ಈಗಿನ ಅವಸ್ಥೆಯನ್ನು ನೋಡಿ ದುಃಖಿಸದಿರು. ನನ್ನ ವಿರಹ ತಾಳಲಾರದೇ ಅವಳು ನಿತ್ಯವೂ ಅನವರತ ಕಣ್ಣೀರು ಸುರಿಸುತ್ತಿರುವ ಕಾರಣ ಅವಳ ತಾಯರೆಯಂದದ ನೇತ್ರಗಳು ಹೊಳಪನ್ನು ಕಳೆದುಕೊಂಡು ಕೆಂಪಗಾಗಿ ಊದಿಕೊಂಡಿವೆ. ( ಈಗ ಹಾಗಿದ್ದರೆ ಮಧುಪಾನಿಗಳೆಂದು ಸಂಶಯಿಸುತ್ತಾರೆ. ಅತ್ತು ಅತ್ತು ಕಣ್ಣು ನೆತ್ತರು ತುಂಬಿದಂತೆ ಆಗಿದೆ. ಒಳಗಿನ ವಿರಹದ  ಬೇಗೆಯು ಬಿಸಿಯುಸಿರಾಗಿ ತುಟಿಗಳನ್ನು ಚುಂಬಿಸಿ ಅವುಗಳ ಸಹಜ ಕಾಂತಿಯನ್ನು ನಾಶಪಡಿಸಿದೆ. ಕೆಳದುಟಿಯು ಸಹಜವಾಗಿ ರಕ್ತವರ್ಣದ್ದಾದರೂ ಈಗ ಬಿಸಿ ತಾಗಿ ಕಪ್ಪಾಗಿದೆ. ( ಧೂಮಪಾನಿಗಳ ತುಟಿಗಳಂತೆ) ನನ್ನ ಬಗ್ಗೆಯೇ ಯೋಚಿಸುತ್ತಾ ಕಳೆಗುಂದಿದ ಅಥವಾ ಬಾಡಿದ ಮುಖವುಳ್ಳ ಆ ಪ್ರಿಯೆ ಗಲ್ಲದ ಮೇಲೆ ಕೈ ಇಟ್ಟು ಚಿಂತಾಕ್ರಾಂತಳಾಗಿರುವಳು. ವಿರಹದ ವೇದನೆಯು ಅವಳಿಗೆ ತಲೆ ಬಾಚುವುದಕ್ಕೂ ನಿರುತ್ಸಾಹವನ್ನು ತಂದೊಡ್ಡಿದೆ. ಹಾಗಾಗಿ ಮುಂಗುರುಳುಗಳು ಕೆದರಿಹೋಗಿ ಗಾಳಿಯಲ್ಲಿ ಓಲಾಡುತ್ತಿದೆ. ಅದು ಅವಳ ಮೊಗವನ್ನು ಮುಚ್ಚುವಂತಿದೆ. ಕವಿ ಇಲ್ಲಿ ಒಂದು ಸುಂದರ ಉಪಮೆ ಕೊಡುತ್ತಾನೆ. ಆಗಸದಲ್ಲಿ ಚಂದಿರನನ್ನು ಮೋಡಗಳು ಮರೆ ಮಾಚಿದಾಗ ಹೇಗೆ ಅವನ ಕಾಂತಿ ಕಳೆಗುಂದುವುದೋ ಹಾಗೆಯೇ ಆ ನನ್ನ ಪ್ರಾಣಸಖಿ ಚಂದ್ರಮುಖಿಯಾದರೂ ಈಗ ಪ್ರಿಯನಿಲ್ಲದೆ ಕಳೆಗುಂದಿರುವಳು. ಅವಳಿಗೆ ಬಿಸಿಯುಸಿರೇ ಸವಿಗಾನವಾಗಿದೆ. ( ಮೆಲ್ಲುಸಿರೇ ಸವಿಗಾನ ) ಎದೆಗೆ ವಿರಹವೆಂಬ ಮುಳ್ಳಿನ ಬಾಣ ತಾಕಿ ನೋಯುತಿದೆ. ( ಈಗ ಕೂದಲು ಬಿಟ್ಟುಕೊಂಡಿದ್ದರೆ ಅಥವಾ ಮುಖವನ್ನು ಆವರಿಸಿದರೆ ಅದು ಸೌಂದರ್ಯದ ಸಂಕೇತವೆಂದು ಭಾವಿಸುತ್ತಾರೆ.) ಅವಳ ಅಲಕಗಳಿಗೆ ಬಾಚಣಿಗೆ ತಾಕದೆ ಎತ್ತೆತ್ತಲೋ ಹಾರಾಡುತ್ತಿವೆ. ಇಂತಹ ಸ್ಥಿತಿಯಲ್ಲಿರುವ ನನ್ನ ಪ್ರಿಯೆಯನ್ನು ಸಮಾಧಾನಿಸು._

📜 ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩