ಮೇಘದೂತ

🌹 ಮೇಘದೂತದ ಒಂದು ಬಿಂದು 🌹

*श्यामास्वङ्गं चकितहरिणीप्रेक्षणे दृष्टिपातं वक्त्रच्छायां शशिनि शिखिनां बर्हभारेषु केशान् | उत्पश्यामि प्रतनुषु नदीवीचिषु भ्रूविलासान् हन्तैकस्मिन् क्वचिदपि न ते चंडि सादृश्यमस्ति ||*

_ಮೇಘದ ಮೂಲಕ ಯಕ್ಷನು ಪ್ರಿಯೆಗೆ ಹೇಳುತ್ತಿರುವನು. ಹೇ ಶೀಘ್ರಕೋಪಿಯೇ, ನೀನು ಪ್ರತ್ಯಕ್ಷ ಇಲ್ಲದಿದ್ದರೂ ನಿನ್ನ ಸಾದೃಶ್ಯವನ್ನು ನಾನು ಪ್ರಕೃತಿಯಲ್ಲೇ ಕಾಣುವೆನು. ಗೌರವರ್ಣದ ಪ್ರಿಯಂಗುಲತೆಯು ನಿನ್ನ ತನುವಿನ ಸಾಧರ್ಮ್ಯವನ್ನೇ ತಂದುಕೊಡುತ್ತಿದೆ. ನಿನ್ನ ತನುವಂತೆ ಶೋಭಾಯಮಾನವಾಗಿಯೂ ಬಳುಕುತ್ತಲೂ ವೃಕ್ಷವನ್ನು ಆಶ್ರಯಿಸಿ ನಾಚಿಕೊಂಡಂತೆಯೂ ಇದೆ. ಇನ್ನು ಬೆದರಿದ ಜಿಂಕೆಯ ಕಣ್ಣಿನಲ್ಲಿ ನಿನ್ನ ನೋಟವನ್ನೇ ನಾನು ಕಾಣುತ್ತೇನೆ. ಹುಲಿ ಸಿಂಹಗಳಿಗೆ ಬೆದರಿ ಓಡುವಾಗಿನ ಜಿಂಕೆಗಳ ಅತ್ಯಂತ ಚಂಚಲ ನೇತ್ರಗಳು ನಿನ್ನ ನೆನಪನ್ನು ಮತ್ತೆ ಮತ್ತೆ ತಂದುಕೊಡುತ್ತವೆ. ಇನ್ನು ರಾತ್ರಿಯಾದಂತೆ ಮೂಡುವ ಚಂದ್ರಬಿಂಬವು ನಿನ್ನ ಮುಖದ ಸಾದೃಶ್ಯವನ್ನು ತರುತ್ತಿದೆ. ಚಂದ್ರನಲ್ಲಿರುವ ಆಹ್ಲಾದಕತ್ವ ಕಾಂತಿ ಎಲ್ಲವೂ ನಿನ್ನ ಮೊಗದಲ್ಲೇ ನಾನು ಕಾಣುತ್ತಿದ್ದೆ. ಆದರೀಗ ಚಂದ್ರನಲ್ಲೇ ನಿನ್ನನ್ನು ಕಾಣುತ್ತಿರುವೆನು. ನವಿಲುಗಳು ಗರಿ ಬಿಚ್ಚಿ ನರ್ತಿಸುವಾಗ ಆ ಗರಿಗಳಲ್ಲಿ ನಿನ್ನ ಕೇಶರಾಶಿಯನ್ನು ಕಾಣುವೆನು. ಅಷ್ಟು ಕೋಮಲವಾದ ದಟ್ಟವಾದ ಆಕರ್ಷಕವಾದ ಕೇಶ ನಿನ್ನದು. ಬಿಸಿಲಿಗೆ ಕ್ಷೀಣವಾದ ನದಿಯ ಪ್ರವಾಹಗಳಲ್ಲಿ ನಿನ್ನ ಹುಬ್ಬಿನ ಮಾಟಗಳನ್ನು ಕಾಣುತ್ತೇನೆ. ನಿನ್ನ ಹುಬ್ಬಿನ ಕುಣಿಯುವಿಕೆಯಂದದಿ ನದಿ ಹರಿಯುತ್ತಿದೆ. ನಾನು ಹೀಗೆ ಹೇಳುತ್ತಿರುವೆನೆಂದು ಕೋಪಿಸಿಕೊಳ್ಳದಿರು. ಕೇವಲ ಒಂದೊಂದು ಸಾದೃಶ್ಯವನ್ನು ಮಾತ್ರ ನಾನು ಅಲ್ಲಲ್ಲಿ ಕಾಣುತ್ತಿರುವೆನು. ನಿನ್ನ ಸಂಪೂರ್ಣ ಸೌಂದರ್ಯ ಅಥವಾ ಸಾದೃಶ್ಯ ಎಲ್ಲೂ ಕಾಣುತ್ತಿಲ್ಲ. ಅಂತಹ ಅಪ್ರತಿಮ ಕಾಂತಿ ಸೌಂದರ್ಯ ಆಕರ್ಷಕತೆ ನಿನ್ನ ವಿಶೇಷತೆ. ವಸ್ತುಗಳು ಒಂದೊಂದು ಅಂಶದಲ್ಲಿ ನಿನ್ನನ್ನು ಸರಿಗಟ್ಟಬಹುದು. ಆದರೆ ಪ್ರಕೃತಿಯ ಯಾವ ದೃಶ್ಯವೂ ನಿನ್ನ ಸಂಪೂರ್ಣ ತನುವಿಗೆ ಸಾಟಿಯಾಗಲಾರದು. ಅಂತಹ ನೀನಿಲ್ಲದೆ ನಾನು ಚಡಪಡಿಸುತ್ತಿರುವೆನು. ಕವಿ ವಿಭಿನ್ನ ರೀತಿಯಲ್ಲಿ ವರ್ಣಿಸಿರುವ ರೀತಿ ಅಪೂರ್ವವಾದುದು._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩