ಪ್ರತಿಮಾನಾಟಕ
🌺 ಪ್ರತಿಮಾನಾಟಕದ ಒಂದು ಸುಮ 🌺
*भ्रमति सलिलं वृक्षावर्ते सफेनमवस्थितं तृषितपतिता नैते क्लिष्टं पिबन्ति जलं खगा: | स्थलमभिपतत्यार्द्रा: कीटा बिले जलपूरिते नववलयिनो वृक्षा मूले जलाक्षयरेखया ||*
_ಭಾಸನ ಪ್ರಕೃತಿವರ್ಣನೆ ಇಲ್ಲಿದೆ. ಭರತ ತೆರಳಿದ ಮೇಲೆ ರಾಮ ಭರತನಿಗೆ ಆಡಳಿತದಲ್ಲಿ ಸಹಾಯಕರಾಗಿ ನಾನಿಲ್ಲವಲ್ಲ ಎಂದು ದುಃಖಿಸುತ್ತಾನೆ. ಇಂತಹ ಸಮಯದಲ್ಲಿ ಮನಕ್ಕೆ ಮುದ ಕೊಡುವವಳು ಜಾನಕಿ. ಅವಳು ಎಲ್ಲಿರುವಳೋ ಎಂದು ಹುಡುಕಿ ಗಿಡಗಳಿಗೆ ನೀರುಣಿಸುತ್ತಾ ತೆರಳಿದ್ದನ್ನು ಗುರುತಿಸಿ ಈ ಮಾತನ್ನು ನುಡಿಯುವನು. ಸ್ವಲ್ಪ ಸಮಯದ ಹಿಂದೆ ಹಾಕಿದ ನೀರು ನೊರೆನೊರೆಯಾಗಿ ಮರಗಳ ಬುಡದಲ್ಲಿ ತಿರುಗುತ್ತಿದೆ. ಮರದ ಸುತ್ತಲೂ ನೀರು ಚೆಲ್ಲಿದಾಗ ಆ ನೀರು ಸ್ವಲ್ಪ ಹೊತ್ತು ಅತ್ತಿತ್ತ ತಿರುಗುವುದು. ಆದರ ತಿರುಗುವಿಕೆಯು ಮಣ್ಣಿನಲ್ಲಿ ಸೇರಿ ನೊರೆಗಳು ಹುಟ್ಟುವವು. ಇನ್ನು ನೀರನ್ನು ನೋಡಿ ಬಾಯಾರಿದ ಪಕ್ಷಿಗಳು ಆತುರದಿಂದ ಮರದ ಕೆಳಗೆ ಬಂದು ಸೇರಿವೆ. ಆದರೆ ನೀರಿನಲ್ಲಿ ಕಲ್ಮಷವಿರುವ ಕಾರಣ ಅವುಗಳಲೇ ಕೂಡಲೇ ಕುಡಿಯಲು ಸಾಧ್ಯವಾಗುತ್ತಿಲ್ಲ. ಈಗ ತಾನೇ ಸುರಿದ ಕಾರಣ ನೀರಿನಲ್ಲಿ ಒಂದಷ್ಟು ಕಸ ಕಡ್ಡಿಗಳು ಸೇರಿವೆ. ಹಾಗಾಗಿ ಹಕ್ಕಿಗಳ ಆಸೆ ಇನ್ನೂ ಈಡೇರಿಲ್ಲ. ನೀರು ತಮ್ಮ ಮನೆಗಳನ್ನು ತೋಯಿಸಿತೆಂದು ಅಥವಾ ಪ್ರವಾಹ ಬಂತೆಂದು ಬೆದರಿದ ಕೀಟಗಳು ಅಲ್ಲಿಂದ ಜಾಗ ಖಾಲಿಮಾಡುತ್ತಿವೆ. ಅವುಗಳ ಸಹಜ ವಾಸಸ್ಥಾನ ಈಗ ನೀರಿನಿಂದ ತುಂಬಿದೆ. ನೀರಿನಿಂದ ಆಶ್ರಿತವಾದ ಆ ಸ್ಥಳ ಅವುಗಳನ್ನು ನಿರಾಶ್ರಿತರನ್ನಾಗಿಸಿದೆ. ಮರಗಳ ಬುಡದಲ್ಲಿ ನೀರು ತಾಗಿ ಹೊಸದಾದ ಬಗೆಬಗೆಯ ವಿನ್ಯಾಸದ ರೇಖೆಗಳು ಹುಟ್ಟಿಕೊಂಡಿವೆ. ನೀರು ಅವುಗಳ ಕಾಂಡದ ಕೆಲವು ಭಾಗಗಳನ್ನು ತೋಯಿಸಿದಾಗ ಬೇರೆಯದೇ ಬಣ್ಣವನ್ನು ಹೊಂದಿವೆ. ಅಷ್ಟಲ್ಲದೇ ಒದ್ದೆಯಾದ ಭಾಗವು ರೇಖೆಗಳನ್ನು ಗೀಚಿದಂತೆ ಕಾಣುತ್ತಿದೆ. ಇಷ್ಟಕ್ಕೆಲ್ಲ ಕಾರಣ ಆ ಮಾತೆ ಸೀತೆ. ತನ್ನ ಸ್ವಂತ ಮಕ್ಕಳಂತೆ ಈ ಕಾನನಪಾದಪಗಳಿಗೆ ನೀರುಣಿಸುತ್ತಿರುವಳು. ಹಾಗಾಗಿ ಇಷ್ಟೆಲ್ಲ ವಿಶೇಷತೆಗಳು ಪ್ರಕೃತಿಯಲ್ಲಿ ಕಂಡುಬರುತ್ತಿವೆ. ಕವಿ ಬಹಳ ಸಮಯ ಪ್ರಕೃತಿಯ ಸಣ್ಣ ಘಟಕಗಳನ್ನೂ ಅಧ್ಯಯನ ಮಾಡಿ ಬರೆದಂತಿದೆ ಈ ಸಾಲು._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ