ರಾಮಾಯಣ-೧೬೦
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೦🏝📖
*ಛಿದ್ರಂ ಹಿ ಮೃಗಯಂತೇತ್ರ ವಿದ್ವಾಂಸೋ ಬ್ರಹ್ಮರಾಕ್ಷಸಾಃ | ನಿಹತಸ್ಯ ಚ ಯಜ್ಞಸ್ಯ ಸದ್ಯಃ ಕರ್ತಾ ವಿನಶ್ಯತಿ||*
_ದಶರಥನ ಮಾತು.ಅಶ್ವಮೇಧ ಯಜ್ಞವನ್ನು ಯಾವ ರಾಜರು ಬೇಕಾದರೂ ಮಾಡಬಹುದು. ಆದರೆ ತಪ್ಪಿಲ್ಲದಂತೆ ಮಾಡಬೇಕಾದುದು ಮುಖ್ಯ.ಈ ಯಜ್ಞದಲ್ಲಿ ಸ್ವಲ್ಪ ನ್ಯೂನ ಅತಿರಿಕ್ತ ಉಂಟಾದರೂ ಒಡನೆಯೇ ಕರ್ತೃವಿಗೆ ಅನರ್ಥವಾಗುತ್ತದೆ. ವಿದ್ವಾಂಸರಾದ ಬ್ರಹ್ಮರಾಕ್ಷಸರು ಈ ಯಜ್ಞದಲ್ಲಿ ಏನು ತಪ್ಪು ನಡೆಯುವುದೆಂದು ಹುಡುಕುತ್ತಿರುತ್ತಾರೆ. ಅದರ ಫಲದಿಂದ ದೋಷವಾದರೆ ಕರ್ತೃವು ನಾಶ ಹೊಂದುವನು. ಹಾಗಾಗಿ ತುಂಬಾ ಜಾಗರೂಕರಾಗಿ._
_ಇಲ್ಲಿ ದಶರಥನ ಮುಂಜಾಗೃತೆ ತುಂಬಾ ಸಾಧುವಾಗಿದೆ. ಯಾರು ಸಾಂಗ ವೇದ ಓದಿ ಇತರರಿಗೆ ಒಂದಕ್ಷರವೂ ಪಾಠ ಹೇಳಲಾರನೋ, ದಾನ ತೆಗೆದುಕೊಂಡು ಅದಕ್ಕೆ ತಕ್ಕ ಪ್ರಾಯಶ್ಚಿತ್ತ ಏನನ್ನೂ ಮಾಡದೇ ಉಳಿಯುವನೋ, ಯಾಗ ಮಾಡಲು ಅನರ್ಹರಾದವರಿಗೆ ಯಜ್ಞ ಯಾಗ ಮಾಡಿಸುತ್ತಾ , ತನ್ನ ನಿತ್ಯದ ಅನುಷ್ಠಾನದಲ್ಲಿ ಆಸಕ್ತಿ ಹೊಂದದೇ ಇರುವನೋ ಅಂತಹ ಬ್ರಾಹ್ಮಣನು ಬ್ರಹ್ಮರಾಕ್ಷಸನಾಗುವನು._
_ಇಷ್ಟಲ್ಲದೆ *ಪರಸ್ಯ ಯೋಷಿತಂ ಹೃತ್ವಾ ಪರಸ್ವಮಪಹೃತ್ಯ ಚ | ಅರಣ್ಯೇ ನಿರ್ಜನೇ ದೇಶೇ ಭವತಿ ಬ್ರಹ್ಮರಾಕ್ಷಸಃ ||* ಎಂಬಂತೆ ಪರಸ್ತ್ರೀ ಅಪಹಾರಕ, ಪರರ ಸ್ವತ್ತಿನ ಅಪಹಾರಕನಾದ ಬ್ರಾಹ್ಮಣನು ಬ್ರಹ್ಮರಾಕ್ಷಸನಾಗುವನು._
_ಇನ್ನೂ ನೋಡುವುದಾದರೆ *ಸಂಯೋಗಂ ಪತಿತೈರ್ಗತ್ವಾ ಪರಸ್ಯೈವ ಚ ಯೋಷಿತಮ್ | ಅಪಹೃತ್ಯ ಚ ವಿಪ್ರಸ್ವಂ ಭವತಿ ಬ್ರಹ್ಮರಾಕ್ಷಸಃ||* ಎಂಬಂತೆ ಪತಿತರೊಡನೆ ಬಂಧುತ್ವ, ಪರಸ್ತ್ರೀ ಹರಣ, ವಿಪ್ರಧನಾಪಹರಣ ಇವುಗಳನ್ನು ಮಾಡುವ ಬ್ರಾಹ್ಮಣ ಬ್ರಹ್ಮರಾಕ್ಷಸನಾಗುವನು._
_ಇಂತಹ ಬ್ರಹ್ಮರಾಕ್ಷಸರು ಒಂದು ಲೋಕಕಲ್ಯಾಣಕಾರಕ ಶುಭ ಕರ್ಮ ನಡೆಯುವಲ್ಲಿ ತಪ್ಪದೇ ಹಾಜರಾಗಿ ಅದರಲ್ಲಿ ದೋಷದರ್ಶಿಗಳಾಗಿ ಅದನ್ನು ಹಾಳುಮಾಡಲು ಹವಣಿಸುತ್ತಿರುತ್ತಾರೆ. ಹಾಗಾಗಿ ದೊಡ್ಡ ಯಾಗ ಯಜ್ಞ ಪೂಜೆ ಮಾಡುವ ಮುನ್ನ ತಪ್ಪಾಗದಂತೆ ಜಾಗರೂಕತೆ ವಹಿಸುವುದು ತುಂಬಾ ಅಗತ್ಯ._
ಮುಂದುವರಿಯುತ್ತದೆ.....
ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ