ಪದಶಕ್ತಿ-೩೬
🏹*ಪದಶಕ್ತಿ* ---೩೬🌄
*ಗಂಧರ್ವ*
_ಗಂಧಂ ಅರ್ವತಿ ಎಂದರೆ ಸುಗಂಧವನ್ನು ಹರಡುವವರು ಎಂಬ ಅರ್ಥದಲ್ಲಿ ಗಂಧರ್ವರು ಇದ್ದಾರೆ. ಗಾಃ ಧಾರಯತಿ ಇತಿ ಎಂದರೆ ಸ್ತೋತ್ರರೂಪವಾದ ಮಾತನ್ನು ಸದಾ ಉಚ್ಚರಿಸುತ್ತಿರುತ್ತಾರೆ ಅಥವಾ ಹಾಡುತ್ತಿರುತ್ತಾರೆ ಎಂಬ ಅರ್ಥದಲ್ಲಿ ಗಂಧರ್ವರು. ಒಟ್ಟಾರೆ ಗಂಧರ್ವರು ಸುಗಂಧಭರಿತ, ಸಂಗೀತ ಸುಧೆಯ, ಮೃದು ಮಾತಿನ ದೇವ ಪ್ರಭೇದರು._
_ಕುದುರೆಗೂ ಗಂಧರ್ವ ಎಂಬ ಹೆಸರಿದೆ. ಕಸ್ತೂರೀ ಮೃಗಕ್ಕೂ ಈ ಹೆಸರಿದೆ. ವೇಗವಾಗಿ ಸಂಚರಿಸುವ ಕಾರಣ ಕುದುರೆಗೆ, ಪರಿಮಳ ಹೊರಸೂಸುವ ಕಾರಣ ಕಸ್ತೂರಿಗೆ ಈ ಹೆಸರು._
_ಗಂಧಂ ಆಮೋದಂ ಅರ್ವತಿ ಎಂದರೆ ಸದಾ ಸಂತೋಷವನ್ನು ಹರಡುತ್ತಾರೆ ಅಥವಾ ಸುಖಜೀವಿಗಳು ಎಂಬ ಅರ್ಥವೂ ಇವರಿಗೆ ಹೊಂದುತ್ತದೆ._
_ಸುಶ್ರುತ ಸಂಹಿತೆಯಲ್ಲಿ ನರರು ಯಾರಾದರೂ ಹಾಡು- ಕುಣಿತ- ಮೈಗೆ ಗಂಧ ಪೂಸಿಕೊಂಡು- ಮಾಲೆ ಮೊದಲಾದವನ್ನು ಧರಿಸಿ ಹುಚ್ಚರಂತೆ ವರ್ತಿಸುತ್ತಿದ್ದರೆ ಅದು ಗಂಧರ್ವ ಗ್ರಹ ಪೀಡಿತ ಎಂದಿದ್ದಾರೆ. ಇಸ್ಕಾನ್ ಪಂಥದವರು ಇಷ್ಟಲ್ಲದಿದ್ದರೂ ಕೆಲವು ಲಕ್ಷಣ ಹೊಂದಿದ್ದಾರೆ. ಆದರಲ್ಲಿ ಭಕ್ತಿಯಿಂದ ಮೈ ಮರೆಯುವ ಸಂಕೇತ ಹೊರತು ಗ್ರಹಪೀಡೆ ಅಲ್ಲ._
_ಹರಳೆಣ್ಣೆಗೂ ಗಂಧರ್ವತೈಲವೆಂಬ ಹೆಸರಿದೆ. ಬಹುಶಃ ತಂಪಾಗುವ ಕಾರಣದಿಂದ ಬಂದಿರಬಹುದು._
_ಗಾಃ ಧಾರಯತಿ ಕಿರಣಗಳನ್ನು ಹೊರಸೂಸುವ ಚಂದ್ರಾದಿತ್ಯರೂ ಗಂಧರ್ವರೇ ಸರಿ._
_ದೇವಗಾಯಕರೂ ಗಂಧರ್ವರು. ಹಾಹಾ- ಹೂಹೂ ಎಂಬಿಬ್ಬರು ಗಂಧರ್ವರು ಈಗಿನ ಗಾಗಾ- ಸಾಗಾರಂತೆ._
_ಗಂಧರ್ವ ಅಸ್ತ್ರ ಸಮ್ಮೋಹನ ಉಂಟು ಮಾಡುವಂತಹದು.ಗಂಧರ್ವರ ಗುಣವೂ ಸಮ್ಮೋಹಕ._
_ಭಾರತವರ್ಷದ ಒಂಭತ್ತು ದ್ವೀಪ ಭೇದಗಳಲ್ಲಿ ಗಂಧರ್ವ ಹೆಸರಿನ ಒಂದು ದ್ವೀಪವಿದೆ._
_ಕಡೆಯದಾಗಿ ದುಷ್ಯಂತ ಶಕುಂತಲೆಯನ್ನು ವರಿಸಿದ್ದು ಅಂದರೆ ಪರಸ್ಪರ ಒಪ್ಪಿಗೆಯ ಮೇರೆಗೆ ದೇಹಸಂಪರ್ಕ ನಡೆಸುವ ಅದೇ ಅಗ್ನಿಯನ್ನು ಸಾಕ್ಷಿಯಾಗಿ ಪರಿಗಣಿಸುವ ವಿವಾಹ ವಿಧಾನ._
ಸಂಸ್ಕೃತ ಕನ್ನಡ ಸಾಹಿತ್ಯದ ಸಾವಿರಾರು ಕಡೆ ಗಂಧರ್ವರು ಸಂಚರಿಸಿದ್ದಾರೆ.
*“गन्धर्वोऽस्य रसनामगृभ्नात्” ऋ० १,*
_ಋಗ್ವೇದದ ಈ ಮಂತ್ರದಲ್ಲಿ ಸೋಮನನ್ನು ಗಂಧರ್ವ ಹೆಸರಿನಿಂದ ಸ್ತುತಿಸಿದ್ದಾರೆ._
*ನರನ ತೋರಿಸಿದವಗೆ ಶತ ಸಾ
ಸಿರವ ಸೂಸುವೆನೆಂದಲಾ ನಿ
ನ್ನರಸನನು ಗಂಧರ್ವರೆಳೆದೊಯ್ದಂದು ಗಗನದಲಿ
ಅರಸಿಯರು ಸಚಿವರು ಕುಮಾರರು
ಮೊರೆಯಿಡಲು ಫಲುಗುಣನ ಬಿಡಿಸಿದ
ಪರಿಯ ನೀ ನೆರೆ ಕಂಡು ಮರೆವರೆ ಕರ್ಣ ಹೋಗೆಂದ (ಕರ್ಣ ಪರ್ವ, ೯ ಸಂಧಿ, ೯ ಪದ್ಯ)*_
_ಕರ್ಣಪರ್ವದ ಕುಮಾರವ್ಯಾಸಭಾರತದಲ್ಲಿ ಶಲ್ಯನು ಕರ್ಣನನ್ನು ಹಂಗಿಸುತ್ತಾ ಆಡುವ ಮಾತು. ಹಿಂದೆ ಗಂಧರ್ವರು ಬಂಧಿಸಿದಾಗ ಬಿಡಿಸದ-ಓಡಿಸದ ಆ ನಿನ್ನ ಪರಾಕ್ರಮ ಎಲ್ಲಿತ್ತು ಎಂದು!
_ಗಂಧರ್ವರ ದಯದಿಂದ ಲಲಿತ ಕಲೆಗಳಲ್ಲಿ ಪಟುತ್ವವೂ, ಸದಾ ಸುಗಂಧವೂ, ಸೂಕ್ತಿ ಮಾತ್ರ ಬಾಯಿಯಿಂದ ಹೊರಬರುವಂತೆ ಅನುಗ್ರಹಿಸಲೆಂದು ಬೇಡೋಣ._
ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ ಈ ಕೆಳಗಿನ ಕೊಂಡಿಗೆ
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ