ಪದಶಕ್ತಿ-೩೭
🏹*ಪದಶಕ್ತಿ* ---೩೭🌄
*ಅಗ್ನಿ*
_*ಅಂಗತಿ ಊರ್ಧ್ವಂ ಗಚ್ಛತಿ* ಎಂದರೆ ಮೇಲಕ್ಕೆ ಹೋಗುವಂತಹ ವಸ್ತುವೇ ಅಗ್ನಿ. ಬೆಂಕಿ ಉರಿದು ಎತ್ತರೆತ್ತರಕ್ಕೆ ಚಾಚುವುದು ಅದರ ಸಹಜತೆ._
_ಚಲನೆಯಿಲ್ಲದ ವಸ್ತುವಿಗೂ ಚಲನೆ ಕೊಡುವ ಕಾರಣ ಅಗ್ನಿ ಎಂದು ಇನ್ನೊಂದು ಅರ್ಥ._
_ಅಗ್ನಿ ಮುಖ್ಯವಾಗಿ ಮೂರು ವಿಧ. ಭೌಮ,ದಿವ್ಯ,ಜಾಠರ.
ಕಟ್ಟಿಗೆ ಮೊದಲಾದ ಉರುವಲುಗಳಿಂದ ಉರಿಸುವಂತಹ ಬೆಂಕಿ ಭೌಮ. ನೀರು-ಗಾಳಿ ಮೊದಲಾದವುಗಳ ಜೊತೆಗೆ ಹುಟ್ಟುವಂತಹದು ದಿವ್ಯ. ಮಿಂಚು ಮೊದಲಾದದ್ದು.
ಇವೆರಡಕ್ಕೂ ಊರ್ಧ್ವಗತಿ. ಮೂರನೆಯ ಅಗ್ನಿ ತಿಂದ ಆಹಾರ ಕರಗಿಸಿ ದೇಹದ ಉಷ್ಣಾಂಶವನ್ನು ರಕ್ಷಿಸುವಂತಹದು. ಇದು ಹೆಚ್ಚಾದರೆ ದೇಹಕ್ಕೆ ಸೇರಬೇಕಾದ ಎಲ್ಲವನ್ನೂ ಸುಟ್ಟು ಭಸ್ಮಕ ಎಂದು ಕರೆಸಿಕೊಳ್ಳುತ್ತದೆ._
_ನಿತ್ಯ ಆರಾಧಿಸುವ ಅಗ್ನಿಯು ಮೂರು ಕಾಲಕ್ಕೆ ಮೂರು ವಿಧ. ಆಹವನೀಯ-ದಕ್ಷಿಣ- ಗಾರ್ಹಪತ್ಯ._
_ಋಗ್ವೇದದಲ್ಲಿ ಸುಮಾರು ಇನ್ನೂರ ಐವತ್ತಕ್ಕೂ ಮೀರಿ ಸೂಕ್ತಗಳು ಈ ಅಗ್ನಿಯನ್ನು ಸ್ತುತಿಸಿವೆ. ಅಗ್ನಿಯನ್ನು ಹೊಗಳುವ ಮಂತ್ರಗಳು ಎಲ್ಲಾ ವೇದಗಳಲ್ಲೂ ಸಹಜವಾಗಿವೆ. ಅಗ್ನಿಯು ಬರೀ ವೇದಪರಂಪರೆಯವರಿಗೆ ಮಾತ್ರ ದೇವನಾಗಿರದೆ ಯಹೂದಿಯರಿಗೆ-ಪಾರ್ಸಿಗಳಿಗೆ- ಜ್ಯೂಗಳಿಗೆ- ರೋಮನ್ನರಿಗೆ ಹೀಗೆ ಹೆಚ್ಚಿನ ಧರ್ಮಗಳಲ್ಲಿ ಪೂಜ್ಯನಾಗಿರುವುದು ಅವನ ಮಹತ್ವಕ್ಕೆ ಸಾಕ್ಷಿ._
_ವೇದದ ನುಡಿಯಂತೆ ಹಿಂದೊಮ್ಮೆ ಅಗ್ನಿ ಕೋಪಿಸಿಕೊಂಡು ಲೋಕದಲ್ಲಿ ಅವ್ಯವಸ್ಥೆ ತೋರಿದಾಗ ದೇವತೆಗಳು ಅವನಿಗೂ ಅವನ ಮೂವರು ತಮ್ಮಂದಿರಿಗೂ ಹವಿರ್ಭಾಗ ಸಿಗುವಂತೆ ಮಾಡಿ ಸಮಾಧಾನಿಸಿದರು._
_ರುದ್ರನ ತೇಜಸ್ಸಿನಿಂದ ಜನಿಸಿದ ಇವನ ಸ್ವರೂಪ ವಿಚಿತ್ರ. ಎರಡು ತಲೆ-ಎರಡು ಮೂಗು-ಆರು ಕಣ್ಣು- ನಾಲ್ಕು ಕಿವಿ- ಮೂರು ಕಾಲು- ಏಳು ಕೈಗಳು-ಏಳು ನಾಲಿಗೆ- ನಾಲ್ಕು ಕೊಂಬುಗಳು. ಟಗರು ಇವನ ವಾಹನ.ಬಹುಶಃ ದೇವತೆಗಳಲ್ಲಿ ಅತ್ಯಂತ ವಿಚಿತ್ರ ರೂಪ ಇವನದ್ದೇ ಆಗಿದೆ._
_ಹೀಗೆ ಎಲ್ಲೆಡೆ ವ್ಯಾಪಿಸಿರುವ, ಎಲ್ಲರ ಪೂಜೆಗೆ ಪಾತ್ರನಾಗುವ ಅಗ್ನಿ ನಮ್ಮನ್ನೂ ಅವನಂತೆ ಎತ್ತರೆತ್ತರಕ್ಕೆ ಕರೆದೊಯ್ಯಲೆಂದು ಪ್ರಾರ್ಥಿಸೋಣ._
ಸಂಸ್ಕೃತ ಸಾಹಿತ್ಯದ ಸಾವಿರಾರು ಕಡೆ ಸ್ತುತಿಸಲ್ಪಟ್ಟ ಮಹಾದೇವ ಇವನು.
*“अग्निं दूतं वृणीमहे होतारं विश्ववेदस*
ಋಗ್ವೇದದ ಹಾಗೂ ಯಜುರ್ವೇದದ ಈ ಮಂತ್ರದಲ್ಲಿ ದೇವದೂತನಾದ ಅಗ್ನಿಯನ್ನು ನಮಿಸುವೆ ಎಂದಿದೆ.
*ಘಟದ ದೀವಿಗೆಯಂತೆ ಪಟದ ಚಿತ್ರದಂತೆಅಡವಿಯ ಅಗ್ನಿಯಂತೆ ನಿಜವನೆತ್ತಿ ತೋರಿದಂತೆ*
ಚಿದಾನಂದ ಅವಧೂತರ ಈ ಕೀರ್ತನೆಯಲ್ಲಿ ಅಂತರಾತ್ಮನು ಅಡವಿಯ ಅಗ್ನಿಯಂತೆ ವ್ಯಾಪಿಸಿದಾಗ ತೋರುವನೆಂದಿದ್ದಾರೆ. ನಮ್ಮ ಬದುಕಿನಲ್ಲಿ ಅಗ್ನಿಯ ಅನುಗ್ರಹ ವ್ಯಾಪಿಸಲಿ ಎಂದು ಆಶಿಸೋಣ.
ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ ಈ ಕೆಳಗಿನ ಕೊಂಡಿಗೆ
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ