ರಾಮಾಯಣ-೧೬೧

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೧🏝📖     

*ತಸ್ಯ ವ್ಯತಿಕ್ರಮಾದ್ರಾಜ್ಞೋ ಭವಿಷ್ಯತಿ ಸುದಾರುಣಾ ಅನಾವೃಷ್ಟಿಃ ಸುಘೋರಾ ವೈ ಸರ್ವಭೂತದಯಾವಹಾ*

_ಸೂತನಾದ ಸುಮಂತ್ರನು ದಶರಥನಿಗೆ ಋಷ್ಯಶೃಂಗನ ಕಥೆ ಹೇಳುತ್ತಾ ನುಡಿಯುವ ಮಾತು. ಮಹಾಬಲಶಾಲಿಯಾದ ರೋಮಪಾದನು ಅಂಗದೇಶವನ್ನು ಆಳುತ್ತಿದ್ದಾಗ ಧರ್ಮವ್ಯತಿಕ್ರಮ ಆಚರಿಸಿದ ಕಾರಣ ಅನಾವೃಷ್ಟಿ ತಲೆದೋರಿತು. ರೋಮಪಾದನು ಬಹಳ ಅಧ್ಯಯನ ನಡೆಸಿದ್ದನು ಹಾಗೂ ಒಳ್ಳೆಯ ರೀತಿಯಲ್ಲಿ ರಾಜ್ಯವಾಳುತ್ತಿದ್ದನು. ಆದರೂ ಯಾವುದೋ ಸಂದರ್ಭದಲ್ಲಿ ಅವನು ಮಾಡಿದ ಅನರ್ಥ ಇಡೀ ದೇಶಕ್ಕೆ ಗಂಡಾಂತರ ತಂದುಕೊಟ್ಟಿತು. ರಾಜನ ಒಂದು ಅನರ್ಥ ಲಕ್ಷಾಂತರ ಪ್ರಜೆಗಳ, ಜೀವಿಗಳ ಪ್ರಾಣಕ್ಕೆ ಕುತ್ತು ತಂದಿತು. ಹಾಗಾಗಿ ನಾವು ರಾಜನನ್ನು ಆಯ್ಕೆ ಮಾಡುವಾಗ ಧರ್ಮಿಷ್ಠರನ್ನು ಆರಿಸುವುದು ನಮ್ಮ ಕ್ಷೇಮಕ್ಕಾಗಿ ತುಂಬಾ ಆವಶ್ಯಕ. ಧರ್ಮ ಮೀರಿ ನಡೆಯುವನೆಂದರೆ ನಾವೇ ಮುಂದೆ ಕಷ್ಟ ಅನುಭವಿಸಬೇಕು ಎಂದು ಅರ್ಥ._

*ಭವಂತಃ ಶ್ರುತಧರ್ಮಾಣೋ ಲೋಕಚಾರಿತ್ರವೇದಿನಃ ಸಮಾದಿಶಂತು ನಿಯಮಂ ಪ್ರಾಯಶ್ಚಿತ್ತಂ ಯಥಾ ಭವೇತ್*

_ತಪ್ಪು ಮಾಡಿ ಅದನ್ನು ತಿದ್ದಿಕೊಳ್ಳುವ ಮನಸ್ಸು ರೋಮಪಾದನಿಗಿತ್ತು. ಹಾಗಾಗಿ ಜ್ಞಾನಿಗಳನ್ನು ಕರೆದು ಹೀಗೆ ಅರಿಕೆ ಮಾಡಿಕೊಳ್ಳುತ್ತಾನೆ- ನಾನು ತಪ್ಪೆಸಗಿದ್ದು ಹೌದು, ನೀವು ಅದನ್ನು ಅರಿತಿರುವಿರಿ, ನನ್ನ ತಪ್ಪಿಗೆ ಸರಿಯಾದ ಪ್ರಾಯಶ್ಚಿತ್ತ ವಿಧಿಸಿರಿ. ಏನು ಮಾಡಿದರೆ ಧರ್ಮವ್ಯತಿಕ್ರಮದ ದೋಷ ಪರಿಹಾರ ಆಗುವುದೋ ಅಂತಹ ಕರ್ಮವನ್ನು ನನಗೆ ನಿರ್ದೇಶಿಸಿ. ಆ ಕೂಡಲೇ ಆ ಜ್ಞಾನಿಗಳು ವಿಭಾಂಡಕನ ಮಗನಾದ ಋಷ್ಯಶೃಂಗನು ನಿನ್ನ ರಾಜ್ಯಕ್ಕೆ ಬಂದರೆ ನಿನ್ನ ಪಾಪ ಪರಿಹಾರವಾಗುವುದು ಎನ್ನುತ್ತಾರೆ. ಮನೆಗೆ ಅಥವಾ ಊರಿಗೆ ಮಹಾಜ್ಞಾನಿಗಳು ಬರುವುದೇ ಒಂದು ಯೋಗ. ನಾವಾಗಿ ಕರೆದು ಬಂದರೆ ತುಂಬಾ ಒಳ್ಳೆಯದು. ಕರೆಯದೆಯೂ ಆಕಸ್ಮಿಕವಾಗಿ ಬಂದರೆ ನಮ್ಮೆಲ್ಲಾ ಪಾಪಗಳ ಪರಿಹಾರಕ್ಕಾಗಿಯೇ ಬಂದವರೆಂದು ತಿಳಿದು ಆದರಿಸಬೇಕು. ಅವರು ಯಾವುದೇ ಆಶ್ರಮದಲ್ಲಿರಲಿ( ಬ್ರಹ್ಮಚರ್ಯ, ಗೃಹಸ್ಥ ಇತ್ಯಾದಿ) ಯಾವ ವರ್ಣದವರೇ ಆಗಿರಲಿ ಶ್ರೇಷ್ಠ ಜ್ಞಾನಿಗಳು ಎಂದರೆ ನಮ್ಮ ಪಾಪ ಕಳೆಯಲೆಂದೇ ಅವರ ಆಗಮನ ಎಂದು ಭಾವಿಸಿ ಸತ್ಕರಿಸಬೇಕು._

_ಇದಲ್ಲದೆ ಅವನು ಬಂದ ಕೂಡಲೇ ನಿನ್ನ ಕನ್ಯೆ ಶಾಂತೆಯನ್ನು ಕೊಟ್ಟು ಮದುವೆ ಮಾಡಿಬಿಡು. ಇದರಲ್ಲಿ ಮತ್ತೊಂದು ಯೋಚನೆಯೇ ಇಲ್ಲ ಎನ್ನುತ್ತಾರೆ. ವರ್ಣ ಬೇರೆಯಾದರೂ ಅಲ್ಲಿ ಜ್ಞಾನಕ್ಕೆ ಮತ್ತು ಋಷ್ಯಶೃಂಗನ ಉನ್ನತ ವ್ಯಕ್ತಿತ್ವಕ್ಕೆ ಮಾತ್ರ ಗೌರವ. ಕ್ಷತ್ರಿಯ ರಾಜಮನೆತನದ ಕನ್ಯೆ, ಆ ತಪಸ್ವಿಯನ್ನು ಹೇಗೆ ವರಿಸುವಳೋ ಎಂದೆಲ್ಲಾ ಯೋಚನೆ ಬಹುಶಃ ರಾಜನಿಗೂ ಬಂದಿಲ್ಲ. ವರ್ಣಗಳ ಹೊರಗೂ ಇಂತಹ ಕಾರಣಗಳಿಂದ ಲೋಕಕ್ಷೇಮದ ಉದ್ದೇಶದಿಂದ ವಿವಾಹ ನಡೆದರೆ ಅದು ಸಾಧುವಾಗುತ್ತದೆ. ಹಾಗಲ್ಲದೆ ನಾಲ್ಕು ದಿನ ಒಟ್ಟಿಗಿದ್ದರೆಂದು, ದೇಹಸಂಪರ್ಕ ಬೆಳೆಸಿದರೆಂದೋ, ಒಂದೇ ವೃತ್ತಿಯವರೆಂದೋ, ಒಟ್ಟಿಗೆ ಕಲಿತವರೆಂದೋ ಮದುವೆ ಒಪ್ಪುವಂತಹದಲ್ಲ. ಅಂತಹ ಸಂದರ್ಭದಲ್ಲಿ ಅಂತಹ ಸಂಬಂಧ ಬಿಟ್ಟು ಬರಲೂ ಶಾಸ್ತ್ರದ ಸಮ್ಮತಿ ಇದೆ._






ಮುಂದುವರಿಯುತ್ತದೆ.....

ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩