ರಾಮಾಯಣ-೧೬೨
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೨🏝📖
*ಋಷ್ಯಶೃಂಗೋ ವನಚರಸ್ತಪಃಸ್ವಾಧ್ಯಾಯನೇ ರತಃ | ಅನಭಿಜ್ಞಃ ಸ ನಾರೀಣಾಂ ವಿಷಯಾಣಾಂ ಸುಖಸ್ಯ ಚ||*
_ದಶರಥನು ಋಷ್ಯಶೃಂಗನನ್ನು ಕರೆತಂದ ಬಗೆಯನ್ನು ವಿವರಿಸಬೇಕೆಂದು ಸುಮಂತ್ರನಲ್ಲಿ ಕೇಳಿದಾಗ ಸುಮಂತ್ರ ವಿವರಿಸುತ್ತಿದ್ದಾನೆ. ಈ ಸುಮಂತ್ರ ಸೂತ ಹಾಗೂ ಮಂತ್ರಿಯೂ ಹೌದು. ಸನತ್ಕುಮಾರನ ಬಳಿ ಈ ಆಖ್ಯಾನ ಅವನು ಕೇಳಿದನೆಂದರೆ ಅವನ ಜ್ಞಾನ ಎಷ್ಟಿತ್ತೆಂದು ನಾವು ಊಹಿಸಬಹುದು. ದಶರಥನಿಗೂ ಮಿಗಿಲಾದ ಜ್ಞಾನ ಅವನಿಗಿತ್ತು. ಹಾಗಾಗಿ ಜ್ಞಾನ ಸಂಪಾದನೆಗೆ ಜಾತಿ- ಮತ- ಧನ ಎಂದಿಗೂ ಕಾರಣವಲ್ಲ. ಅದೊಂದು ಭ್ರಮೆ ಅಷ್ಟೇ. ಋಷ್ಯಶೃಂಗನ ದಿನಚರಿ ಹೇಗಿತ್ತೆಂದರೆ ಈಗಿನ ಕಾಲದ ನಮ್ಮ ಕಲ್ಪನೆಗೂ ಬರಲಾರದು. ಯಾವ ಸ್ತ್ರೀಯನ್ನೂ ಅವನು ಈವರೆಗೆ ನೋಡಿಲ್ಲ. ಕಾಡಿನಲ್ಲಿ ಸಂಚಾರ, ತಪಸ್ಸು, ಸ್ವಾಧ್ಯಾಯ, ಅಧ್ಯಯನ ಇವುಗಳಲ್ಲೇ ನಿರತನು ಅವನು. ವಿಷಯಗಳಾದ ರೂಪ-ರಸ-ಗಂಧ-ಶಬ್ದ-ಸ್ಪರ್ಶಗಳ ಸುಖವೇನೆಂದೇ ಅವನಿಗೆ ಗೊತ್ತಿಲ್ಲ. ಇದು ರುಚಿ, ಇದು ಚಂದ, ಇದು ಇಂಪು, ಇದು ತಂಪು, ಇದು ಪರಿಮಳ ಎನ್ನುವ ಭೇದ ಅವನಿಗೆ ತಿಳಿದಿಲ್ಲ. ತನಗೆ ಸಿಕ್ಕಿರುವಲ್ಲೇ ಆನಂದ ಅನುಭವಿಸುತ್ತಾ ಆನಂದರೂಪಿಯಾಗಿ ವಿಹರಿಸುತ್ತಿದ್ದಾನೆ. ಹಾಗಾಗಿಯೇ ಅವನ ಶಕ್ತಿ ಬರಗಾಲದಲ್ಲೂ ಅತಿವೃಷ್ಟಿ ಬರಿಸುವಷ್ಟಿದೆ. ನಾವೂ ಋಷ್ಯಶೃಂಗನ ದಾರಿ ಸ್ವಲ್ಪ ಕ್ರಮಿಸಿದರೂ ಬಹುಶಃ ನಮ್ಮ ಗಮನಾಗಮನಗಳು ಒಳಿತನ್ನು ಉಂಟು ಮಾಡಿಯಾವು._
*ಪಿತುಃ ಸ ನಿತ್ಯಸಂತುಷ್ಟೋ ನಾತಿಚಕ್ರಾಮ ಚಾಶ್ರಮಾತ್*
_ವೇಶ್ಯೆಯರು ಅವನಿಗಾಗಿ ಕಾದರೂ ತಂದೆಯ ಆಜ್ಞಾಪಾಲನೆಯಲ್ಲಿ ರತನಾಗಿ ನಿತ್ಯಸಂತೋಷಿಯಾದ ಅವನಿಗೆ ಆಶ್ರಮದಿಂದ ಹೊರಹೋಗುವ ಸಂದರ್ಭವೇ ಬಂದಿಲ್ಲ.ಯೋಗಿಯ ಲಕ್ಷಣಗಳಲ್ಲೊಂದು ಸದಾ ಸಂತೋಷ. ಆಶ್ರಮದಿಂದ ಹೊರಹೋಗದೆಯೂ ಸಂತೋಷ ಮನಸ್ಕನಾದ ಅವನ ಆಧ್ಯಾತ್ಮಿಕ ಎತ್ತರ ನಮಗೆ ಊಹಿಸಲೂ ಕಷ್ಟ._
*ಆಗತಾನಾಂ ತತಃ ಪೂಜಾಮೃಷಿಪುತ್ರಶ್ಚಕಾರ ಹ | ಇದಮರ್ಘ್ಯಮಿದಂ ಪಾದ್ಯಮಿದಂ ಮೂಲಮಿದಂ ಫಲಮ್||*
_ಅತಿಥಿ ಸತ್ಕಾರಕ್ಕೆ ವೈದಿಕ ಧರ್ಮ ಕೊಟ್ಟಷ್ಟು ಮಹತ್ವ ಬಹುಶಃ ಬೇರೆಲ್ಲೂ ಸಿಗುವುದಿಲ್ಲ. ಬಂದವರು ಯಾರೇ ಆಗಿರಲಿ ಅವರನ್ನು ಸತ್ಕರಿಸುವುದು ತನ್ನ ಕರ್ತವ್ಯ ಎಂಬ ಉಪದೇಶ ವಿಭಾಂಡಕಸುತನಿಗೆ. ತಾನು ಈವರೆಗೆ ಕಾಣದ ಜನರು ಬಂದಿದ್ದಾರೆ, ಅವರ ಪೂರ್ವಾಪರ ವಿಚಾರಿಸಬೇಕು ಇತ್ಯಾದಿ ಯಾವ ಭಾವವೂ ಇಲ್ಲದೆ ಇಗೊಳ್ಳಿ ಅರ್ಘ್ಯ ಎಂದು ಕೈ ತೊಳೆಯಲು ಪರಿಮಳದ ಗಂಧೋದಕ, ಕಾಲು ತೊಳೆಯಲು ನೀರು, ತಿನ್ನಲು ಕಂದಮೂಲಗಳನ್ನು ಸಮರ್ಪಿಸಿ ವಿನೀತನಾಗಿ ಅವರೆದುರು ನಿಂತ. ಬಹುಶಃ ವೇಶ್ಯೆಯರು ಆವರೆಗೆ ಅಂತಹ ಸತ್ಕಾರ ಪಡೆದಿರಲಿಲ್ಲವೇನೋ! ಅವರೂ ಸಂತೋಷದಿಂದ ಸ್ವೀಕರಿಸಿದರು. ಈ ಆತ್ಮೀಯತೆ ಪ್ರತಿಯೊಬ್ಬರಲ್ಲೂ ಬಂದಾಗ ಲೋಕದಲ್ಲಿ ಧರ್ಮ ನೆಲೆನಿಂತಿತೆಂದೇ ಅರ್ಥ._
_ವಿಭಾಂಡಕ ಮುನಿಯೊಮ್ಮೆ ಮಹಾಭೂತವೆಂಬ ಸರೋವರದಲ್ಲಿ ಪುಣ್ಯಸ್ನಾನ ಮಾಡುತ್ತಿದ್ದಾಗ ವಿಮಾನದಲ್ಲಿ ಸಂಚರಿಸುತ್ತಿದ್ದ ಊರ್ವಶಿ ಕಣ್ಣಿಗೆ ಬಿದ್ದಳು. ರೇತಸ್ಸು ಜಾರಿತು. ನೀರು ಕುಡಿಯಲೆಂದು ಬಂದ ಹೆಣ್ಣು ಜಿಂಕೆಯೊಂದು ರೇತಸ್ಸನ್ನೂ ಕುಡಿದು ಗರ್ಭ ಧರಿಸಿ ಜಿಂಕೆಯ ಕೊಂಬಿನ ಮನುಷ್ಯನಿಗೆ ಜನ್ಮ ನೀಡಿತು. ತಪಸ್ವಿಗಳ ಆಕಸ್ಮಿಕ ತಪ್ಪೂ ಲೋಕಕಲ್ಯಾಣಕ್ಕೆ ಹೇತುವಾಗುತ್ತದೆ. ಹಾಗಾಗಿ ನಿರಂತರ ತಪಸ್ಸು ನಮ್ಮ ತಪ್ಪುಗಳನ್ನು ಕಡಿಮೆ ಮಾಡುತ್ತದೆ._
ಮುಂದುವರಿಯುತ್ತದೆ.....
ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ