ಪದಶಕ್ತಿ-೩೮
🏹*ಪದಶಕ್ತಿ* ---೩೮🌄
_*ವೈಶ್ವಾನರ*_
_ಅಗ್ನಿಯ ಇನ್ನೊಂದು ಹೆಸರಿನ ಬಗ್ಗೆ ಇವತ್ತು ನೋಡೋಣ. *ವಿಶ್ವಶ್ಚಾಸೌ ನರಶ್ಚ* ಎಂಬಂತೆ ವಿಶ್ವದ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇರುವವನಾದ್ದರಿಂದ ಇವನು ವೈಶ್ವಾನರ._
_ಉದರದಲ್ಲಿನ ಆಹಾರ ಜೀರ್ಣವಾಗಲು ವೈಶ್ವಾನರ ಎಂಬ ಬೆಂಕಿ ಮುಖ್ಯ ಕಾರಣ. ಜಿಡ್ಡು ಈ ಅಗ್ನಿಯನ್ನು ಜಾಗೃತವಾಗಿ ಇಡುತ್ತದೆ. ಎಣ್ಣೆ- ತುಪ್ಪ ಮೊದಲಾದವುಗಳ ಸೇವನೆ ಇದೇ ಕಾರಣದಿಂದ ಮಾಡುವಂತಹದು._
_*ವಿಶ್ವಾನ್ನರಾನ್ ಇತಃ ನಯತಿ* ಜನರನ್ನು ಇಲ್ಲಿಂದ ಇನ್ನೊಂದು ಲೋಕಕ್ಕೆ ಕರೆದೊಯ್ಯುವುದು ಎಂಬ ಅರ್ಥದಲ್ಲಿ ಬೆಂಕಿಗೆ ವೈಶ್ವಾನರ ಎಂಬ ಹೆಸರು. ದಹನ ಮಾಡಿದಾಗ ಆತ್ಮವು ಶರೀರದ ವ್ಯಾಮೋಹ ತೊರೆದು ಇನ್ನೊಂದು ಕಡೆ ಪ್ರಯಾಣ ಬೆಳೆಸಲು ಅಗ್ನಿ ಮುಖ್ಯ ಕಾರಣ._
_*ವಿಶ್ವಾನ್ ಜಂತೂನ್ ನಯತಿ* ಜೀವಿಗಳಿಗೆ ಪ್ರಲಯಕಾಲದಲ್ಲಿ ಒಂದು ಗತಿ ಕಾಣಿಸುವ ಮುಖ್ಯ ಸಾಧನಗಳಲ್ಲಿ ಒಂದು ಬೆಂಕಿ. ಹಾಗಾಗಿ ವೈಶ್ವಾನರ._
_*ವಿಶ್ವಾನರಸ್ಯ ಅಪತ್ಯಂ ಇತಿ* ವೈಶ್ವಾನರ. ಎಲ್ಲಾ ಜೀವಿಗಳಲ್ಲಿ ವಿಶ್ವಾನರ ಎಂಬ ಪ್ರಾಣವಾಯುವಿನಿಂದ ಜನಿಸುವುದು ಈ ವೈಶ್ವಾನರ. ಗೀತೆಯಲ್ಲಿ ಇದನ್ನೇ ಹೇಳಿದ್ದು- *# ಅಹಂ ವೈಶ್ವಾನರೋ ಭೂತ್ವಾ#* ಭಗವಂತನು ವೈಶ್ವಾನರನಾಗಿ ಜೀವಿಗಳ ಭಕ್ಷ್ಯ- ಭೋಜ್ಯ- ಲೇಹ್ಯ- ಚೋಷ್ಯಗಳೆಂಬ ನಾಲ್ಕು ವಿಧದ ಅನ್ನವನ್ನು ಜೀರ್ಣಮಾಡುತ್ತಾನೆ ಅಥವಾ ತಿನ್ನುತ್ತಾನೆ._
_ಚಿತ್ರಕ ಎಂಬ ಮರಕ್ಕೂ ವೈಶ್ವಾನರ ಎಂಬ ಹೆಸರಿದೆ. ಬಹುಶಃ ಆ ಮರ ಉರಿಯುವ ಬೆಂಕಿಯಂತೆ ಹೂವು ಅರಳಿದಾಗ ಕಾಣುವುದು ಇದರ ಕಾರಣ ಇರಬೇಕು._
ಕನ್ನಡ ಸಾಹಿತ್ಯದಲ್ಲಿ ವೈಶ್ವಾನರ ಶಬ್ದ ಬಹಳ ಕಡೆ ಕಾಣಬಹುದು.
*ಆಹಾರವರ್ಜಿಪುದ್ಯಾಕೋಮಂದಮತಿಗಳು ಕೂಡಿಯೆ ನೀನುಮಂದಮತಿಯಾದೆಯಾಕೋದೇಹದಿವೈಶ್ವಾನರನಿರಲಿಕೆದೇಹವದಂಡಿಪುದ್ಯಾಕೋಮಹಾವ್ರತವೆಂದುಮೊಸರ ಬಿಟ್ಟು ಮಣ್ಣನೆ ಮುಕ್ಕುವಿಯಾಕೋನಿತ್ಯಾತ್ಮನು ಚಿದಾನಂದತಾನಿರೆನಿರಾಹಾರವದ್ಯಾಕೋಮತ್ತೇಕಾದಶಿಶಿವರಾತ್ರೆನ್ನುತಬಿಣ್ಣನೆಬಳಲುವಿಯಾಕೋ*
_ಭಗವಂತನ ಸನ್ನಿಧಿ ಇರುವಾಗ ದೇಹದಂಡಿಸಿ ಅವನಿಗೇಕೆ ಉಪವಾಸ ವಿಧಿಸುವೆ ಎಂದು ಚಿದಾನಂದ ಅವಧೂತರು ಭಗವಂತನ ಕಂಡವರಿಗೆ ವ್ರತಗಳ ಹಂಗಿಲ್ಲ ಎಂದು ಸಾರಿದ್ದಾರೆ._
*अग्निर्व्वैश्वानरो नाम प्राणापानौ तथाश्विनौ*
_ವರಾಹ ಪುರಾಣದ ಈ ವಾಕ್ಯವು ಸೃಷ್ಟಿ ಪ್ರಕ್ರಿಯೆ ವಿವರಿಸುತ್ತಾ ವೈಶ್ವಾನರ ರೂಪದಲ್ಲಿ ಅಗ್ನಿಯಾಗಿ ನಾನು ಅವತರಿಸುತ್ತೇನೆ ಎಂದು ಭಗವಂತನ ಮಾತು._
_ಅಜೀರ್ಣವೇ ಎಲ್ಲಾ ರೋಗಗಳಿಗೆ ಮೂಲ ಕಾರಣ ಎನ್ನುವುದು ವೈದ್ಯರ ಮಾತು. ಆಹಾರ ಜೀರ್ಣ ಮಾಡಿ ನಮ್ಮನ್ನು ಅನಾಮಯರನ್ನಾಗಿಸು ಎಂದು ವೈಶ್ವಾನರನನ್ನು ಧ್ಯಾನಿಸೋಣ._
ತಪ್ಪುಗಳಿದ್ದರೆ ತಿದ್ದಿ.
ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ ಈ ಕೆಳಗಿನ ಕೊಂಡಿಗೆ
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ