ರಾಮಾಯಣ-೧೫೯

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೯🏝📖    

*ಚಿಂತಯಾನಸ್ಯ ತಸ್ಯೇಯಂ ಬುದ್ಧಿರಾಸೀನ್ಮಹಾತ್ಮನಃ | ಸುತಾರ್ಥೀ ಹಯಮೇಧೇನ ಕಿಮರ್ಥಂ ನ ಯಜಾಮ್ಯಹಮ್ ||*

_ಎಲ್ಲಾ ರೀತಿಯಿಂದಲೂ ಸಮೃದ್ಧವಾಗಿದ್ದ ಅಯೋಧ್ಯೆಯಲ್ಲಿ ರಾಜನಾದ ದಶರಥನ ಮನದಲ್ಲಿ ಒಮ್ಮೆ ಇಂತಹ ಯೋಚನೆ ಮೂಡಿತು. ಕ್ಷತ್ರಿಯರಿಗೆ ಯೋಗ್ಯವಾದ ಯಜ್ಞಗಳಲ್ಲಿ ರಾಜಸೂಯ, ಅಶ್ವಮೇಧ, ವಿಶ್ವಜಿತ್ ಮೊದಲಾದವು ಪ್ರಮುಖವಾದವು. ಇವುಗಳಲ್ಲಿ ಪುತ್ರಾರ್ಥಿಯಾಗಿ ಅಶ್ವಮೇಧ ಯಾಗವನ್ನು ಮಾಡಬೇಕೆಂದು ನಿಶ್ಚಯಿಸಿದನು. ಇದನ್ನು ನೋಡಿದರೆ ಚಕ್ರವರ್ತಿ ಆಗಬೇಕೆಂದು ಅಥವಾ ತನ್ನ ಪರಾಕ್ರಮ ತೋರಬೇಕೆಂಬ ಇಚ್ಛೆ ಮಾತ್ರವಲ್ಲದೆ ಬೇರೆ ಕಾಮನೆಗಳ ಈಡೇರಿಕೆಗೂ  ಅಶ್ವಮೇಧ ಮಾಡಬಹುದೆಂಬ ಸಂಗತಿ ತಿಳಿಯುತ್ತದೆ._

*ಪಾಪ್ಮಾನಂ ತರತಿ ತರತಿ ಬ್ರಹ್ಮಹತ್ಯಾಂ ಯೋಶ್ವಮೇಧೇನ ಯಜತೇ* ಯಜುರ್ವೇದ ಸಂಹಿತೆ

*ರಾಜಾ ಸಾರ್ವಭೌಮೋಶ್ವಮೇಧೇನ ಯಜೇತ* ಸ್ಮೃತಿ

_ಇವೆರಡನ್ನು ಗಮನಿಸಿದಾಗ ಪಾಪ ಪರಿಹಾರಕವಾಗಿ ಹಾಗೂ ಸಾರ್ವಭೌಮತ್ವ ಪ್ರತಿಪಾದನೆ ಹೀಗೆ ಎರಡೂ ಕಾರಣಗಳಿಂದ ಹಯಮೇಧ ಮಾಡಬಹುದೆನ್ನುವುದು ಸ್ಪಷ್ಟವಾಗಿ ತೋರುತ್ತದೆ. ಕ್ಷತ್ರಿಯರಿಗೆ ಮಾತ್ರ ಏಕೆಂದರೆ ಯುದ್ಧ ಮಾಡುವ ಸಾಮರ್ಥ್ಯ ಹಾಗೂ ಆಡಳಿತ ನಡೆಸುತ್ತಿದ್ದುದು ಅವರು ಮಾತ್ರ._

*ಸರ್ವಥಾ ಪ್ರಾಪ್ಸ್ಯಸೇ ಪುತ್ರಾನಭಿಪ್ರೇತಾಂಶ್ಚ ಪಾರ್ಥಿವ | ಯಸ್ಯ ತೇ ಧಾರ್ಮಿಕೀ ಬುದ್ಧಿರಿಯಂ ಪುತ್ರಾರ್ಥಮಾಗತಾ||*

_ದಶರಥನ ಮಾತಿನಿಂದ ತುಂಬಾ ಸಂತೋಷಗೊಂಡ ವಸಿಷ್ಠ ಜಾಬಾಲ ಮೊದಲಾದವರು ಹೀಗೆಂದರು- ಯಜ್ಞ ಸಿದ್ಧತೆಗಳೆಲ್ಲ ಸರಯೂ ನದೀತೀರದಲ್ಲಿ ಈಗಿಂದೀಗಲೇ ಆರಂಭವಾಗಲಿ. ನಿಶ್ಚಯವಾಗಿಯೂ ನಿನಗೆ ಪುತ್ರರು ಜನಿಸುತ್ತಾರೆ‌. ಏಕೆಂದರೆ ಅಶ್ವಮೇಧ ಯಾಗ ಮಾಡಬೇಕೆಂಬ ಧರ್ಮಬುದ್ಧಿ ಅದೂ ಪುತ್ರಕಾಮಿಯಾಗಿ ನಿನಗೆ ಉಂಟಾಗಿದೆಯೆಂದರೆ ಅದು ವಿಧಿಸಂಕಲ್ಪ. ಅಂತಹ ಸತ್ಸಂಕಲ್ಪವೇ ಸತ್ಕಾಮನೆಯನ್ನು ಪೂರೈಸುತ್ತದೆ. *ಸಂಕಲ್ಪಪ್ರಭವಾನ್ ಕಾಮಾನ್* ಎಂಬುದು ಗೀತೆಯ ಮಾತು. ನಮ್ಮ ಸಂಕಲ್ಪದಿಂದಲೇ ಕಾಮನೆಗಳು ಹುಟ್ಟುವಂಥಹವು ಹಾಗೂ ಅವುಗಳ ಈಡೇರಿಕೆಗೆ ಪ್ರಯತ್ನ ಮಾಡುವುದು. ಆ ಸಂಕಲ್ಪದಲ್ಲಿ ಲೋಕಕಲ್ಯಾಣದ ಬುದ್ಧಿ ಇದ್ದರೆ ಎಂತಹ ಕಾಮನೆಯೂ ಈಡೇರುವುದು ನಿಶ್ಚಿತ. ಅಶ್ವಮೇಧದಂತಹ ಒಂದು ಯಜ್ಞ ನಡೆಯಿತೆಂದರೆ ದುಷ್ಟರ ದಮನ, ಸಂಪತ್ತಿನ ವಿನಿಯೋಗ, ಅನ್ನದಾನ, ಅನೇಕ ಗ್ರಾಮಗಳ ಉದ್ಧಾರ ನಡೆಯುವ ಕಾರಣ ಒಂದು ಅಶ್ವಮೇಧ ನಡೆಯಿತೆಂದರೆ ಧರ್ಮದ ಪ್ರಸಾರ, ಜನರ ಸುರಕ್ಷೆ ಇವೆರಡೂ ದೃಡವಾಗುತ್ತದೆ. ಹಾಗಾಗಿ ಅಂತಹ ಮಹತ್ಕಾರ್ಯ ನಡೆದಾಗ ನಮ್ಮ ಕಾಮನೆಗಳೂ ಈಡೆರುತ್ತವೆ._


ಮುಂದುವರಿಯುತ್ತದೆ.....

ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩