🌹ಮೇಘದೂತದ ಒಂದು ಮಧುಬಿಂದು 🌹

*आनन्दोत्थं नयनसलिलं यत्र नान्यैर्निमित्तै: नान्यस्ताप: कुसुमशरजादिष्टसंयोगसाध्यात् | नाप्यन्यस्मात्प्रणयकलहाद्विप्रयोगोपपत्तिर्वित्तेशानान्न च खलु वयो यौवनादन्यदस्ति ||*

_ಜೀಮೂತನೇ, ನೀನು ಆ ಅಲಕೆಯಲ್ಲಿ ಸಂಚರಿಸುವಾಗ ಅನೇಕ ಅಚ್ಚರಿಗಳನ್ನು ಕಾಣುವೆ. ಆ ಪಟ್ಟಣದಲ್ಲಿ ದೊಡ್ಡ ಶ್ರೀಮಂತರಾದ ಯಕ್ಷರಿಗೆ ಆನಂದಬಾಷ್ಪರೂಪವಾದ ಕಣ್ಣೀರು ಬಂದೀತೆ ಹೊರತು ದುಃಖನಿಮಿತ್ತಕವಾದ ಕಣ್ಣೀರಲ್ಲ. ಜನ್ಮತಃ ಸುಖಿಗಳಾದ ಅವರಿಗೆ ದುಃಖವೆಂದಿಗೂ ಕಾಡದು. ಕಣ್ಣೀರು ಬರುವುದಾದರೆ ಅದು ಆನಂದದ ಪರಾಕಾಷ್ಠೆಯ ಬಾಷ್ಪವೇ ಹೊರತು ಅನ್ಯ ಕಾರಣಗಳಿಗೆ ಅಲ್ಲ‌. ಪ್ರಿಯಜನರ ಸಮಾಗಮದಿಂದ ಮಾತ್ರ ಹೋಗಲಾಡಿಸಲು ಸಾಧ್ಯವಾದ ಮನ್ಮಥನ ಶರದಿಂದ ಉಂಟಾದ ಸಂತಾಪ ಅವರನ್ನು ಕಾಡುವುದೇ ಹೊರತು ಅನ್ಯ ನಿಮಿತ್ತಕವಾದ ಸಂತಾಪವಲ್ಲ. ಪ್ರಿಯರ ವಿರಹದಿಂದ ಅವರು ಬೇಸರಿಸಿಕೊಳ್ಳುತ್ತಾರೆ. ಯಾವಾಗಲೂ ಅಂಟಿಕೊಂಡಿರುವಂತೆ ಒಟ್ಟಿಗೇ ಇರುತ್ತಾರೆ. ಸ್ವಲ್ಪ ದೂರ ಹೋದರೂ ಅಥವಾ ಸ್ವಲ್ಪ ಕಾಲ ಅಗಲಿದರೂ ಬಹಳ ಬೇಸರಿಸುತ್ತಾರೆ. ಪ್ರಣಯಕಾಲದಲ್ಲುಂಟಾದ ಕಲಹಗಳಿಂದ ವಿರಹ ಉಂಟಾಗಬಹುದೇ ಹೊರತು ಬೇರೆ ಕಾರಣಗಳಿಂದಲ್ಲ. ಅಕಾಲಿಕ ಮರಣ ರೋಗ ಮುಂತಾದವು ಬಾಧಿಸದ ಕಾರಣ ಅವರ ಅಗಲುವಿಕೆ ಕಲಹದಿಂದ ಮಾತ್ರ ಸಾಧ್ಯವಾಗುವಂತಹದ್ದು. ಇನ್ನು ಅವರೆಂದಿಗೂ ಮುಪ್ಪು ಪಡೆಯಲಾರರು. ಅವರ ವಯಸ್ಸು ತಾರುಣ್ಯವನ್ನು ಮೀರುವುದೇ ಇಲ್ಲ. ಸದಾಕಾಲ ತರುಣರಾಗಿಯೇ ಇರುವರು. ಹೀಗೆ ದುಃಖಗಳಿಲ್ಲದ, ಬೇಸರವಿಲ್ಲದ, ಕಣ್ಣೀರಿಲ್ಲದ, ಮಾತ್ಸರ್ಯಾದಿ ದೋಷ ಪೀಡಿತವಾಗದ , ಎಂದೆಂದಿಗೂ ತರುಣಾವಸ್ಥೆಯಲ್ಲಿ ಆನಂದದಿಂದ ವಿಹರಿಸುತ್ತಿರುವ ಅಲಕೆಯ ಸೌಂದರ್ಯವನ್ನು ನೋಡಿ ನಿಜಕ್ಕೂ ನೀನು ವಿಸ್ಮಿತನಾಗುವೆ._

📜 ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩