🌹ಮೇಘದೂತದ ಒಂದು ಬಿಂದು🌹

*नीवीबन्धोच्छ्वसितशिथिलं यत्र बिम्बाधराणां क्षौमं रागादनिभृतकरेष्वाक्षिपत्सु प्रियेषु | अर्चिस्तुङ्गानभिमुखमपि प्राप्य रत्नप्रदीपान् ह्रीमूढानां भवति विफलप्रेरणा चूर्णमुष्टि: ||*

_ಹೇ ಘನನೇ, ನೀನು ಅಲಕೆಯಲ್ಲಿ ಸಂಚರಿಸುವಾಗ ನಾನಾ ತರಹದ ರಸಿಕಯಕ್ಷರ ಶೃಂಗಾರ ಲೀಲೆಗಳನ್ನು ವೀಕ್ಷಿಸುವಿ. ಆ ಮಹಾನಗರದಲ್ಲಿ ಮನಸೋ ಇಚ್ಛೆ ತುಂಟಾಟಗಳನ್ನು ಯಕ್ಷಯುಗ್ಮಗಳು ಆಚರಿಸುತ್ತವೆ. ರಾತ್ರಿಯ ಕಾಲದಲ್ಲಿ ಚುರುಕಾದ ಪ್ರಿಯರ ಕೈಗಳು ಪ್ರಿಯೆಯರ ಸೀರೆಯ ಗಂಟನ್ನು ಕ್ಷಣಾರ್ಧದಲ್ಲಿ ಬಿಡಿಸುತ್ತವೆ. ನೀವೀ ಎನ್ನುವ ಪದಕ್ಕಿಲ್ಲಿ ಸ್ತ್ರೀಯರ ಬಟ್ಟೆ ಧರಿಸುವಾಗಿನ ಗಂಟು ಎಂಬ ಅರ್ಥ ಕೋಶದಲ್ಲಿದೆ. ಸೀರೆ ಸಡಿಲಗೊಂಡ ಮರುಘಳಿಗೆಯಲ್ಲೇ ಆ ರಸಗ್ರಾಹಿಗಳು ಅನುರಾಗದಿಂದ ರೇಷ್ಮೆ ಸೀರೆಯನ್ನು ಸೆಳೆಯುವರು. ಹೀಗೆ ಮಾಡಿದಾಗ ನಾಚಿಕೆಯಿಂದ ದಿಙ್ಮೂಢರಾದ ಆ ವನಿತೆಯರು ತಮ್ಮನ್ನು ನಿರ್ವಾಸರಾಗಿ ಪ್ರಿಯರು ನೋಡದಿರಲೆಂದು ಅಪೇಕ್ಷಿಸಿ ಎದುರಿಗೆ ಬೆಳಗುತ್ತಿರುವ ರತ್ನಖಚಿತ ದೀಪಗಳ ಮೇಲೆ ತಮ್ಮ ಕೈಗಳಲ್ಲಿದ್ದ ಕುಂಕುಮಾದಿ ಚೂರ್ಣಗಳನ್ನು ಎಸೆಯುತ್ತಾರೆ. ಆಗ ಆ ದೀಪಗಳು ಇನ್ನಷ್ಟು ಬಣ್ಣಬಣ್ಣದವುಗಳಾಗಿ ಕಾಮಿಗಳಾದ ಪ್ರಿಯರಿಗೆ ಉತ್ತೇಜನ ಕೊಟ್ಟಂತಾಗುವುದು. ಇದರಿಂದ ಯಕ್ಷಮನೋಹರಿಯರ ಪ್ರಯತ್ನಗಳೆಲ್ಲ ವಿಫಲಗೊಂಡು ಅವರು ನಿರುಪಾಯರಾಗಿ ಮನದೊಡೆಯರೊಡನೆ ರಾತ್ರಿಯನ್ನು ಸವಿಯುವರು. ಇಂತಹ ಮಧುರ ದೃಶ್ಯಗಳನ್ನು ನೋಡಿ ಸಂತೋಷಿತನಾಗು. ಅಲಕೆಯ ಪುರುಷರು ತಮ್ಮ ಸತಿಯರ ವಸ್ತ್ರಾಪಹರಣದಲ್ಲಿ ಸಿದ್ಧಹಸ್ತರು‌. ರತ್ನಖಚಿತ ದೀಪಗಳೆದುರು ತಮ್ಮ ಅಂಗಾಂಗಗಳನ್ನು ಪ್ರಿಯರಿಗೆ ತೋರಬಾರದೆಂಬ ನಾಚಿಕೆಯಿಂದ ಆ ದೀಪಗಳ ಮೇಲೆ ಬಣ್ಣವನ್ನು ಎರಚುತ್ತಾರೆ. ಆದರೆ ಅವರ ಊಹೆಗೆ ವಿರುದ್ಧವಾಗಿ ಆ ದೀಪಗಳು ಮರೆಯಾಗದೇ ಮತ್ತಷ್ಟು ಬಣ್ಣಗಳಿಂದ ವಾತಾವರಣವನ್ನು ರಂಗೇರಿಸುತ್ತವೆ. ಚಲನಚಿತ್ರದ ಶೃಂಗಾರ ದೃಶ್ಯಗಳಿಗೆ  ಪೀಠಿಕೆಯಂತಿರುವ ಉತ್ತರಮೇಘದ ಈ ವರ್ಣನೆ ನಿಜಕ್ಕೂ ಸುಂದರ. ಯಾವ ಅಶ್ಲೀಲ ಪದಗಳಿಲ್ಲದೆಯೂ ರಸ ಅಭಿವ್ಯಕ್ತವಾಗಿ ಮನದಲ್ಲೇ ಮಂಡಿಗೆ ಮೆಲ್ಲುವಂತೆ ಮಾಡುವ ಕಾಳಿದಾಸನ ಇಂತಹ ಶ್ಲೋಕಗಳು ಕವಿಗಳಿಗೆ ಸ್ಫೂರ್ತಿ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩