📗🌾📙 ವೇದ-ಧರ್ಮ 📗🌾📙 ಭಾಗ-೧೭

*ವೇದಗಳ ಪಾರಾಯಣದ ವಿಭಾಗಗಳು*

_ವೇದಗಳ ಪಾರಾಯಣವನ್ನು ಪ್ರಕೃತಿರೂಪದಿಂದ ಮತ್ತು ವಿಕೃತಿರೂಪದಿಂದ ಮಾಡಬಹುದು. ಸಂಹಿತೆಯೆಂದರೆ ಮಂತ್ರಗಳನ್ನು ಇದ್ದ ಹಾಗೆ ಉಚ್ಚರಿಸುವುದು. ಅದನ್ನು ಮೂಲವೆಂದೂ ಕರೆಯುತ್ತಾರೆ. ಸಂಹಿತೆಯ ಪಾರಾಯಣ ಪ್ರಕೃತಿರೂಪವೆಂದು ಕರೆಸಲ್ಪಡುವುದು._

_ವಿಕೃತಿ ರೂಪದ ಪಾಠ ಅಥವಾ ಪಾರಾಯಣವು ಎಂಟು ವಿಧವಾಗಿದೆ._

*ಜಟಾ ಮಾಲಾ ಶಿಖಾ ರೇಖಾ ಧ್ವಜೋ ದಂಡೋ ರಥೋ ಘನಃ ಅಷ್ಟೌ ವಿಕೃತಯಃ ಪ್ರೋಕ್ತಾಃ ಕ್ರಮಪೂರ್ವಾ ಮಹರ್ಷಿಭಿಃ*

_ಜಟಾಪಾಠ, ಮಾಲಾಪಾಠ, ಶಿಖಾ ಪಾಠ, ರೇಖಾಪಾಠ, ಧ್ವಜಪಾಠ, ದಂಡಪಾಠ, ರಥಪಾಠ, ಘನಪಾಠ ಎಂದು ಎಂಟು ವಿಧವಾಗಿ ಸಂಹಿತೆಯ ಮಂತ್ರಗಳನ್ನು ಹೇಳಬಹುದು. ಇವುಗಳಲ್ಲಿ ಈಗ ಕ್ರಮ, ಜಟಾ ಪಾಠಗಳು ಕೆಲವೆಡೆ ಘನಪಾಠವು ಹೆಚ್ಚಿನೆಡೆ ಪ್ರಚಲಿತವಾಗಿದೆ.

*ಅಗ್ನಿಮೀಳೇ ಪುರೋಹಿತಂ* ಎನ್ನುವುದು ಸಂಹಿತೆ. ಅದರ ಪದಶಃ ವಿಂಗಡಣೆಯೇ ಪದಪಾಠ. *ಅಗ್ನಿಂ ಈಳೇ* *ನಮಃ ತೇ*ಇತ್ಯಾದಿ.

_ಒಂದು ಎರಡು ಎರಡು ಮೂರು ಹೀಗೆ ಪದಗಳನ್ನು ಹೇಳುತ್ತಾ ಹೋದರೆ ಅದು ಕ್ರಮಪಾಠವಾಗುವುದು. ಉ: *ನಮಸ್ತೇ, ತೇರುದ್ರ, ರುದ್ರ ಮನ್ಯವೇ* ಇತ್ಯಾದಿ.

ಒಂದು ಎರಡು ಎರಡು ಒಂದು ಒಂದು ಎರಡು ಮತ್ತೆ  ಎರಡು ಮೂರು ಮೂರು ಎರಡು ಹೀಗೆ ಪಾಠವಿರುವುದು. ಉ: *ಗಣಾನಾಂ ತ್ವಾ ತ್ವಾ ಗಣಾನಾಂ ಗಣಾನಾಂ ತ್ವಾ* ಹೀಗೆ ಪಾಠವು ಜಟಾಪಾಠವೆಂದು ಕರೆಸಲ್ಪಡುತ್ತದೆ.

_ಒಂದು ಎರಡು ಎರಡು ಒಂದು ಒಂದು ಎರಡು ಮೂರು ಮೂರು ಎರಡು ಒಂದು ಒಂದು ಎರಡು ಮೂರು ಹೀಗೆ ಹೇಳುವುದಾದರೆ ಅದು ಘನಪಾಠ. ಉ: *ಗಣಾನಾಂ ತ್ವಾ ತ್ವಾ ಗಣಾನಾಂ ಗಣಾನಾಂ ತ್ವಾ ಗಣಪತಿಂ ಗಣಪತಿಂ ತ್ವಾ ಗಣಾನಾಂ ಗಣಾನಾಂ ತ್ವಾ ಗಣಪತಿಮ್* ಇದು ಎಲ್ಲೆಡೆ ಪ್ರಸಿದ್ಧವಾದ ಪಾಠ. ಈ ಘನಪಾಠವು ಈ ಪಾಠಗಳಲ್ಲಿ ಕೊನೆಯದಾಗಿಯೂ ದೀರ್ಘರೂಪವಾಗಿಯೂ ಕೇಳಲು ಆಕರ್ಷಕವಾಗಿಯೂ ಇರುವ ಕಾರಣ ಎಲ್ಲೆಡೆ ಪ್ರಚಲಿತವಾಗಿದೆ.‌_

_ಇವುಗಳನ್ನು ಕ್ರಮಜಟೆ, ಕ್ರಮಮಾಲೆ ಇತ್ಯಾದಿಯಾಗಿಯೂ ವ್ಯವಹರಿಸುತ್ತಾರೆ. ವೇದಗಳು ಸಾವಿರಾರು ವರ್ಷಗಳಿಂದ ವ್ಯತ್ಯಾಸವಾಗದೇ ಪುಸ್ತಕರೂಪದಲ್ಲಿ ಇಲ್ಲದಿದ್ದರೂ ಉಳಿದುಕೊಂಡು ಬಂದಿರುವುದಕ್ಕೆ ಇಂತಹ ಪಾಠಕ್ರಮಗಳೇ ಕಾರಣ. *ಸಹನಾವವತು* ಎಂಬ ಮಂತ್ರ ವಿಶ್ವದಲ್ಲಿ ಎಲ್ಲಿ ಉಚ್ಚರಿಸಿದರೂ ಅದೇ ರೂಪದಲ್ಲಿ ಇರುತ್ತದೆಯೇ ಹೊರತು ಭಿನ್ನ ರೂಪದಲ್ಲಲ್ಲ. ಹಾಗಾಗಿಯೇ ಹಿಂದುಧರ್ಮದ ನಂಬಿಕೆಯಂತೆ ವೇದಗಳು ಮನುಷ್ಯರಿಂದ ನಿರ್ಮಿತವಾದವುಗಳಲ್ಲ. ಋಷಿಗಳು ತಮ್ಮ ತಪದ ಮೂಲಕ ಸಾಕ್ಷಾತ್ಕರಿಸಿಕೊಂಡ ಸತ್ಯದ ಭಾಷಾರೂಪಗಳು._

📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩