🌹ಮೇಘದೂತದ ಒಂದು ಬಿಂದು 🌹

*यस्यां यक्षास्सितमणिमयान्येत्य हर्म्यस्थलानि ज्योतिच्छायाकुसुमरचितान्युत्तमस्त्रीसहाया: | आसेवन्ते मधुरतिफलं कल्पवृक्षप्रसूतं त्वद्गम्भीरध्वनिषु शनकै: पुष्करेष्वाहतेषु ||*


_ಎಲೈ ಮೇಘವೇ, ಆ ಅಲಕೆಯಲ್ಲಿ ನೀನು ಸಂಚರಿಸುವ ಕಾಲದಲ್ಲಿ ಯಕ್ಷರೆಂಬ ಮಾಯಾವಿಗಳು ಸುಂದರಸ್ತ್ರೀಯರೊಡನೆ ಸೇರಿ ಚಂದ್ರಕಾಂತಮಣಿಯಿಂದ ನಿರ್ಮಿತವಾದ ನಕ್ಷತ್ರಗಳ ಪ್ರತಿಬಿಂಬವೆಂಬ ಕುಸುಮಗಳಿಂದ ಅಲಂಕರಿಸಲ್ಪಟ್ಟ ಮೇಲುಪ್ಪರಿಗೆಯನ್ನು ಹೊಂದಿ, ನಿನ್ನ ಗಂಭೀರವಾದ ಧ್ವನಿಗೆ ಸಮನಾದ ಮೃದಂಗಗಳು ಮೆಲ್ಲಮೆಲ್ಲನೆ ಬಾರಿಸಲ್ಪಡುತ್ತಿರಲು ಕಲ್ಪವೃಕ್ಷದಿಂದ ಉಂಟಾದ ( ಕೇಳಿದ್ದೆಲ್ಲವನ್ನೂ ಕೊಡುವ ಎಂಬರ್ಥದಲ್ಲಿ) ಶೃಂಗಾರವೇ ಫಲವಾಗಿರುವ ಮದ್ಯವನ್ನು ಸೇವಿಸುತ್ತಾರೆ. ನಿನ್ನ ಗಮನ ಅತ್ತ ಸಾಗಿದಾಗ ಭೋಗಾಸಕ್ತರಾದ ಯಕ್ಷರು ಆನಂದಿಸುವರು. ತಮ್ಮ ತಮ್ಮ ಮನದನ್ನೆಯರ/ ಅರಸರೊಡಗೂಡಿ ತಾವು ವಾಸಿಸುವ ಭವನದ ಮೇಲ್ಭಾಗಕ್ಕೆ ಬರುತ್ತಾರೆ. ಆ ಮಹಡಿ ಮನೆಗಳಲ್ಲಿ ಸೌಂದರ್ಯಾರ್ಥವಾಗಿ ಚಂದ್ರಕಾಂತ ಮಣಿಗಳನ್ನು ಅಂಟಿಸಿರುತ್ತಾರೆ. ಚಂದ್ರನ ಆಗಮನವಾದೊಡನೆ ತಂಪನ್ನು ಚೆಲ್ಲುತ್ತಾ ಹೊಳೆಯುವ ಆ ಚೆಲುವು ಕಾಮಿಗಳ ಮದವನ್ನು ಹೆಚ್ಚಿಸುತ್ತದೆ. ಅದೇ ಸಮಯದಲ್ಲಿ ಆಕಾಶದಲ್ಲಿ ಮಿನುಗುವ ತಾರೆಗಳ ಪ್ರತಿಬಿಂಬವು ಆ ರತ್ನಖಚಿತವಾದ ಮೇಲುಪ್ಪರಿಗೆಯ ನೆಲದ ಮೇಲೆ ಬಿದ್ದು ಮತ್ತಷ್ಟು ಮನೋಹರವಾದ ರಮಣೀಯತೆ ಉಂಟಾಗುವುದು. ಇಂತಹ ಆವಾಸಸ್ಥಾನದಲ್ಲಿ ಯಕ್ಷದಂಪತಿಗಳು ವಿಹರಿಸುತ್ತಾ ಮದನಪೀಡಿತರಾಗುತ್ತಾರೆ. ಅದೇ ಸಮಯದಲ್ಲಿ ನಿನ್ನದೇ ಧ್ವನಿಯನ್ನು ಹೋಲುವ ಮೃದಂಗಗಳ ಧ್ವನಿ ಹಿಮ್ಮೇಳದಂತೆ ಸುತ್ತಲಿನ ಪರಿಸರದಲ್ಲಿ ಹೊಮ್ಮುತ್ತಿರಲು ಬಯಸಿದ್ದೆಲ್ಲವನ್ನೂ ಕೊಡುವ ಕಲ್ಪ ವೃಕ್ಷದಿಂದ ಜನಿಸಿದ ಶೃಂಗಾರಲೀಲೆಗಳೇ ಪ್ರಯೋಜನವಾಗುಳ್ಳ ಮಧುವನ್ನು ಸೇವಿಸುತ್ತಾರೆ. ಯಕ್ಷರು ಸಂಗೀತಾದಿ ಕಲೆಗಳಲ್ಲಿ ಆಸಕ್ತರು. ಅವರ ವಿಹಾರ ಕಾಲದಲ್ಲಿ ಸೇವಕರು ಮೆಲುದನಿಯಲ್ಲಿ ಸಂಗೀತ ನುಡಿಸುತ್ತಾರೆ. ಅದೇ ಸಮಯದಲ್ಲಿ ನೀನು ಗಂಭೀರವಾಗಿ ಗರ್ಜಿಸಿ ನಿನ್ನ ಆಗಮನವನ್ನು ಸಾರುವಿ. ಅವರ ವಿಹಾರಕ್ಕೆ ಸಂಗೀತದ ಜೊತೆಜೊತೆಗೆ ಮೃದಂಗದ ನಾದವೂ ಸೇರಿದಂತಾಗಿ ಕಾಮಾಸಕ್ತರಾದ ಯಕ್ಷಯುತಿಗಳು ರತಿಸುಖದಲ್ಲಿ ಮನಸಾರೆ ಮೀಯುತ್ತಾರೆ. ಹೀಗೆ ಯಕ್ಷರ ಸಂತೋಷಕ್ಕೆ ನೀನೂ ಕಾರಣನಾಗುವಿ. ರಸಿಕರಾದ ಅವರು ಸುಖದ ಅಮಲಿನಲ್ಲಿ ತೇಲುತ್ತಾ ರತಿಯೆಂಬ ಮಧುವನ್ನು ಪಾನಮಾಡುತ್ತಾ ಮೈಮರೆಯುವರು._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩