📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-೨೧

*ಸೀತಾಯಾಶ್ಚಾನೃಶಂಸ್ಯೇನ ತೇಜಸಾ ರಾಘವಸ್ಯ ಚ ಪಿತುಶ್ಚ ಮಮ ಸಖ್ಯೇನ ನ ಮಾಂ ದಹತಿ ಪಾವಕಃ*

_ಹನುಮನ ಬಾಲಕ್ಕೆ ಅಗ್ನಿಯನ್ನು ಹಚ್ಚಿದ್ದಾರೆ. ಆದರೆ ಅವನಿಗೇ ಆಶ್ಚರ್ಯವಾಗುವಂತೆ ಆ ಬೆಂಕಿ ಸ್ವಲ್ಪವೂ ಸುಡದೇ ಮಂಜುಗಡ್ಡೆಯಂತೆ ತಂಪಾಗಿದೆ. ಆಗ ಅವನಾಡುವ ಸುಂದರ ಮಾತು. ನನ್ನ ಪರಾಕ್ರಮದಿಂದ ಹೀಗಾದದ್ದಲ್ಲ. ಸೀತಾದೇವಿಯ ದಯಾಪರತೆಯಿಂದಲೂ ಶ್ರೀರಾಮನ ಪ್ರಭಾವದಿಂದಲೂ ಮತ್ತು ಅಗ್ನಿಗೂ ನನ್ನ ತಂದೆಗೂ ಇರುವ ಗೆಳೆತನದಿಂದಲೂ  ಅಗ್ನಿಯು ನನ್ನನ್ನು ಸುಡುತ್ತಿಲ್ಲ. ಸೀತೆ ಕರುಣೆ ತೋರಿ ಅನುಗ್ರಹಿಸಿರಬಹುದು ಯಾವ ಅಪಾಯವೂ ತಾಗದಂತೆ, ಅಥವಾ ರಾಮನ ಪ್ರಭಾವಾತಿಶಯವು ಅಗ್ನಿಯನ್ನು ಹೆದರಿಸಿರಬಹುದು, ಇವನಿಗೆ ಘಾತಿ ಮಾಡಿದರೆ ರಾಮ ನನಗೇನು ಮಾಡಿಯಾನೆಂಬ ಭಾವದಲ್ಲಿ ಸುಡುತ್ತಿಲ್ಲವೇನೋ! ಅಥವಾ ನನ್ನಪ್ಪ ಮಾರುತನಿಗೂ ಅಗ್ನಿಗೂ ಸಹಜ ಸ್ನೇಹ. ಮಿತ್ರನ ಮಗನಿಗೆ ಕೇಡನ್ನು ಬಯಸುವುದು ಅನುಚಿತವೆಂದು ಭಾವಿಸಿ ತಂಪಾಗಿರಬಹುದು. ಹೀಗೆಲ್ಲಾ ಅಲೋಚಿಸುತ್ತಾ ಹನುಮನು ಪ್ರತೀಕಾರವನ್ನೂ ಚಿಂತಿಸುತ್ತಾನೆ. ಇಲ್ಲಿ ಹನುಮನ ಆಲೋಚನೆ ನಿಜಕ್ಕೂ ವಿಶಿಷ್ಟವಾದುದು. ನಾವೇನಾದರೂ ಕಷ್ಟಬಂದು ಬಾಧಿತರಾಗದಿದ್ದಾಗ ಅದು ನಮ್ಮದೇ ಪೂರ್ವಪುಣ್ಯವೆಂದು ಉಳಿದವರ ಪಾಲೇನಿಲ್ಲವೆಂದು ನಿರಾಕರಿಸುತ್ತೇವೆ. ಆಪತ್ತು ಬರುವ ತನಕ ಉಳಿದವರಿಗಿಂತ ನಾವೇ ಹೆಸರು ಪಡೆದು ಆಪತ್ತು ಬಂದಾಗ ಜಾರಿಕೊಳ್ಳುತ್ತೇವೆ. ಸಮಸ್ಯೆ ಬಗೆಹರಿದಾಗ ನಮ್ಮಿಂದಲೇ ಎಂದು ವ್ಯವಹರಿಸುತ್ತೇವೆ. ಆದರೆ ಹನುಮ ಬೇರೆಯವರೇ ತನ್ನ ಸುಖಕ್ಕೆ ಕಾರಣವೆಂದು ಆಲೋಚಿಸಿ ಮತ್ತೆ ವಿನಯ ತೋರುತ್ತಾನೆ._

*ಕಥಮಸ್ಮದ್ವಿಧಸ್ಯೇಹ ಬಂಧನಂ ರಾಕ್ಷಸಾಧಮೈಃ ಪ್ರತಿಕ್ರಿಯಾಸ್ಯ ಯುಕ್ತಾ ಸ್ಯಾತ್ಸತಿ ಮಹ್ಯಂ ಪರಾಕ್ರಮೇ*

_ಶ್ರೀರಾಮನ ಸಂಪೂರ್ಣವಾದ ಅನುಗ್ರಹ ಪಡೆದಿರುವ ನನ್ನನ್ನು ಈ ರಾಕ್ಷಸರು ಹೇಗೆ ತಾನೇ ಬಂಧಿಸಿಯಾರು? ನನ್ನಲ್ಲಿ ಪರಾಕ್ರಮವಿದ್ದದ್ದೇ ಹೌದಾದರೆ ಈ ಬಂದನಕ್ಕೆ ಸರಿಯಾದ ಪ್ರತೀಕಾರ ಆಚರಿಸದೇ ಇರಲಾರೆನು. ಹನುಮನ ಆತ್ಮವಿಶ್ವಾಸದ ರಾಮನ ಮೇಲಿನ ನಂಬಿಕೆಯ ಈ ಮಾತು ನಿಜಕ್ಕೂ ಮಾದರಿ. ಶ್ರೀರಾಮನ ಮೇಲೆ ಸಂಪೂರ್ಣ ನಂಬಿಕೆ ತಾಳಿ ಪ್ರವೃತ್ತಿ ಮಾಡಿದವ ಹನುಮಂತ. ನಮ್ಮ ನಂಬಿಕೆಗಳಲ್ಲಿ ಹೆಚ್ಚಾನೆಚ್ಚು ಸಂಶಯಗಳು ನುಸುಳಿರುತ್ತವೆ. ಪರರಿರಲಿ ನಾವೇ ಇರಲಿ ಕಾರ್ಯದಲ್ಲಿ ವ್ಯಕ್ತಿಯಲ್ಲಿ ಶಕ್ತಿಯಲ್ಲಿ ಸಂಪೂರ್ಣ ನಂಬಿಕೆ ತಾಳದೇ ಪ್ರವೃತ್ತಿ ಮಾಡಿ ನಿರಾಸೆ ಹೊಂದುತ್ತೇವೆ. ಆದರೆ ಹನುಮ ಹಾಗಲ್ಲ. ಅವನಿಗೆ ರಾಮ ಜಗದೊಡೆಯನೆಂಬ ನಂಬಿಕೆ ದೃಢವಾದದ್ದು. ಎಷ್ಟು ಕಷ್ಟಪಟ್ಟರೂ ಆ ನಂಬಿಕೆಯ ಬೆಟ್ಟ ಕುಸಿಯಲಾರದು. ಅದೇ ಅವನ ಯಶಸ್ಸಿನ ಸಂಕೇತ. ಕಾರ್ಯದಲ್ಲಿ ಶ್ರದ್ಧೆ ಅಥವಾ ನಂಬಿಕೆ ಇದ್ದಾಗ ಯಶಸ್ಸು ಆಗದಿರುತ್ತದೆಯೇ! ನಾವೂ ಹನುಮನಂತೆ ದೇವರಲ್ಲಿ ಅಚಲವಾದ ನಂಬಿಕೆ ಇಟ್ಟು ಮುನ್ನಡೆಯೋಣ._

📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩