🌾🌸📗 ವೇದ-ಧರ್ಮ ಭಾಗ-೧೬🌾🌸📗

*ವೇದ ಭಾಷ್ಯಗಳು*

ವೇದ ಭಾಷ್ಯಗಳ ಅವಶ್ಯಕತೆ ಏನು ಎಲ್ಲ ಪ್ರಶ್ನೆಗೆ ಈ ಶ್ಲೋಕದಲ್ಲಿ ವಿವರಣೆ ಕಾಣಬಹುದು.

*ಸ್ಥಾಣುರಯಂ ಭಾರಹಾರಃ ಕಿಲಾಭೂದಧೀತ್ಯ ವೇದಂ ನ ವಿಜಾನಾತಿ ಯೋರ್ಥಮ್, ಯೋರ್ಥಜ್ಞ ಇತ್ಸಕಲಂ ಭದ್ರಮಶ್ನುತೇ ಸ ನಾಕಮೇತಿ ಜ್ಞಾನವಿಧೂತಪಾಪ್ಮಾ*

ವೇದವನ್ನು ಓದಿ ಅರ್ಥ ಅರಿಯದವನು ಭಾರವನ್ನು ಹೊತ್ತ ಮೋಟುಮರದಂತೆ. ಹೊತ್ತಿರುವ ಭಾರವಾದ ವಸ್ತುವಿನ ಗುಣ ರೂಪಗಳನ್ನು ಹೇಗೆ ಅದು ಅರಿಯದೋ ಮಂತ್ರಿಗಳು ಕಂಠಸ್ಥ ಮಾಡಿ ಅರ್ಥ ಅರಿಯಲು ಪ್ರಯತ್ನಿಸದಿರುವ ವೇದಾಧ್ಯಾಯಿಯ ಪಾಡೂ ಅದೇ ಆಗಿದೆ. ಅರ್ಥವನ್ನರಿತವನು ಎಲ್ಲಾ ಮಂಗಳ ಪಡೆದು ಬ್ರಹ್ಮನ ಬಗೆಗೆ ಅರಿತು ಸ್ವರ್ಗ ಹೊಂದುವನು. ಇನ್ನೊಂದು ಶ್ಲೋಕದಲ್ಲೂ ಅರ್ಥದ ಮಹತ್ವ ಸಾರಿದ್ದಾರೆ.( ಅರ್ಥವೆಂದರೆ ಶಬ್ದಾರ್ಥ)

*ಉಭೌ ಕುರುತೋ ಯಶ್ಚೈವಂ ವೇದ ಯಶ್ಚ ನ ವೇದ, ಯದೇವ ವಿದ್ಯಯಾ ಕರೋತಿ ತದೇವ ವೀರ್ಯವತ್ತರಂಭವತಿ*

ಮಂತ್ರಾರ್ಥ ಅರಿತವನು ಹಾಗೂ ಅರಿಯದವನು ಇಬ್ಬರೂ ಕರ್ಮ ಆಚರಿಸುತ್ತಾರೆ. ಯಾರು ಕರ್ಮದ ನಿಜ ಸ್ವರೂಪ ಅರಿತು ಮಾಡುವನೊ ಅವನಿಗೆ ಹೆಚ್ಚಿನ ಫಲ ಲಭಿಸುತ್ತದೆ.

_ಹೀಗಾಗಿಯೇ *ಅಧ್ಯೇಯೋ ಜ್ಞೇಯಶ್ಚ* ಎಂದದ್ದು. ಬರಿದೆ ಉರು ಹೊಡೆಯದೆ ಅರ್ಥದೆಡೆಗೆ ಗಮನ ಕೊಡಿ ಎಂದು. ಹಾಗಂತ ಮಂತ್ರಗಳ ಅರ್ಥ ಸುಲಭಸಾಧ್ಯವಲ್ಲ. ಪದಶ: ಅರ್ಥವೂ ಕೆಲವೊಮ್ಮೆ ಅರ್ಥವಲ್ಲ. ಬೇರೆಯೇ ಅಭಿಪ್ರಾಯ ಇರುತ್ತದೆ. *ಬಿಭೇತ್ಯಲ್ಪಶ್ರುತಾದ್ವೇದ:* ಎಂಬಂತೆ ಅಲ್ಪ ತಿಳುವಳಿಕೆ ಉಳ್ಳವನನ್ನು ( ನನ್ನಂತಹವನು) ಕಂಡು ಮೋಸ ಮಾಡುವನೆಂದು ವೇದವೇ ಹೆದರುತ್ತದೆಯಂತೆ. ತಾತ್ಪರ್ಯಾರ್ಥವೇ ಪ್ರಧಾನವಾಗಿರುವ ಅಥವಾ ಭಗವಂತನೇ ಮುಖ್ಯ ವಿಷಯವಾಗಿರುವ ವೇದಗಳು ಎಲ್ಲರಿಗೂ ಅರ್ಥವಾಗುವಂತಾಗಲಿ ಎಂದು ಅನೇಕರು ವೇದ ಭಾಷ್ಯ ರಚಿಸಿದರು. ಆಚಾರ್ಯತ್ರಯರು ಕೇವಲ ಪ್ರಸ್ಥಾನತ್ರಯಗಳಿಗೆ ಭಾಷ್ಯ ಬರೆದರು._

_ವೇದ ಭಾಷ್ಯಕಾರರಲ್ಲಿ ಸಾಯಣರು ಪ್ರಮುಖರು. ನಾಲ್ಕು ವೇದಗಳಿಗೂ ಭಾಷ್ಯ ಬರೆದ ಮಹನೀಯರು. ತತ್ವತಃ ಕೆಲವೊಂದು ವಿಚಾರಗಳಲ್ಲಿ ದ್ವೈತಿಗಳಿಗೂ ವಿಶಿಷ್ಟಾದ್ವೈತಿಗಳಿಗೂ ಸಾಯಣರ ಅಭಿಪ್ರಾಯ ಸಮ್ಮತವಲ್ಲದಿದ್ದರೂ ಸರ್ವಜನ ಗ್ರಾಹ್ಯ ಈ ಭಾಷ್ಯಗಳು._

_ಇನ್ನು ಋಗ್ವೇದಕ್ಕೆ ಉಳಿದ ಅನೇಕ ಮಹನೀಯರು ಭಾಷ್ಯ ಬರೆದಿದ್ದಾರೆ. ಅದರಲ್ಲಿ ಪ್ರಮುಖರು- ಸ್ಕಂದಸ್ವಾಮಿ, ವೆಂಕಟಮಾಧವ, ಆನಂದತೀರ್ಥ, ಆತ್ಮಾನಂದ ಮುಂತಾದವರು._

_ಯಜುರ್ವೇದದ ಭಾಷ್ಯಕಾರರು ಉವಟ, ಭಟ್ಟಭಾಸ್ಕರ ಮೊದಲಾದವರು._

_ಸಾಮವೇದದ ಭಾಷ್ಯಕಾರರು ಮಾಧವ, ಭರತಸ್ವಾಮಿ ಮೊದಲಾದವರು._

_ಅಥರ್ವವೇದಕ್ಕೆ ಈಗ ಲಭ್ಯವಿರುವ ಭಾಷ್ಯ ಸಾಯಣಭಾಷ್ಯವೊಂದೇ ಆಗಿದೆ. ಈ ಎಲ್ಲಾ ಭಾಷ್ಯಗಳು ಸಂಪೂರ್ಣವಾಗಿ ಉಪಲಬ್ಧವಿಲ್ಲ. ಕೆಲವು ಮುಕ್ಕಾಲು ಕೆಲವು ಕೆಲವೇ ಸೂಕ್ತಗಳ ಭಾಷ್ಯ ಹೀಗೆ ಉಪಲಬ್ಧಿಯಿದೆ. ಸಾಯಣ ಭಾಷ್ಯ ಮಾತ್ರ ಮೈಸೂರು ರಾಜರಿಂದ ಪ್ರಕಾಶಿತವಾಗಿ ನಾಲ್ಕು ವೇದಗಳಿಗೂ ಲಭ್ಯವಿದೆ._
ಮುಂದುವರೆಯುವುದು.....

📗ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩