🌹 ಮೇಘದೂತದ ಒಂದು ಬಿಂದು 🌹

*तत्रावश्यं वलयकुलिशोद्घट्टनोद्गीर्णतोयं नेष्यन्ति त्वां सुरयुवतयो यन्त्रधारागृहत्वम् | ताभ्यो मोक्षस्तव यदि सखे घर्मलब्धस्य न स्यात् क्रीडालोलाश्रवणपरुषैर्गर्जितैर्भाययेस्ता: ||*

_ಎಲೈ ಘನನೇ,( ಘನವೆಂದು ಮೇಘದ ಪರ್ಯಾಯ ಪದ. ಗಟ್ಟಿಯಾದ ಎಂಬ ಅರ್ಥದಲ್ಲಿ) ನೀನು ಆ ಕೈಲಾಸಪರ್ವತದ ಸಂಚರಿಸುವಾಗ ಅವಶ್ಯವಾಗಿ ಸುರಯುವತಿಯರನ್ನು ಎದುರುಗೊಳ್ಳುವೆ. ಆ ಯುವತಿಯರಾದರೋ ಬಿಸಿಲಿನ ಬೇಗೆಯನ್ನು ತಡೆಯಲಾರದೆ ನಿನ್ನನ್ನು ತಮ್ಮ ಬಳಿಗೆ ಸೆಳೆಯುವರು. ಅಷ್ಟಲ್ಲದೇ ಅವರು ತಮ್ಮ ಅನೇಕಾನೇಕ ಗಾಜಿನ ಅಥವಾ ಮಣಿಗಳ ಬಳೆಗಳ ( ಆಗ ಪ್ಲಾಸ್ಟಿಕ್ ಅಲಭ್ಯವಿತ್ತು) ತುದಿಗಳಿಂದ ಚುಚ್ಚಿ ನೀರು ಚಿಮ್ಮುವಂತೆ ಮಾಡುವರು. ಹಿಮವನ್ನು ಚುಚ್ಚಿದಾಗ ನೀರು ಸಿಡಿಯುವ ಸಹಜತೆ ಕವಿ ಹೀಗೆ ವರ್ಣಿಸಿದ್ದಾನೆ. ನಿನ್ನನ್ನು ಅವರು  ಕೃತಕವಾದ ನೀರು ಸುರಿಸುವ ಯಂತ್ರವೆಂದು ಕಲ್ಪಿಸಿ ಸಾಕಷ್ಟು ಆಟವಾಡುವರು. ತಮ್ಮ ದೇಹವನ್ನು ನಿನ್ನ ನೀರಿನಿಂದ ತೋಯಿಸಿಕೊಂಡು ಕ್ರೀಡೆಯಾಡುವರು. ಸುರಯುವತಿಯರ ಆ ಸಂಗ ನಿನಗೆ ರೋಮಾಂಚನಕಾರಿಯಾದುದೇ ಆಗಿದೆ. ಅವರ ಕ್ರೀಡಾಸಲ್ಲಾಪಗಳನ್ನು ಮನದಣಿಯೆ ನೋಡಿ ಅನಂದಿಸು. ಬಿಸಿಲಿಗೆ ಬಸವಳಿದ ಆ ಲಲನೆಯರು ಬಹಳ ಕಾಲವಾದರೂ ಬಿಡದೇ ಇದ್ದರೆ ಆಗ ನೀನು ನಿನ್ನ ಗರ್ಜನೆಯಿಂದ ಅವರನ್ನು  ಓಡಿಸುವಂಥವನಾಗು. ಸಿಡಿಲು, ಮಿಂಚು. ಗುಡುಗುಗಳಿಗೆ ಬೆದರಿ ಆ ಹರಿಣಾಕ್ಷಿಯರು ನಿನ್ನ ಸಿಂಹಗರ್ಜನೆಗೆ ಹೆದರಿ ಆಸೆಯಿದ್ದರೂ ತೆರಳುವರು. ರಸಿಕನೋರ್ವ ಮಾನಿನಿಯರ ಸಂಗವನ್ನು ಸವಿಯುವನು. ಆದರೇ ಅವರ ಸಲ್ಲಾಪಗಳು ಅತಿಯೆಂದೆನಿಸಿದಾಗ ಗದರುವಂತೆ ನೀನು ಗರ್ಜಿಸು. ಹೀಗೆ ನನಗಾಗಿ ಪ್ರಯಾಣ ಮಾಡುವ ನಿನ್ನ ಮನದ ರಂಜನೆ ನಡೆದು ಅಲ್ಲಿಯೇ ಬಹಳ ಕಾಲ ನಿಲ್ಲದೇ ಮುಂದುವರೆ. ಸುರಯುವತಿಯರೊಡನೆ ಕ್ರೀಡಿಸುತ್ತಲೇ ಅಲ್ಲೇ ನೆಲೆನಿಂತರೆ ಯಕ್ಷನ ಸಂದೇಶ ತಲುಪದೇ ಹೋದೀತು ಎಂಬ ಆತಂಕ. ಕಾಳಿದಾಸನ ಕಲ್ಪನೆಯಲ್ಲಿ ಸಹಜ ದೃಶ್ಯಗಳು ಅದ್ಭುತ ಚಿತ್ರಗಳಾಗಿ ರೂಪುಗೊಳ್ಳುವ ಪರಿ ಅಸದೃಶ.ಕರ್ಣಕಠೋರವಾದ ಗರ್ಜನೆಯಿಂದ ಕಂಗೆಡಿಸು ಆ ಮೂಲಕ ಅವರಿಂದ ಮುಕ್ತನಾಗು ಎಂಬ ಭಾವ.ಅವರು ತಮ್ಮ ಸುಖಕ್ಕಾಗಿ ನಿನ್ನನ್ನು ಪೀಡಿಸುವರು. ಬಿಸಿಲಿನ ಬೇಗೆ ತಾಳಲಾರದೇ ಬಂದ ನಿನ್ನನ್ನು ಬಿಡಲಾರರು ಎಂಬ ಭಾವವೂ ಇದೆ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩