🌺 ಪ್ರತಿಮಾನಾಟಕದ ಒಂದು ಕುಸುಮ🌺

*वक्ष: प्रसारय कपाटपुटप्रमाणमालिङ्ग मां सुविपुलेन भुजद्वयेन | उन्नामयाननमिदं शरदिन्दुकल्पं प्रह्लादय व्यसनदग्धमिदं शरीरम् ||*

_ಸುಮಂತ್ರನ ಆಶಯದಂತೆ ಭರತನೇ ಮೊದಲಿಗೆ ರಾಮನನ್ನು ನೊಡಲೆಂದು ಕುಟೀರದೊಳಗೆ ಹೊಕ್ಕೆದ್ದಾನೆ. ಮೊದಲಿಗೆ ಸುಮಂತ್ರನೇ ಹೋದರೆ ರಾಮನಿಗೆ ಅವನನ್ನು ನೋಡುತ್ತಿದ್ದಂತೆ ತಂದೆಯ ನೆನಪು ಕಾಡಿ ದುಃಖವಾಗಬಹುದೆಂಬುದು ಸುಮಂತ್ರನ ಶಂಕೆ. ಅದೇ ಸಹೋದರನು ಬಂದಾಗ ಸಹಜ ಸಂತೋಷ ಉಂಟಾದೀತು ಹಾಗಾಗಿ ನೀನೇ ಮೊದಲು ನೋಡು ಎನ್ನುವನು. ಆಗ ಬಂದ ಭರತನನ್ನು ನೋಡಿ ಆನಂದದಿಂದ ರಾಮನಾಡುವ ಮಾತು. ಅಪ್ಪಾ ,ಭರತ, ಬಂದೆಯಾ! ಆಯುಷ್ಮಂತನಾಗು, ನಮಸ್ಕಾರಗಳು ಗೌರವಗಳೆಲ್ಲ ಆಮೇಲೆ ಕೊಡುವಿಯಂತೆ, ಮೊದಲಿಗೆ ನಿನ್ನ ಕಪಾಟಿನಂತೆ ವಿಶಾಲವಾದ ಎದೆಯನ್ನು ಅಥವಾ ಹೃದಯವನ್ನು ನನ್ನೆಡೆಗೆ ಹೊರಳಿಸು. ನಿನ್ನ ಉದ್ದವೂ ಗಟ್ಟಿಮುಟ್ಟಾಗಿರುವ ಈ ಎರಡು ಬಾಹುಗಳಿಂದ ನನ್ನನ್ನು ಆಲಿಂಗಿಸು. ಶರತ್ಕಾಲದ ಬೆಳದಿಂಗಳಿನಂತೆ ಮನೋಹರವಾದ ನಿನ್ನ ಮುಖವನ್ನು ಮೇಲಕ್ಕೆತ್ತು. ಇಷ್ಟು ಮಾಡಿ ದುಃಖಗಳಿಂದ ಜರ್ಜರಿತನಾದ ಈ ರಾಮನನ್ನು ತಂಪುಗೊಳಿಸು.ಮನಕ್ಕೆ ಹತ್ತಿದ ಬೆಂಕಿಯನ್ನು ನಿನ್ನ ಆತ್ಮೀಯವಾಯ ಆಲಿಂಗನದಿಂದ ತಣಿಸು. ಪ್ರೀತಿಯ ಅಭಿವ್ಯಕ್ತಿ ಆಲಿಂಗನದಷ್ಟು ಬೇರೆ ಯಾವ ಕ್ರಿಯೆಗಳೂ ಮಾಡಲಾರವು. ಒಂದು ಬಿಗಿ ಅಪ್ಪುಗೆ ಎಲ್ಲಾ ಬಗೆಯ ದುಃಖಗಳನ್ನೂ ಮರೆಸುವುದು.ಅದೂ ಬಹಳ ಸಮಯದ ನಂತರ ತಮ್ಮ ಬಂದಿದ್ದಾನೆ. ನಮಸ್ಕರಿಸಿ, ವನವಾಸಕ್ಕೆ ತಾನೇ ಕಾರಣನಾದೆನೆಂದು ಭಾವಿಸಿ ತಲೆ ತಗ್ಗಿಸಿದ್ದಾನೆ ಭರತ. ಆಗ ರಾಮನಾಡುವ ಮಾತು. ಭರತ ನಿನ್ನ ತೋಳನ್ನು ಚಾಚಿ ವಿಶಾಲವಾದ ಎದೆಯಿಂದ ನನ್ನನ್ನು ಬಿಗಿದಪ್ಪಿಕೊ. ನೀನು ಶರತ್ಕಾಲದ ಚಂದ್ರನಂತೆ ಸುಂದರನೂ ಹಾಗೂ ತಾಳ್ಮೆಯ ಪ್ರತೀಕ. ಹಾಗಾಗಿ ತಂಪು. ನನ್ನ ಮನವು ಅಪ್ಪನ ಅಗಲಿಕೆಯೇ ಮುಂತಾದ ದುಃಖಗಳನ್ನು ಆಲಿಂಗಿಸಿ ಬೆಂದುಹೋಗುತ್ತಿದೆ. ದಿನವಿಡೀ ಬೆಂದ ಭೂಮಿ ಬೆಳದಿಂಗಳಿಗೆ ತಂಪಾಗುವಂತೆ ನಿನ್ನೀ ಆಲಿಂಗನದಿಂದ ನನ್ನ ದುಃಖಗಳೆಲ್ಲ ಮರೆತು ನನ್ನ ಮನವು ಉದ್ವೇಗ ಕಳೆದುಕೊಳ್ಳಲಿ. ನಿನ್ನ ಮೊಗವನ್ನೊಮ್ಮೆ ತೋರು ಎನ್ನೆಡೆಗೆ. ಕವಿ ಆಲಿಂಗನದ ಪ್ರಭಾವವನ್ನು, ಈ ಸನ್ನಿವೇಶದಲ್ಲಿ ಸುಂದರವಾಗಿ ಚಿತ್ರಿಸಿದ್ದಾನೆ. ರಾಮ- ಭರತರ ಅನ್ಯೋನ್ಯತೆ ಎಷ್ಟಿತ್ತು, ಅವರ ನಡುವೆ ಎಂತಹ ಆತ್ಮೀಯತೆಯಿತ್ತು ಎನ್ನುವ ವಿಷಯಗಳೆಲ್ಲ ಇದೊಂದರಿಂದಲೇ ಅರಿಯಬಹುದು. ನಾವಾದರೂ ಅಪರೂಪದ ಆತ್ಮೀಯರ ಆಲಿಂಗನವನ್ನು ಮನಸಾರೆ ಆನಂದಿಸುವುದಿಲ್ಲವೇ!_

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩