🌾📗 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು🌾📗 ಭಾಗ-೧೨

*ಮದ್ವಿಶಿಷ್ಟಾಶ್ಚ ತುಲ್ಯಾಶ್ಚ ಸಂತಿ ತತ್ರ ವನೌಕಸಃ ಮತ್ತಃ ಪ್ರತ್ಯವರಃ ಕಶ್ಚಿನ್ನಾಸ್ತಿ ಸುಗ್ರೀವಸನ್ನಿಧೌ*

_ಹನುಮನ ಮಾತು. ವಿನಯ ಮೂರ್ತಿವೆತ್ತಂತಿದೆ ಈ ವಾಕ್ಯ. ಸೀತೆ ಹನುಮನ ಬಳಗದ ಬಲದ ಬಗ್ಗೆ ಸಂಶಯಿಸಿದಾಗ ಅವನಾಡುವ ಮಾತು. ದೇವಿ, ಸುಗ್ರೀವನ ಬಳಿಯಲ್ಲಿ ನನ್ನ ಶಕ್ತಿಯನ್ನು ಮೀರಿಸಿರುವ ವಾನರ ನಾಯಕರಿದ್ದಾರೆ. ನನಗೆ ಸಮಾನಬಲರೂ ಇದ್ದಾರೆ. ಆದರೆ ನನಗಿಂತ ಕಡಿಮೆ ಬಲದವರು ಯಾರೂ ಇಲ್ಲ. ನಾನೇ ಸಮುದ್ರ ಹಾರಿ ಸುಲಭವಾಗಿ ಬಂದಿರುವಾಗ ಅವರಿಗಿದಾವ ಲೆಕ್ಕ. ಹನುಮನ ಮಾತು ನಮಗೆಲ್ಲ ಪಾಠ. ನಾನು ಹೀಗೆ, ನನ್ನ ಸಾಮರ್ಥ್ಯ ಹೀಗೆ, ನಾನು ಇಷ್ಟು ಓದಿದ್ದೇನೆ, ನನ್ನ ಸಮಾನರು ಯಾರೂ ಇಲ್ಲ ಇತ್ಯಾದಿ ಮೆರೆಯುವ ನಾವು ಹನುಮನ ರೀತಿ ವಿನಯ ತೋರುವುದು ಯಾವಾಗ! ಹಾರಲು ನಾಲ್ಕೈದು ಮಂದಿ ಸಮರ್ಥರಿದ್ದರೂ ಹಾರಿ ಬಂದವನು ಹನುಮನೊಬ್ಬನೇ!ಆದರೆ ಅವನು ತನ್ನ ಪರಾಕ್ರಮವನ್ನು ಎಳ್ಳಷ್ಟೂ ಹೇಳಿಕೊಳ್ಳದೇ ನಾನೇ ಕಡಿಮೆ ಬಲವಂತ. ನನಗಿಂತ ಕಡೆ ಯಾರಿಲ್ಲ ಎನ್ನುವನು. ಇಂತಹ ಗುಣ ನಮಗೆಲ್ಲ ಅನುಕರಣೀಯ._

*ನ ಹಿ ಪ್ರಕೃಷ್ಟಾಃ ಪ್ರೇಷ್ಯಂತೇ ಪ್ರೇಷ್ಯಂತೇ ಹೀತರೇ ಜನಾಃ*

_ಇದು ಇನ್ನೊಂದು ಸುಂದರ ಮಾತು. ದೇವಿ, ದೂರದೂರಿನ ಇಂತಹ ಕೆಲಸಗಳಿಗೆ ರಾಜನು ಹೆಚ್ಚಾಗಿ ಸಾಮಾನ್ಯರನ್ನು ಕಳುಹಿಸುವನು ಹೊರತು ಶ್ರೇಷ್ಠರಾದವರನ್ನು ಎಂದಿಗೂ ಕಳುಹಿಸಲಾರ. ಅವರನ್ನು ಕಳೆದುಕೊಂಡರೆ ಎಂಬ ಭಯ ವ್ಯಾಪಿಸಿರುತ್ತದೆ. ಹಾಗಾಗಿ ನಾನು ಕಪಿಗಳಲ್ಲಿ ಅತ್ಯಂತ ಕನಿಷ್ಠ. ಉಳಿದ ಕಪಿ ವೀರರೆಲ್ಲರೂ ಶ್ರೇಷ್ಠರೇ! ಅದರಲ್ಲಿ ನಿನಗೆ ಸಂದೇಹ ಬೇಡ. ಅವರೆಲ್ಲರೊಡಗೂಡಿ ನಿನ್ನ ಬಂಧನ ಬಿಡಿಸುವೆವು. ಇಲ್ಲೂ ಹನುಮಂತನ ವಿನಯ ಮತ್ತಷ್ಟು ಶೊಭಿಸಿದೆ. ಹನುಮನ ಸಾಮರ್ಥ್ಯ ಅರಿತೇ ರಾಮಾಗಮನದ ಕಾಲದಲ್ಲಿ ಸುಗ್ರೀವ ಯಾರೆಂದು ಅರಿಯಲು ಕಳುಹಿದ್ದು. ಆಗ ಅವನ ಹಾವ ಭಾವ ಮಾತು ಇದನ್ನೆಲ್ಲಾ ವರ್ಣಿಸುವ ರಾಮ ಇವನು ಅಸಾಮಾನ್ಯನೆಂದು ಹೊಗಳುತ್ತಾನೆ. ನಾಲ್ಕು ವೇದ ಶಾಸ್ತ್ರ ಪಾರಂಗತನೆಂದೂ ಹೇಳುತ್ತಾನೆ. ಅಂತಹ ಶ್ರೇಷ್ಠ ಹನುಮನು ಉಳಿದ ಕಪಿವೀರರೆಲ್ಲ ನನಗಿಂತ ಶ್ರೇಷ್ಠರು ಎನ್ನುವುದು ನಿಜಕ್ಕೂ ವಿನೀತ ಭಾವ. ನಾವು ಪರರು ಅಥವಾ ಪರಿಚಿತರು ಎದುರಿದ್ದಾಗ ಕೆಲವೊಮ್ಮೆ ಹೊಗಳಬಹುದೇನೋ! ಅನ್ಯ ಕಾರ್ಯಲಾಭಕ್ಕಾಗಿ. ಆದರೆ ದೂರದಲ್ಲಿದ್ದಾಗಲೂ ಇಷ್ಟು ಮನದುಂಬಿ ಇತರರನ್ನು ಹೊಗಳಲು ನಮಗೆ ಸಾಧ್ಯವೇ! ಇದು ಗುಣಗ್ರಾಹಿತ್ವಕ್ಕೆ ಸುಂದರ ನಿದರ್ಶನ‌. ನಾವೂ ಇತರರ ದೋಷ ಲೆಕ್ಕಿಸದೇ ಅವರ ಗುಣಗಳನ್ನು ಕಂಡು ಸಂಭ್ರಮಿಸೋಣ. ಅದು ನಮ್ಮ ಅಹಮ್ಮಿನ ನಾಶಕ್ಕೂ ಕಾರಣವಾಗುವುದು._

📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩