🌺 ಪ್ರತಿಮಾನಾಟಕದ ಒಂದು ಸುಮ 🌺

*नरपतिनिधनं भवत्प्रवासं भरतविषादमनाथतां कुलस्य | बहुविधमनुभूय दुष्प्रसह्यं गुण इव बह्वपराद्धमायुषा मे ||*


_ಸುಮಂತ್ರನಾಡುವ ಮಾತು. ರಾಮ ತಂದೆಯನ್ನು ನೆನೆಸಿಕೊಂಡು ಸುಮಂತ್ರನಿಗೆ ನಮಸ್ಕರಿಸಿದನು. ಆಗ ಅವನು ದುಃಖದಿಂದ ಆಡುವ ಮಾತು. ಇದನ್ನೆಲ್ಲ ನೋಡಲು ನಾನು ಬದುಕಿರಬೇಕಿತ್ತಾ? ದಶರಥನ ಜೊತೆಗೆ ಸ್ವರ್ಗ ಸೇರಿದ್ದರೆ ಎಷ್ಟೋ ಸಂತೋಷದಿಂದಿರುತ್ತಿದ್ದೆ. ಒಡೆಯನ ಅಕಾಲಿಕ ಮರಣ. ಈ ವಂಶದಲ್ಲಿ ಜನಿಸಿದವರಾರೂ ಅರಮನೆಯಲ್ಲಿ ಸಾವನ್ನಪ್ಪಿಲ್ಲ. ವಯಸ್ಸಾದ ನಂತರ ಅರಣ್ಯದಲ್ಲಿ ವಾನಪ್ರಸ್ಥಾಶ್ರಮವನ್ನು ನಡೆಸಿ ಯೋಗದಿಂದ ಪ್ರಾಣ ಬಿಡುವವರ ಮಧ್ಯೆ ನನ್ನೊಡೆಯ, ಮಿತ್ರ, ಆಪ್ತ ಎಲ್ಲವೂ ಆಗಿದ್ದ ನರಪತಿ ಹೊರಟುಹೋದ. ಪ್ರಜೆಗಳಿಗೆಲ್ಲ ಪ್ರೀತಿಪಾತ್ರನಾದ ಗುಣಗಳ ಗಣಿಯಾದ ನೀನು ಕಾಡಿಗೆ ಹೋಗುವಂತಾಯಿತು. ನೀನಾದರೂ ರಾಜ್ಯವಾಳುತ್ತಿದ್ದರೆ ನಿನ್ನಲ್ಲೇ ನಿನ್ನಪ್ಪನನ್ನು ಕಂಡು ಧನ್ಯನಾಗುತ್ತಿದ್ದೆ. ಆ ಅವಕಾಶವನ್ನೂ ವಿಧಿ ಕಿತ್ತುಕೊಂಡಿತು. ಭರತನಾದರೂ ರಾಜನಾಗುವನೆಂದರೆ ನಿನ್ನ ಪ್ರವಾಸದಿಂದ ಉಲ್ಬಣಿಸಿದ ಅವನ ದುಃಖ ಅಸಾಧ್ಯವಾದುದು. ಇಂತಹ ಸೂರ್ಯವಂಶದ ರಾಜರುಗಳಿದ್ದೂ ಅನಾಥವಾದ ಇಕ್ಷ್ವಾಕು ಕುಲ. ರಾಮ ಭರತ ಮುಂತಾದ ಮಹನೀಯರಿದ್ದೂ ಆಳುವವರಿಲ್ಲದೆ ಅನಾಥವಾಯಿತು ಕುಲ. ಇಂತಹ ಸಹಿಸಲು ಅಶಕ್ಯವಾದ ದುಃಖಗಳನ್ನು ಅನುಭವಿಸುತ್ತಿರುವ ನನಗೆ ಬಹುಕಾಲ ಬದುಕುವುದು ಎಂಬುದು ಅಪರಾಧದಂತೆ ತೋರುತ್ತಿದೆ. ಎಲ್ಲರೂ ದೀರ್ಘಾಯುಷ್ಯವನ್ನು ಹಂಬಲಿಸಿದರೆ ನನಗೆ ದೀರ್ಘಾಯುಷ್ಯವೇ ನಾನು ಮಾಡಿದ ಅಪರಾಧದ ಫಲದಂತಿದೆ. ಮೊದಲೇ ತೀರಿಹೋಗಿದ್ದರೆ ಈ ದುಃಖ ಸಂತತಿಗಳನ್ನು ನೋಡದೇ ಆನಂದದಿಂದ ಜೀವ ಬಿಡುತ್ತಿದ್ದೆ. ಈಗ ಬದುಕಿದ್ದೂ ಅಸಹನೀಯ ದುಃಖಗಳನ್ನು ದಿನಂಪ್ರತಿ ನೋಡುವ ನನ್ನ ಬದುಕು ಯಾರು ತಾನೇ ಬಯಸಿಯಾರು? ಸುಮಂತ್ರನ ಮಾತಿನಿಂದ ರಾಮನಿಗೂ ಅಳುಬರುತ್ತದೆ. ಅಂತಹ ಮಾರ್ಮಿಕವಾದ ಮಾತು. ಜನರು ಆಡುವ ಇದನ್ನೆಲ್ಲಾ ನೋಡಲು ಬದುಕಿರಬೇಕಿತ್ತಾ ಎನ್ನುವ ಮಾತನ್ನೇ ಕವಿ ಸುಮಂತ್ರನ ಪಾತ್ರದಲ್ಲಿ ಹೇಳಿಸಿದ್ದಾನೆ. ರಾಮಾಯಣದಲ್ಲಿ ಉಲಿದವರಿಗಿಂತಲೂ ಧರ್ಮಿಷ್ಠನಾದ ಸುಮಂತ್ರನ ದುಃಖ ಹೆಚ್ಚಿನದ್ದೇನೋ!_

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩