🌺 ಪ್ರತಿಮಾನಾಟಕದ ಒಂದು ಸುಮ 🌺

*रघोश्चतुर्थोयमजात् तृतीय: पितु: प्रकाशस्य तव द्वितीय: | यस्यानुजस्त्वं स्वकुलस्य केतोस्तस्यानुजोयं भरत: कुमार: ||*

_ಲಕ್ಷ್ಣಣನಿಗೆ ಸುಮಂತ್ರ ಹೇಳುವ ಮಾತು. ನಮಸ್ಕರಿಸಿದ ಭರತನನ್ನು ಎಬ್ಬಿಸಿ ಯಾರಿವನು ತಾತ ಎಂದಾಗ ಹೇಳಿದ ಮಾತು. ಇವ ನಿಮ್ಮವನೇ, ರಘುವಿನಿಂದ ನಾಲ್ಕನೆಯವನು, ಅಜನಿಂದ ಮೂರನೆಯವನು, ಲೋಕವಿಖ್ಯಾತನಾದ ನಿನ್ನ ತಂದೆಗೆ ಎರಡನೆಯವನು, ( ಆತ್ಮಾ ಪ್ರಥಮಃ ಆತ್ಮಜೋ ದ್ವಿತೀಯಃ ಎಂಬ ನಿಯಮದಂತೆ ತಾನು ಮೊದಲನೆಯವನು ಮಗ ಎರಡನೆಯವನು) ಅಷ್ಟೇಕೆ ದೂರ, ರಘುವಂಶದ ವಿಜಯಸ್ವರೂಪನಾದ ಯಾವ ರಾಮನ ತಮ್ಮ ನೀನಾಗಿದ್ದಿಯೋ ಅಂತಹ ರಾಮನ ತಮ್ಮನಾದ ಭರತನಿವನು. ಎಂತಹ ಸುಂದರ ಪರಿಚಯ ಸುಮಂತ್ರನದ್ದು. ಬರಿಯ ಒಂದು ಮಾತಿನಲ್ಲಿ ವಂಶವನ್ನು ಪರಿಚಯಿಸುತ್ತಿದ್ದಾನೆ. ಅಷ್ಟಲ್ಲದೇ ವನವಾಸಕ್ಕೆ ಪರೋಕ್ಷ ನಿಮಿತ್ತ ಎಂಬ ಕಾರಣದಿಂದ ಲಕ್ಷ್ಮಣನಿಗೆ ಭರತಮ ಮೇಲೆ ಅಸಮಾಧಾನವಿದ್ದರೆ ಯಾರನ್ನು ನೀನು ಆದರಿಸುವೆಯೋ ಅವನ ತಮ್ಮನಿವನು ಎನ್ನುತ್ತಾ ನಿನ್ನ ಪ್ರೀತಿ ಇವನ ಮೇಲೂ ಇರಲಿ ಎಂಬ ಭಾವ. ರಘುವಿನ ಮರಿಮೊಮ್ಮಗ, ಅಜನ ಮೊಮ್ಮಗ, ದಶರಥನ ಮಗ, ರಾಮನ ತಮ್ಮ ಎನ್ನುತ್ತಾ ಸಂಪೂರ್ಣ ಪರಿಚಯ ಮಾಡಿಕೊಡುವ ಕವಿಶೈಲಿ ನಿಜಕ್ಕೂ ಹೃದ್ಯ. ರಘುವಂಶದ ಧ್ವಜದಂತೆ ಶ್ರೀರಾಮ. ಆ ವಂಶದವರಲ್ಲಿ ಉಳಿದವರಾರೂ ಸಂಪಾದಿಸದಷ್ಟು ಕೀರ್ತಿ ರಾಮನಿಗೊಲಿದಿದೆ. ಹಾಗಾಗಿ ಧ್ವಜದಂತೆ ವಿರಾಜಮಾನನಾದ ರಾಮ ಎಂಬ ನಿರೂಪಣೆ. ಇನ್ನು ದಶರಥನ ಮೇಲೆ ಏನಾದರೂ ಅಸಮಾಧಾನ ಇದ್ದರೆ ಅದರ ನಿವಾರಣೆಗೆ ಪ್ರಕಾಶಸ್ಯ ಎಂಬ ವಿಶೇಷಣ. ಲೋಕದಲ್ಲಿ ತನ್ನ ವರ್ತನೆಯಿಂದ ಪ್ರಕಾಶಿಸಲ್ಪಟ್ಟವನು. ಅಥವಾ ಸೂರ್ಯನಂತೆ ಮೆರೆದವನು ಎಂಬ ಭಾವ. ನೀನೀಗ ಕೈಕೇಯಿಯ ಸಂಬಂಧದಿಂದ ಇವನನ್ನು ಬೇರೆಯವನೆನ್ನಬೇಡ, ಇವನನ್ನು ಭ್ರಾತೃವೆಂದು ಆದರಿಸು ಎಂಬ ಭಾವ ಕೂಡ ಮಿಳಿತವಾಗಿದೆ.ಹೀಗೆ ಭಾಸನ ಈ ಶ್ಲೋಕ ಸುಮಂತ್ರನ ಮನದಾಳವನ್ನು ಸುಂದರವಾಗಿ ಸೆರೆಹಿಡಿದಿದೆ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩