🌹ಮೇಘದೂತದ ಒಂದು ಮಧುರ ಬಿಂದು 🌹

*ये संरम्भोत्पतनरभसा: स्वाङ्गभङ्गाय तस्मिन्मुक्ताध्वानं सपदि शरभा लङ्घयेयुर्भवन्तम् | तान्कुर्वीथास्तुमुलकरकावृष्टिपातावकीर्णान् के वा नस्यु: परिभवपदं निष्फलारम्भयत्ना: ||*

_ಎಲೈ ಮೇಘವೇ, ಹಾಗೆಯೇ ಹಿಮಾಲಯ ಪರ್ವತ ಶ್ರೇಣಿಯಲ್ಲಿ ನೀನು ಸಂಚರಿಸುವಾಗ ಒಂದು ಅಚ್ಚರಿಯನ್ನು ಕಾಣುವಿ. ಆ ಹಿಮಾಲಯದ ಕಾಡುಗಳಲ್ಲಿ ಎಂಟು ಕಾಲಿನ ಶರಭವೆಂಬ ಪ್ರಾಣಿಗಳು ಅಡ್ಡಾಡುತ್ತಿರುತ್ತವೆ. ಕ್ರೂರ ಸ್ವಭಾವದ ಅವುಗಳಿಗೆ ಮದ್ದಾನೆಗಳಲ್ಲಿ ಎಂದಿಗೂ ವೈರ. ಕಪ್ಪಾದ ಬೃಹತ್ ಗಾತ್ರದ ನಿನ್ನನ್ನು ನೋಡಿ ಮದ್ದಾನೆಗಳು ಬಂದವೆಂದು ಭಾವಿಸಿ ನಿನ್ನ ಮೇಲೆ ನೆಗೆಯಲು ಪ್ರಯತ್ನಿಸುತ್ತವೆ. ಅದು ಅವುಗಳ ದೇಹನಾಶಕ್ಕೆ ಕಾರಣವಾದೀತು. ಮಹಾಪರಾಕ್ರಮಿಯಾದ ಆಕಾಶದೆತ್ತರಕ್ಕೆ ಬೆಳೆದ ನಿನ್ನ ದೇಹವನ್ನು ಅತಿಕ್ರಮಿಸಲು ಸಾಧ್ಯವಾದೀತೇ ಅವುಗಳಿಗೆ? ಒಂದು ವೇಳೆ ಪ್ರಯತ್ನಿಸಿದರೂ ಮೇಲಿಂದ ಬಿದ್ದು ನಾಶವಾದಾವು. ನೀನು ಅವುಗಳ ಅಂತಹ ಪ್ರಯತ್ನವನ್ನು ನಿಷ್ಫಲಗೊಳಿಸಲು ಅವುಗಳ ಗುಂಪಿನ ಮೇಲೆ ದಪ್ಪದಾದ ಆಲಿಕಲ್ಲಿನ ಮಳೆಯನ್ನೇ ಸುರಿಸು. ಆಗ ಹೆದರಿ ಅತ್ತಿತ್ತ ಚದುರಿದ ಶರಭಗಳು ಪಲಾಯನಗೈಯುತ್ತವೆ. ನಿನ್ನನ್ನು ಎದುರು ಹಾಕಿಕೊಂಡು ಅವುಗಳು ನಿಲ್ಲುವುದಿದೆಯೇ! ಎಂದಿಗೂ ಅದು ಸಾಧ್ಯವಿಲ್ಲ. ಏಕೆಂದರೆ ನಿಷ್ಫಲವಾದ ಕಾರ್ಯದಲ್ಲಿ ಉದ್ಯುಕ್ತರಾದವರು ಯಾರೇ ಆಗಿರಲಿ ತಿರಸ್ಕಾರವನ್ನಲ್ಲದೆ ಯಾವ ಫಲವನ್ನು ಪಡೆದಾರು? ಕಾರ್ಯದಲ್ಲಿ ತೊಡಗುವ ಮುನ್ನ ಇದು ನಮಗೆ ಸಾಧ್ಯವೇ ಫಲದಾಯಕವೇ ಸಂಪೂರ್ಣವಾಗುವುದೇ ನನ್ನ ಸಾಮರ್ಥ್ಯಕ್ಕನುಗುಣವಾಗಿ ಇದೆಯೇ ಇತ್ಯಾದಿ ವಿಚಾರ ಮಾಡಿ ತೊಡಗಬೇಕು. ಇಲ್ಲದಿದ್ದರೆ ಕಾರ್ಯವು ನಿಷ್ಫಲವಾಗಿ ಅವಮಾನ ಅನುಭವಿಸಬೇಕಾಗುವುದು ಶರಭಗಳ ಪ್ರಯತ್ನದಂತೆ. ಹಾಗಾಗಿ ಕಾರ್ಯ ಸಾಫಲ್ಯತೆಯನ್ನು ಮನಗಂಡೇ ಮುಂದಡಿ ಇಡುವುದು ಬುದ್ಧಿವಂತರ ಲಕ್ಷಣವೆಂಬ ಉತ್ತಮ ಪಾಠವನ್ನು ಕವಿ ನೀಡಿದ್ದಾನೆ._


📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩