📙 ವೇದ- ಧರ್ಮ ಭಾಗ-೧೫

*ಉಪನಿಷತ್ತುಗಳು*

ಭಾರತೀಯ ದರ್ಶನಗಳ ಅಥವಾ ತತ್ವಗಳ ಮೂಲ ಯಾವುದೆಂದು ಹುಡುಕುತ್ತಾ ಹೋದರೆ ಅಮೃತದಂತೆ ಕಾಣುವುದು ಉಪನಿಷತ್ತು.ಇದು ಆಧ್ಯಾತ್ಮಿಕ ಬಂಧುಗಳಿಗೆ ಮಾನಸಸರೋವರವಿದ್ದಂತೆ. ಉಪನಿಷತ್ತುಗಳನ್ನು ಅರ್ಥೈಸಿಕೊಳ್ಳಲು ಅಗಾಧ ಜ್ಞಾನ ಅವಶ್ಯಕ. ಮಾನಸಸರೋವರದಲ್ಲಿ ಮಿಂದೇಳಲು ಹೇಗೆ ಶ್ರದ್ಧೆ ತಾಳ್ಮೆಗಳು ಬೇಕೋ ಹಾಗೇ ಉಪನಿಷತ್ತಿನ ಅಧ್ಯಯನ. ಇದರಲ್ಲಿ ಜ್ಞಾನವೂ ಇದೆ, ವಿಜ್ಞಾನವೂ ಇದೆ. ಉಪನಿಷತ್ತುಗಳ ಅಧ್ಯಯನ ಲೌಕಿಕ ಬದುಕಿಗೂ ಅತ್ಯಾವಶ್ಯಕ. ಮೋಕ್ಷ ಬಯಸುವ ಬೈರಾಗಿಗಳಿಗೂ ಇದೇ ಉಪನಿಷತ್ತು ಆಶ್ರಯತಾಣ. ಈ ಎಲ್ಲಾ ಕಾರಣಗಳಿಂದಲೇ ದಾರ್ಶನಿಕರೆಲ್ಲ ಬೇರೆ ಬೇರೆ ಉಪನಿಷತ್ತುಗಳಿಗೆ ಭಾಷ್ಯವನ್ನು ಬರೆದು ತಮ್ಮ ತಮ್ಮ ವಿಚಾರವನ್ನು ಅವುಗಳಲ್ಲಿ ಗುರುತಿಸಿದ್ದಾರೆ, ಅಥವಾ ತಾವು ಕಂಡುಕೊಂಡ ಸತ್ಯಗಳನ್ನು ಉಪನಿಷತ್ತುಗಳಲ್ಲಿ ಗುರುತಿಸಿದ್ದಾರೆ.

ಉಪ ಮತ್ತು ನಿ ಎಂಬ ಎರಡು ಉಪಸರ್ಗಗಳು ಸದ್ ಅಥವಾ ಶದ್ ಎಂಬ ಧಾತುವಿಗೆ ಸೇರಿ ಈ ಪದ ಹುಟ್ಟಿಕೊಂಡಿದೆ. ಉಪ ಎಂದರೆ ಸಮೀಪ. ಗುರುಗಳ ಸಮೀಪ ಸದ್ ಎಂದರೆ ಕುಳಿತು ವಿದ್ಯೆಯನ್ನು ಅಧ್ಯಯನ ಮಾಡುವುದೇ ಉಪನಿಷತ್ ಎಂಬ ಶಬ್ದದ ಮೂಲಾರ್ಥ. ಈ ಧಾತುವು ಮೂರು ಅರ್ಥಗಳನ್ನು ಒಳಗೊಂಡಿದೆ. *ವಿಶರಣ,ಗತಿ, ಅವಸಾದನ* ಎಂಬುದಾಗಿ. ವಿಶರಣ ಎಂದರೆ ನಾಶ. ಮೊದಲಿಗೆ ತಲೆಯಲ್ಲಿ ತುಂಬಿಕೊಂಡ ಅಜ್ಞಾನವನ್ನು ಒಡಿಸಬೇಕು. ಖಾಲಿ ಮಡಕೆಯಲ್ಲಿ ನೀರು ತುಂಬಬಹುದೇ ಹೊರತು ತುಂಬಿದ ಮಡಕೆಯಲ್ಲಿ ಅಲ್ಲ. ಹಾಗಾಗಿ ಅಜ್ಞಾನನಾಶ ಮೊದಲ ಘಟ್ಟ. ಎರಡನೆಯದು ಗತಿ ಎಂಬ ಅರ್ಥವಿದೆ. ಲೋಕದ ರೂಢಿಯಂತೆ ಗತಿ ಅಂದರೆ ಮಾರ್ಗ. ನಿನಗೊಂದು ಗತಿ ಕಾಣಿಸುವೆನು ಎಂದಾಗ ಯಾವುದಾದರೂ ದಾರಿಯನ್ನು ಕರುಣಿಸುವೆ ಎಂಬ ಅರ್ಥ ಬರುವುದು. ಈ ಉಪನಿಷತ್ತುಗಳ ಅಧ್ಯಯನ ಬಂಧನದಿಂದ ಬಿಡುಗಡೆ ಹೊಂದಿ ಮೋಕ್ಷವೆಂಬ ದಾರಿಯೆಡೆ ಕೊಂಡೊಯ್ಯುವುದು. ಹಾಗಾಗಿ ಇದರ ಅಧ್ಯಯನವು ನಮ್ಮ ಬದುಕಿಗೊಂದು ಗತಿ ತೋರುವುದು. ಮೂರನೆಯದಾಗಿ ಅವಸಾದನ ಅಂದರೆ ಕೊನೆಗೊಳ್ಳುವಿಕೆ. ನಮ್ಮ ಸಂಶಯಗಳ ಕೊನೆಗೊಳ್ಳುವಿಕೆಯೇ ಜ್ಞಾನದ ಪರಾಕಾಷ್ಠೆ. ಸಂಶಯ ಅಥವಾ ವಿಪರೀತ ಜ್ಞಾನ ಇರುವವರೆಗೆ ಭಗವಂತನ ಚಿತ್ರಣ ದೊರಕದು. ಅಂತಹ ಎಲ್ಲ ಅಡೆತಡೆಗಳನ್ನು ಉಪನಿಷತ್ತುಗಳ ಅಧ್ಯಯನವು ಹೊಡೆದೋಡಿಸುವುದು.

ನಮ್ಮಲ್ಲಿ ಅಜ್ಞಾನವಿದ್ದಾಗ ಸರಿ-ತಪ್ಪುಗಳ ಸರಿಯಾದ ವಿಮರ್ಶೆ ನಮಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಮೊದಲು ಅದನ್ನು ತೆಗೆಯಬೇಕು. ಇದಾದ ನಂತರ ಗುರಿ ನಿಗದಿಪಡಿಸುವ ಕಾರ್ಯ ಆರಂಭವಾಗುವುದು. ಅನಂತರ ಬಂದ ಅಡೆತಡೆಗಳನ್ನು ನಿವಾರಿಸಿ ಗುರಿ ಸಾಧಿಸುವುದೇ ಉಪನಿಷತ್ತುಗಳ ಉದ್ದೇಶ. ಗುರುವಿನ ಮಾರ್ಗದರ್ಶನದಲ್ಲಿ ಇದು ಸಾಗಿದಾಗ ಅದಕ್ಕೊಂದು ರೂಪು ರೇಷೆ ದೊರಕುವುದು. ಇಲ್ಲದಿದ್ದರೆ ತಾವೇ ದೇವರು ತಮ್ಮಿಂದಲೇ ಜಗತ್ತು ತಮ್ಮ ನಡೆಗಳೆಲ್ಲಾ ಸರಿ ಎನ್ನುವ ಸ್ವಯಂಘೋಷಿತ ದೇವ- ಮಾನವರ ಸ್ಥಿತಿ ಬಂದೀತು. ಅನೇಕರು ಉಪನಿಷತ್ತುಗಳ ಆಳವಾದ ಅಧ್ಯಯನದ ನಂತರವೂ ತಪ್ಪು ದಾರಿ ಹಿಡಿದದ್ದು ಅವರಿಗೆ ಗುರುವಿನ ಮಾರ್ಗದರ್ಶನದ ಕೊರತೆಯ ಕಾರಣದಿಂದ. ಅದನ್ನೇ ದಾಸರು ಹೇಳಿದ್ದು *ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ* *ಗುರೌ ರುಷ್ಟೇ ನ ಕೋಪಿ ತ್ರಾತಾ* ಇತ್ಯಾದಿ ಮಾತುಗಳು.

ಜನನ ಮರಣವೆಂಬ ಚಕ್ರದ ಬಂಧನದಿಂದ ಬಿಡುಗಡೆಯಾಗಲು ಮೋಹವೆಂಬ ಪಾಶವನ್ನು ಕಿತ್ತೊಗೆಯಬೇಕು. ಅದನ್ನು ಸಾಧ್ಯವಾಗಿಸುವುದು ಉಪನಿಷತ್ತುಗಳ ಅಧ್ಯಯನ.

ಶಂಕರರ ಮಾತಿನಂತೆ *ಮಾನವನಿಗೆ ಬ್ರಹ್ಮನ ಬಗೆಗೆ ತನ್ನ ಬಗೆಗೆ ತಿಳಿಸಿಕೊಡುವ ಸಾಧನ, ಭಕ್ತಿ- ಶ್ರದ್ಧೆಯಿಂದ ಕೂಡಿದ ಅವುಗಳ ಅಧ್ಯಯನ ಅವನ ಅವಿದ್ಯೆಯ ದುಃಖದ ನಾಶಕ್ಕೆ ಕಾರಣ* ಅದು ಉಪನಿಷತ್ತು. ಮಧ್ವರು *ಭಗವಂತನ ಸರ್ವೋತ್ತಮತ್ವ ತಿಳಿಯಲು ಉಪನಿಷತ್ತುಗಳು ಅವಶ್*ಯ ಎನ್ನುತ್ತಾರೆ. ಡ್ಯೂಸನ್ ಎಂಬ ತತ್ವಜ್ಞಾನಿಯೊಬ್ಬ *ವೇದದ ರಹಸ್ಯವೇ ಉಪನಿಷತ್ತು* ಎಂದಿದ್ದಾನೆ.

ಉಪನಿಷತ್ತುಗಳ ಮುಖ್ಯ ವಿಷಯ ಜೀವ- ಜಗತ್ತು- ಪರಮಾತ್ಮ-ಸೃಷ್ಟಿ ಇವುಗಳು.
ಛಾಂದೋಗ್ಯ ಉಪನಿಷತ್ತು ಬ್ರಹ್ಮನ ಸ್ವರೂಪವನ್ನು ಸುಂದರವಾಗಿ ನಿರೂಪಿಸುವುದು. ಮುಂಡಕ ಉಪನಿಷತ್ತು *ಯತ್ತದದ್ರೇಶ್ಯಂಅಗ್ರಾಹ್ಯಂಅಚಕ್ಷು: ಅಶ್ರೋತ್ರಂ ಅಪಾಣಿಪಾದಂ ತದ್ಭೂತಯೋನಿಂ* ಎಂದೆಲ್ಲಾ ಕರ್ಮೇಂದ್ರಿಯಗಳಿಂದ ಸಹಜವಾಗಿ ಗ್ರಹಿಸಲ್ಪಡದಿರುವ ವಿಶಿಷ್ಟ ಸ್ವರೂಪವನ್ನೇ ಬ್ರಹ್ಮ ಎನ್ನುವುದು. ತೈತ್ತಿರಿಯೋಪನಿಷತ್ತು ಬ್ರಹ್ಮನನ್ನು ನೀವು ಹೇಗೆ ತಿಳಿಯುವಿರೊ ಅದು ಅದೇ ಸ್ವರೂಪ ಹೊಂದುವುದು ಎನ್ನುತ್ತದೆ.

*ಸತ್ಯಂ ಜ್ಞಾನಂ ಅನಂತಂ ಬ್ರಹ್ಮ* ಎನ್ನುತ್ತದೆ ಅದೇ ಉಪನಿಷತ್ತು. ಈ ಮೂರರ ಸಂಗಮವೇ ಬ್ರಹ್ಮ. ಪಂಚಕೋಶಗಳು, ಪ್ರಾಣವಿದ್ಯೆ, ಮೋಕ್ಷ, ಆತ್ಮನ ಸ್ವರೂಪ ಇತ್ಯಾದಿ ಅನೇಕ ವಿಷಯಗಳ ಬಗ್ಗೆ ಇವುಗಳು ಬೆಳಕುಚೆಲ್ಲುತ್ತವೆ.

ಉಪನಿಷತ್ತುಗಳು ಪ್ರಸಿದ್ಧವಾದವು ಹತ್ತಿದ್ದರೂ ನೂರಕ್ಕೂ ಹೆಚ್ಚು ನಾಲ್ಕು ವೇದಗಳಲ್ಲಿ ಕಂಡುಬರುತ್ತವೆ.

ಋಗ್ವೇದದಲ್ಲಿ ೧೦ ಉಪನಿಷತ್ತುಗಳಿವೆ.
ಶುಕ್ಲಯಜುರ್ವೇದಕ್ಕೆ ಸಂಬಂಧಿಸಿದ ೧೯ ಉಪನಿಷತ್ತುಗಳು, ಕೃಷ್ಣಕ್ಕೆ ಸಂಬಂಧಿಸಿದ ೩೨ ಉಪನಿಷತ್ತುಗಳು ಇವೆ.
ಸಾಮವೇದದಲ್ಲಿ ೧೬ ಉಪನಿಷತ್ತುಗಳು ಇವೆ.
ಅಥರ್ವವೇದದಲ್ಲಿ ೩೧ ಉಪನಿಷತ್ತುಗಳು ಇವೆ.

ಇವುಗಳಲ್ಲಿ *ಈಶಾವಾಸ್ಯ, ಕೇನ, ಕಠ, ಐತರೇಯ, ತೈತ್ತಿರೀಯ, ಬೃಹದಾರಣ್ಯಕ, ಮುಂಡಕ, ಮಾಂಡೂಕ್ಯ, ಛಾಂದೋಗ್ಯ, ಪ್ರಶ್ನೋಪನಿಷತ್* ಇಷ್ಟು ಅರ್ಥಸೌಂದರ್ಯದ ದೃಷ್ಟಿಯಿಂದ ಪ್ರಮುಖವಾಗಿವೆ.

📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩