🌹 ಮೇಘದೂತದ ಒಂದು ಬಿಂದು 🌹

*तस्योत्सङ्गे प्रणयिन इव स्रस्तगङ्गादुकूलां न त्वं दृष्ट्वा न पुनरलकां ज्ञास्यसे कामचारिन् | या व: काले वहति सलिलोद्गारमुच्चैर्विमाना मुक्ताजालग्रथितमलकं कामिनीवाभ्रवृन्दम् ||*

_ಎಲೈ ಮನಬಂದಲ್ಲಿ ಸಂಚರಿಸುವ ಕಾಮಚಾರಿಯೇ! ನೀನು ಹಾಗೇ ಪಯಣಿಸುತ್ತಾ ನನ್ನೊಡೆಯನ ಮನೆ ಸಮೀಪಿಸುವಿ. ಕೈಲಾಸಗಿರಿಯೆಂಬ ಪ್ರಿಯತಮನ ಮೇಲ್ಭಾಗದಲ್ಲಿ ಅಥವಾ ತೊಡೆಯ ಮೇಲೆ ಕುಳಿತಿರುವಂತೆ, ಜಾರುತ್ತಿರುವ ಗಂಗೆಯೆಂಬ ಪಟ್ಟೆವಸ್ತ್ರವಿರುವ, ಅಥವಾ ಹರಿದುಹೋಗುತ್ತಿರುವ ಶುಭ್ರ ವಸ್ತ್ರದಂತಿರುವ ಆ ಅಲಕೆಯೆಂಬ ಪಟ್ಟಣವನ್ನು ನೋಡು. ಕೈಲಾಸಪರ್ವತದ ಸ್ವಲ್ಪ ಮೇಲ್ಭಾಗದಲ್ಲಿ ಈ ಪರ್ವತವಿದೆ. ಅದನ್ನೇ ಕವಿ ಪ್ರಿಯನ ತೊಡೆಯ ಮೇಲೆ ಕುಳಿತ ರಮಣಿಯಂದದಿ ಎಂದು ವರ್ಣಿಸಿದ್ದಾನೆ. ಅಲ್ಲೇ ಹರಿದುಬರುತ್ತಿರುವ ಬಿಳಿಯ ಗಂಗೆಯ ನೀರನ್ನು ಕವಿ ಸೀರೆಗೆ ಹೋಲಿಸಿದ್ದಾನೆ. ಪ್ರಿಯನ ಸ್ಪರ್ಶದಿಂದ ನಾಚಿ ವಸ್ತ್ರವು ಜಾರಿಹೋಗುವಂತೆ ಗಂಗೆ ಹರಿಯುತ್ತಿರುವಳು. ಇಚ್ಛಾನುಸಾರವಾಗಿ ತಿರಿಗಾಡುವ ನೀನಾದರೂ ಇದನ್ನು ಖಂಡಿತವಾಗಿಯೂಗಮನಿಸುವೆ. ಉನ್ನತವಾದ ಏಳು ಉಪ್ಪರಿಗೆಗಳ ಭವನಗಳಿರುವ ಯಾವ ಅಲಕೆಯು ನಿಮ್ಮ ಕಾಲದಲ್ಲಿ ( ಮಳೆಗಾಲದಲ್ಲಿ) ನಿರಂತರವಾಗಿ ಸುರಿಯುತ್ತಿರುವ ನೀರಿನ ಧಾರೆಯುಳ್ಳ ಮೇಘಸಮುದಾಯವನ್ನು ಸುಂದರಿಯು ಮುತ್ತಿನ ಸರದಿಂದ ಇಳಿಬಿಟ್ಟಿರುವ ಮುಂಗುರುಳನ್ನೆಂಬಂತೆ ಧರಿಸುತ್ತದೆಯೋ ಅಂತಹ ಅಲಕೆಯನ್ನು ಸಂದರ್ಶಿಸು. ಅಲಕೆಯಲ್ಲಿ ಎಲ್ಲೆಡೆ ಎತ್ತರೆತ್ತರದ ಏಳು ಮಹಡಿಗಳ ಮನೆಗಳು. ಮಳೆಗಾಲದಲ್ಲಿ ಆ ಸೌಧಗಳ ಮೇಲೆ ಸತತವಾಗಿ ಸುರಿಯುವ ನೀರು ಮುತ್ತಿನ ಹಾರದಂತೆ ಕಾಣುವುದು. ಅದರ ಮೇಲೆ ಕಪ್ಪಾದ ಮೋಡಗಳು ಮನೆಮಾಡಿರುತ್ತವೆ. ಇದನ್ನೇ ಕವಿ ಸುಂದರಿಯ ಮೊಗದಂದದಿ ಎಂದಿರುವನು. ಹಣೆಯ ಮೇಲೆ ಅಲಂಕಾರಿಕವಾಗಿ ಮುತ್ತಿನ ಹಾರ ಧರಿಸಿದ ಸುಂದರಿ ಸರಗಳಿಗೊಂಟಂತೆ ಮುಂಗುರುಳುಗಳನ್ನು ಇಳಿಬಿಡುವಂತೆ ಕಾಣುವುದು ಎಂದು ವರ್ಣಿಸಿದ್ದಾನೆ. ಅಂತಹ ಮನೋಹರವಾದ ಪುರವನ್ನು ನೀನು ಸಂದರ್ಶಿಸು ಎಂಬ ಭಾವ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩