🌺 ಪ್ರತಿಮಾನಾಟಕದ ಒಂದು ಸುಮ 🌺

*गत्वा पूर्वं स्वसैन्यैरभिसरिसमये खं समानैर्विमानै: विख्यातो यो विमर्दे स स इति बहुश: सासुराणां सुराणाम् | स श्रीमान्स्यक्तदेहो दयितमपि विना स्नेहवन्तं भवन्तम् ||*

_ಸುಮಂತ್ರನು ಒಳಗೆ ಬಂದಿದ್ದಾನೆ. ರಾಮನಿಗೆ ಆಶೀರ್ವದಿಸುತ್ತಾನೆ. ರಾಮನು ಅವನನ್ನು ಕಂಡು ತಂದೆಯನ್ನು ನೆನಪಿಸಿಕೊಂಡು ಈ ಮಾತನ್ನು ಹೇಳುತ್ತಾನೆ. ಹಿಂದೆ ದೇವಾಸುರ ಯುದ್ದದಲ್ಲಿ ದೇವತೆಗಳಿಗೆ ಸಹಾಯಕನಾಗಿ ದೇವತೆಗಳಿಂದ ಕಳಿಸಲ್ಪಟ್ಟ ವಿಮಾನವನ್ನೇರಿ ತನ್ನ ಸೈನ್ಯದೊಡನೆ ಆಕಾಶಕ್ಕೆ ಹಾರಿ ಹತ್ತು ದಿಕ್ಕುಗಳಿಂದಲೂ ಅವನೇ! ಅವನೇ! ಎಂದು ಪ್ರಶಂಸೆ ಪಡೆದ ( ಮಹಾವೀರನೆಂದು ಪ್ರಸಿದ್ಧನಾದ) ಈಗ ತನ್ನ ತನುವನ್ನು ತ್ಯಜಿಸಿ ಆತ್ಮೀಯ ಮಿತ್ರನಾದ ನಿನ್ನ ಸ್ನೇಹದಿಂದ ವಂಚಿತನಾಗಿ ಸ್ವರ್ಗದಲ್ಲಿ ತನ್ನ ಪಿತೃಗಳೊಡನೆ ಹೇಗೆ ತಾನೇ ಸಂತೋಷ ಪಟ್ಟಾನು! ಖಂಡಿತವಾಗಿ ಮಿತ್ರನನ್ನು ಅಗಲಿ ಬಹುಕಾಲ ಸಂತೋಷದಿಂದಿರುವುದು ಅಸಾಧ್ಯ. ದಶರಥನು ಹಿಂದೆ ಅಸುರರ ಜೊತೆಗಿನ ಸಮಯದಲ್ಲಿ ( ಸಮಯ= ಯುದ್ಧ) ನಿನ್ನೊಡನೆಯೇ ದೇವಸಹಾಯಾರ್ಥವಾಗಿ ಹೋದನೋ ಅಂತಹ ರಾಜನು ಈಗ ಶರೀರವನ್ನು ತ್ಯಜಿಸಿದರೂ ನಿನ್ನೊಡನಿಲ್ಲದೆ ಹೇಗೆ ತಾನೇ ಸುಖಿಸಿಯಾನು! ನಿಮ್ಮಿಬ್ಬರ ನಡುವಿನ ಆತ್ಮೀಯತೆ ಅಂತಹದ್ದು. ಸುಮಂತ್ರ ಮಂತ್ರಿಯಾಗಿದ್ದರೂ ಅಥವಾ ಅನೇಕ ಮಂತ್ರಿಗಳಿದ್ದರೂ ದಶರಥನಿಗೆ ಉಳಿದೆಲ್ಲರಿಗಿಂತ ಆಪ್ತನಾಗಿದ್ದನು. ಬಹುಕಾಲ ಅವನೊಡನೆ ಬಾಳಿದವನು. ಹಾಗಾಗಿ ಅವರ ಸ್ನೇಹ ಈಗ ದಶರಥನ ದೇಹತ್ಯಾಗದಿಂದ ಸೊರಗಿದೆ ಎಂಬ ಭಾವ. ಅಪ್ಪನ ಮಿತ್ರರನ್ನು ನೋಡಿ ಅಪ್ಪನ ನೆನಪು ಒತ್ತರಿಸಿ ಬಂದು ರಾಮನು ದುಃಖಪಡುವ ರೀತಿಯಿದು. ತಂದೆ ತೀರಿಹೋದಮೇಲೂ ಪ್ರೀತಿ ವ್ಯಕ್ತಪಡಿಸುವ ರಾಮನ ಪಿತೃಭಕ್ತಿ ನಮಗೆಲ್ಲ ಮಾರ್ಗದರ್ಶಕ. ನಾವು ಬದುಕಿದ್ದಾಗಲೂ ಗೌರವಿಸದೇ ಸತ್ತ ಮೇಲೂ ಶ್ರಾದ್ಧಾದಿಗಳನ್ನು ಮಾಡದೇ ಬಿಡುತ್ತೇವೆ. ಕೆಲವರಂತೂ ಅಪ್ಪ ಅಮ್ಮಂದಿರು ಬದುಕಿರುವರೆಂಬ ವಿಷಯವನ್ನೆ ಮರೆತುಬಿಡುತ್ತಾರೆ. ಹೀಗಾಗಿಯೇ  *ಸುಪುತ್ರೇಣ ಕುಲಂ*  ಎಂದಿದ್ದು. ರಾಮನಂತಹ ಪುತ್ರ ಅಥವಾ ಪುತ್ರಿ ಒಬ್ಬರಿದ್ದರೂ ಸಾಕು. ಈ ಶ್ಲೋಕದಲ್ಲಿ ಕೆಲವು ಅಪೂರ್ವ ಪದಗಳಿವೆ. ಅಭಿಸರ ಎನ್ನುವ ಪದ ಸಹಾಯ ಎಂಬ ಅರ್ಥದಲ್ಲಿ ಪ್ರಯೋಗಿಸಲ್ಪಟ್ಟಿದೆ.  ವಿಮರ್ದ ಎನ್ನುವ ಪದ ಯುದ್ಧ ಎನ್ನುವ ಅರ್ಥ ಕೊಡುತ್ತದೆ.ಇನ್ನು ದಶರಥನ ಶೌರ್ಯವನ್ನು ಅತಿಶಯವಾಗಿ ವರ್ಣಿಸುವ ಕಾರಣದಿಂದ *ಉದಾತ್ತ* ಎನ್ನುವ ಅಲಂಕಾರವಿದೆ. ಪೂರ್ವಾರ್ಧದ ವೀರರಸವು ಉತ್ತರಾರ್ಧದ ಕರುಣರಸಕ್ಕೆ ಅಂಗವಾಗಿ ನವಿರಾದ ಚಿತ್ರಣ ಒದಗಿಸಿದೆ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩