🌾📗 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 📗🌾 ಭಾಗ-೧೨

*ವಿಧಿರ್ನೂನಮಸಂಹಾರ್ಯಃ ಪ್ರಾಣಿನಾಂ ಪ್ಲವಗೋತ್ತಮ*

_ಸೀತೆ ಹನುಮನಿಗೆ ಹೇಳುವ ಮಾತು. ಕಪಿವರನೇ, ನಿಶ್ಚಯವಾಗಿಯೂ ಪ್ರಾಣಿಗಳಿಗೆ ಅಥವಾ ಜೀವಿಗಳಿಗೆ ವಿಧಿನಿಯಮವನ್ನು ಉಲ್ಲಂಘಿಸಲು ಸಾಧ್ಯವಿಲ್ಲ. ಅನೇಕ ಬಾರಿ ನಮ್ಮ ಉತ್ತಮ ಪ್ರಯತ್ನಗಳೂ ಮಣ್ಣುಪಾಲಾಗುತ್ತವೆ. ಕೆಲವೊಮ್ಮೆ ಹೆಚ್ಚಿನ ಪರಿಶ್ರಮವಿಲ್ಲದೆಯೂ ಕಾರ್ಯ ನಡೆದುಹೋಗುತ್ತದೆ. ಇದಕ್ಕೆಲ್ಲ ಕಾರಣ ವಿಧಿಯೊಂದೇ! ವಿಧಿಯನ್ನು ಮೀರಿ ನಡೆಯಲು ಸಾಧ್ಯವಿಲ್ಲ. ಈಗ ಅತ್ಯಂತ ಪರಾಕ್ರಮಿಗಳಾದ ರಾಮಲಕ್ಷ್ಮಣರನ್ನು ನೋಡು, ವಿಧಿಯ ಕೈಗೆ ಸಿಕ್ಕು ವ್ಯಸನಪಡುತ್ತಿದ್ದಾರೆ ಎಂದು ಸೀತೆ ದೃಷ್ಟಾಂತ ಕೊಡುತ್ತಾಳೆ. ಯಾವ ತಪ್ಪೂ ಮಾಡದ ನಾನೂ ಇಂತಹ ವ್ಯಸನ ಪಡಲು ಕಾರಣವಾದರೂ ಏನು! ಅದು ವಿಧಿಯೊಂದೇ ಆಗಿದೆ.

*ಅವ್ಯವಸ್ಥೌ ಹಿ ದೃಶ್ಯೇತೇ ಯುದ್ಧೇ ಜಯಪರಾಜಯೌ*

ಇದೂ ಸೀತೆಯೇ ನುಡಿಯುವ ಮಾತು. ಹನುಮನು ತನ್ನ ಬೆನ್ನ ಮೇಲೆ ಕರೆದೊಯ್ಯುವೆನೆಂದಾಗ ಹೇಳಿದ ನುಡಿ. ಯುದ್ಧವೆಂದಾದ ಮೇಲೆ ಇಂತಹವರೇ ಜಯಿಸುತ್ತಾರೆ ಇಂತಹವರು ಸೋಲುತ್ತಾರೆಂದು ಹೇಳಲಸಾಧ್ಯ. ನಿನ್ನ ಬಲವೆಷ್ಟಿದ್ದರೂ ಯುದ್ಧದ ನಿರ್ಣಯ ಏನೆಂದು ಹೇಗೆ ನಿಶ್ಚಯಿಸುವುದು‌. ಹಾಗಾಗಿ ನನ್ನನ್ನು ಕರೆದೊಯ್ಯುವ ಯೋಚನೆ ಬಿಡು. ಅದು ಶಾಸ್ತ್ರಸಮ್ಮತವೂ ಅಲ್ಲ. ನಾವೂ ಎಷ್ಟೋ ಬಾರಿ ನಮ್ಮ ಬಲದ ಮೇಲೆ ಅತಿಯಾದ ನಂಬಿಕೆ ಇಟ್ಟು ಮೂರ್ಖರಾಗುತ್ತೇವೆ. ಯುದ್ಧದಲ್ಲಿ ಬಲವೊಂದೆ ಜಯಿಸಲು ಕಾರಣವಲ್ಲ. ಅದೂ ಒಂದು ಕಾರಣವಷ್ಟೇ. ಸೀತೆಯ ಮಾತು ಅತಿ ಆತ್ಮವಿಶ್ವಾಸ ತೋರುವವರಿಗೊಂದು ಪಾಠ.

*ಭರ್ತೃಭಕ್ತಿಂ ಪುರಸ್ಕೃತ್ಯ ರಾಮಾದನ್ಯಸ್ಯ ವಾನರ ನಾಹಂ ಸ್ಪೃಷ್ಟುಂ ಸ್ವತೋ ಗಾತ್ರಮಿಚ್ಛೇಯಂ ವಾನರೋತ್ತಮ*

ಸೀತೆ ಇನ್ನೊಂದು ಕಾರಣವನ್ನೂ ಹೇಳುವಳು. ಪತಿಭಕ್ತಿಯೇ ಶ್ರೇಷ್ಠವಾಗಿರುವ ನನಗೆ ರಾಮನ ಹೊರತಾದ ಪುರುಷರ ಶರೀರ ಸ್ಪರ್ಶ ಮಾಡಲು ಇಚ್ಛಿಸಲಾರೆ. ಅದು ಸ್ತ್ರೀ ಧರ್ಮವೂ ಅಲ್ಲ. ಸೀತೆಯ ನಿರಾಕರಣೆಗೆ ಇಲ್ಲಸಲ್ಲದ ಕಲ್ಪನೆ ಕಟ್ಟುವ ಅಥವಾ ಸೀತೆಗೂ ಹನುಮನಿಗೂ ಸಂಬಂಧ ಕಲ್ಪಿಸುವ ಮತಿಹೀನರಿಗೆಲ್ಲ ಇಲ್ಲಿ ಸ್ಪಷ್ಟ ಉತ್ತರವಿದೆ. ಹಾಗಾದರೆ ಹಿಂದೆ ರಾವಣನ ಸ್ಪರ್ಶವೆಂದರೆ ಅದಕ್ಕೂ ಹೀಗೆ ನುಡಿಯುತ್ತಾಳೆ.
*ಅನೀಶಾ ಕಿಂ ಕರಿಷ್ಯಾಮಿ  ವಿನಾಥಾ ವಿವಶಾ ಸತೀ*

ರಾಮನಿಲ್ಲದ ಆ ಸಮಯದಲ್ಲಿ ನಾನು ಏನು ತಾನೇ ಮಾಡಲು ಸಾಧ್ಯ? ಬಲಾತ್ಕಾರವಾಗಿ ಆಕಾಶಮಾರ್ಗದಲ್ಲಿ ಹೊತ್ತೊಯ್ಯುತ್ತಿದ್ದರೆ ಅಬಲೆಯಾದ ನಾನು ಏನು ಮಾಡಲಿ? ಅದು ನಾನಾಗಿ ಬಯಸಿದ್ದಲ್ಲ. ಸೀತೆಯ ಸ್ಥಿತಿ ಸ್ತ್ರೀಯರನ್ನು ಬಾಧಿಸಬಾರದೆಂದೇ ಮನುವು ಸ್ತ್ರೀಯರು ರಕ್ಷಿತರಾಗಿರಬೇಕು ಎಂದದ್ದು ಹೊರತು ಸ್ವಾತಂತ್ರ್ಯ ಕಳೆದುಕೊಳ್ಳಬೇಕೆಂದಲ್ಲ.

📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್ ‌.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩