ಮಹಾಭಾರತ ೩೮
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೩೮
*ಬ್ರಾಹ್ಮಣಸ್ಯ ಪ್ರಮತ್ತಸ್ಯ ಹವಿರ್ಧ್ವಾಙ್ಕ್ಷೈರ್ವಿಲುಪ್ಯತೇ ಶಾರ್ದೂಲಸ್ಯ ಗುಹಾಂ ಶೂನ್ಯಾಂ ನೀಚಃ ಕ್ರೋಷ್ಟಾಭಿಮರ್ಶತಿ*
_ಪಾಂಡವರು ಖಾಂಡವಪ್ರಸ್ಥದಲ್ಲಿ ಆಳುತ್ತಿದ್ದಾಗ ಬ್ರಾಹ್ಮಣನೊಬ್ಬನ ಹಸುವನ್ನು ಕಳ್ಳರು ಕದ್ದೊಯ್ಯುತ್ತಾರೆ. ಆಗ ದೂರು ತಂದ ಅವನ ಒಂದು ಮಾತು. ಬ್ರಾಹ್ಮಣನು ಮೈ ಮರೆತಿರುವಾಗ ಕಾಗೆಗಳು ಯಜ್ಞಕ್ಕೆಂದು ಇಟ್ಟ ಹವಿಸ್ಸನ್ನು ಅಪಹರಿಸುತ್ತವೆ. ಸಿಂಹ ಒಳಗಿಲ್ಲದಾಗ ಕ್ಷುದ್ರವಾದ ನರಿ ಅದರ ಗುಹೆಗೆ ನುಗ್ಗಿ ಮಾಂಸ ಭಕ್ಷಿಸುತ್ತದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ಮಗಳಲ್ಲಿ ಅಲ್ಪವೂ ಮೈ ಮರೆಯಬಾರದು. ಮುಂದಿನ ಕ್ಷಣ ಏನಾಗುವುದೆಂಬ ನಿರೀಕ್ಷೆಯಲ್ಲಿ ಜಾಗರೂಕರಾಗಿರಬೇಕು._
*ಉಪಪ್ರೇಕ್ಷಣಜೋsಧರ್ಮಃ ಸುಮಹಾಸ್ಯಾನ್ಮಹೀಪತೇಃ ಯದ್ಯಸ್ಯ ರುದತೋ ದ್ವಾರಿ ನ ಕರೋಮ್ಯದ್ಯ ರಕ್ಷಣಮ್ ಅನಾಸ್ತಿಕ್ಯಂ ಚ ಸರ್ವೇಷಾಮ್ ಅಸ್ಮಾಕಮಪಿ ರಕ್ಷಣೇ ಪ್ರತಿತಿಷ್ಠೇತ ಲೋಕೇಸ್ಮಿನ್ನಧರ್ಮಶ್ಚೈವ ನೋ ಭವೇತ್*
_ಅರ್ಜುನನ ಮಾತು. ಬ್ರಾಹ್ಮಣನ ಗೋಳನ್ನು ಕೇಳಿದ ಪಾರ್ಥನು ಶಸ್ತ್ರಾಗಾರವನ್ನು ಪ್ರವೇಶಿಸ ಹೊರಟರೆ ಅಲ್ಲಿ ಧರ್ಮಜನು ದ್ರೌಪದಿಯೊಡನಿದ್ದನು. ಆದರೆ ತಪಸ್ವಿಯಾದ ಆ ಬ್ರಾಹ್ಮಣನ ಕಣ್ಣೀರು ತೊಡೆಯದಿದ್ದರೆ ತಾನು ಕರ್ತವ್ಯಭ್ರಷ್ಟನಾಗುವೆನೆಂದು ಯೋಚಿಸಿದನು ಗಾಂಡೀವಿ.ಏಕೆಂದರೆ ಯಾರದೇ ಕಷ್ಟವಿರಲಿ ಉಪೇಕ್ಷೆ ಮಾಡುವುದರಿಂದ ರಾಜನಾದವನಿಗೆ ದೊಡ್ಡ ಅಧರ್ಮ ಉಂಟಾಗುತ್ತದೆ. ಬಾಗಿಲಿನಲ್ಲಿ ಗೋಳಿಡುತ್ತಿರುವ ಇವನ ರಕ್ಷಣೆಯನ್ನು ನಾನು ಮಾಡದಿರೆ ನಮ್ಮೆಲ್ಲರಿಗೂ ಧರ್ಮಶ್ರದ್ಧೆ ಇಲ್ಲವೆಂಬ ಅಪಕೀರ್ತಿ ಉಂಟಾದೀತು. ನಮಗೆ ಅಧರ್ಮಾಚರಣೆಯ ಪಾಪವೂ ಉಂಟಾದೀತು. ಅರ್ಜುನನ ಅಥವಾ ಪಾಂಡವರ ಧರ್ಮಪ್ರಜ್ಞೆ ಎಷ್ಟಿತ್ತೆಂಬುದು ಅರಿವಾಗುತ್ತದೆ. ಆಗಿನ ಕಾಲದಲ್ಲೂ ಗೋವುಗಳ ಕಳ್ಳತನ ಅಲ್ಲಲ್ಲಿ ಇತ್ತು. ಆದರೆ ರಾಜನು ಗೋ ಕಳ್ಳರಿಗೆ ಇನಾಮು ಅಥವಾ ಜಾಮೀನು ಕೊಟ್ಟು ಬಿಡದೇ ಅವರನ್ನು ದಂಡಿಸುತ್ತಿದ್ದ. ಬ್ರಾಹ್ಮಣನು ತಪಸ್ವಿಯಾಗಿದ್ದುದು ಅರ್ಜುನನಿಗೆ ಸಹಾಯ ಮಾಡಲು ಪ್ರೇರೇಪಿಸಿತು. ತನ್ನ ಕರ್ಮಗಳಲ್ಲಿ ನಿಷ್ಠೆ, ಲೋಕೋದ್ಧಾರದ ಚಿಂತೆ ಹಾಗೂ ಅದರಲ್ಲಿ ಪ್ರವೃತ್ತಿಯೇ ತಪಸ್ಸು. ಅಂತಹ ಗುಣಗಳಿದ್ದಲ್ಲಿ ಭಗವಂತನೇ ಸಹಾಯ ಮಾಡುತ್ತಾನೆ. ಇಲ್ಲೂ ಅರ್ಜುನ ತಾನು ಶಿಕ್ಷೆ ಅನುಭವಿಸಿದರೂ ತನ್ನ ಪ್ರಜೆಗೆ ಅನ್ಯಾಯ ಆಗಬಾರದೆಂದು ಪ್ರವೃತ್ತಿ ಮಾಡುತ್ತಾನೆ._
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ