ರಾಮಾಯಣ ೮೮
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೮೮
*ಊಚುರ್ಲಕ್ಷಣಿನೋ ಯೇ ಮಾಂ ಪುತ್ರಿಣ್ಯವಿಧವೇತಿ ಚ ತೇದ್ಯ ಸರ್ವೇ ಹತೇ ರಾಮೇ ಜ್ಞಾನಿನೋನೃತವಾದಿನಃ*
_ರಾಮರು ನಾಗಪಾಶದಿಂದ ಬಂಧಿತರಾಗಿರುವುದನ್ನು ಹತರಂತೆ ಬಿದ್ದಿರುವುದನ್ನು ಸೀತೆಗೆ ವಿಮಾನದ ಮೂಲಕ ತೋರಿಸಲು ರಾವಣನು ಆಜ್ಞಾಪಿಸುತ್ತಾನೆ. ಅದರಂತೆ ಕೂಡಲೇ ಸೀತೆಯನ್ನು ಬಲದಿಂದ ಹತ್ತಿಸಿ ಆ ದೃಶ್ಯವನ್ನು ತೋರಿಸುವರು. ಈ ಘಟನೆ ನೋಡಿದರೆ ಆಗಿನ ಕಾಲದಲ್ಲಿ ಸಂವಹನವು ತುಂಬಾ ವೇಗದಿಂದ ನಡೆಯುತ್ತಿತ್ತೆಂದು ಊಹಿಸಬಹುದು. ಸೀತಗೆ ವಿಷಯ ಹೇಳಿ ಅವಳನ್ನು ಕರೆತರುವುದಕ್ಕೆ ಈಗಿನ ಲೆಕ್ಕದಲ್ಲೂ ಅರ್ಧ ದಿನವಾದರೂ ಬೇಕಾದೀತು. ಆಗಲೂ ಇಷ್ಟೇ ವೇಗವಾಗಿ ಅಥವಾ ಇನ್ನೂ ಬೇಗ ಸಾಧಿಸಿರಬಹುದು. ತಂತ್ರಜ್ಞಾನದ ಇನ್ನೊಂದು ಮುಖ ಅಲ್ಲಿ ಬಳಕೆಯಲ್ಲಿತ್ತೇನೋ! ಸೀತೆ ರಾಮ- ಲಕ್ಷ್ಮಣರನ್ನು ನೋಡಿ ದುಃಖಿಸುತ್ತಾಳೆ. ಅಯ್ಯೋ, ಇವಳು ಪುತ್ರವತಿಯಾಗುವಳು, ವೈಧವ್ಯ ಯೋಗವಿಲ್ಲ ಎಂದೆಲ್ಲಾ ನುಡಿದ ಲಕ್ಷಣಶಾಸ್ತ್ರಜ್ಞರ ಮಾತು ಇಂದು ಸುಳ್ಳಾಗಿಹೋಯಿತಲ್ಲ! ರಾಮನು ಗತಪ್ರಾಣನಾಗಿದ್ದಾನೆ. ಅಶ್ವಮೇಧಾದಿ ಯಾಗಗಳನ್ನು , ಸತ್ರಗಳನ್ನೂ ನಡೆಸುವವನಿಗೆ ನಾನು ಪತ್ನಿಯಾಗಿ ಶೋಭಿಸುವೆನೆಂದು ನುಡಿದ ಜ್ಞಾನಿಗಳ ಮಾತೆಲ್ಲ ಮಣ್ಣಾಯಿತು. ಜ್ಯೋತಿಷ್ಯ ಶಾಸ್ತ್ರಜ್ಞರು ನೀನು ಸುಮಂಗಳೆಯಾಗಿ ಬಾಳುವೆಳೆಂಬ ಆಶೀರ್ವಾದ ಮಾಡಿದ್ದರು. ಅವರೆಲ್ಲರೂ ಅಸತ್ಯವಾದಿಗಳಾದರು. ನನ್ನ ಪಾದಗಳಲ್ಲಿದ್ದ ಪದ್ಮರೇಖೆಗಳ ಫಲ ನರೇಂದ್ರರಾದ ಪತಿಯೊಡನೆ ಅಭಿಷಿಕ್ತಳಾಗುವಂತಹದ್ದು ಅದೂ ಸಟೆಯಾಯಿತು. ದುರ್ಲಕ್ಷಣಗಳು ಒಂದೂ ಇಲ್ಲದಿದ್ದರೂ ಸುಲಕ್ಷಗಳೇ ನನಗೆ ಮುಳುವಾದವು ಇತ್ಯಾದಿ. ಲಕ್ಷಣಶಾಸ್ತ್ರಜ್ಞರು ದೇಹದ ಅಂಗಾಂಗಗಳನ್ನು, ಮಚ್ಚೆಗಳನ್ನು ನೋಡಿ ಮುಂದಿನ ಜೀವನದ ಬಗ್ಗೆ ಹೇಳುವವರು. ಜ್ಞಾನಿಗಳು ಅಂದರೆ ಇಲ್ಲಿ ಅಪರೋಕ್ಷ ಜ್ಞಾನಿಗಳು. ಹಿಂದು ಮುಂದಿನ ಘಟನೆಗಳ ಬಗ್ಗೆ ಬಲ್ಲವರು. ಸತ್ರವೆಂದರೆ ಸಾಮಾನ್ಯ ಯಜ್ಞವಲ್ಲ. ತುಂಬಾ ಯಜಮಾನರು ಹಾಗೂ ತುಂಬಾ ದಿನ ನಡೆಯುವ ಅಶ್ವಮೇಧ ರಾಜಸೂಯ ಮೊದಲಾದ ಯಜ್ಞಗಳು. ಜ್ಯೋತಿಷ್ಯ ಶಾಸ್ತ್ರವು ಆಗಲೂ ಪ್ರಚಲಿತವಿತ್ತೆಂಬುದು ಸೀತೆಯ ಮಾತು ಸ್ಪಷ್ಟಪಡಿಸುತ್ತದೆ. ಇನ್ನು ಮಾನವನ ದೇಹದ ರೇಖೆಗಳು ಕೆಲವು ಚಿಹ್ನೆಗಳು ಕೆಲವು ಅಂಶಗಳನ್ನು ಹೇಳುತ್ತವೆ. ಅವುಗಳಲ್ಲಿ ಪದ್ಮರೇಖೆ ಸ್ತ್ರೀಯರಿಗಿದ್ದರೆ ರಾಜರ ಪತ್ನಿಯಾಗುವರು ಎಂಬುದೂ ಒಂದು. ಸೀತೆಗೆ ಕ್ಷಣಕ್ಷಣಕ್ಕೆ ಕಂಡುಬರುವ ಶೋಕ ನೋಡಿದರೆ ನಾವೇ ಭಾಗ್ಯವಂತರೆನ್ನಬಹುದು. ರಾವಣ ಪೀಡೆ ಕೊಟ್ಟಾಗ, ಮಾಯಾಶಿರಸ್ಸನ್ನು ಸೃಷ್ಟಿಸಿದಾಗ , ಈಗ ಪುನಃ ನಾಗಪಾಶದಿಂದ ಪತಿ ಬಂಧಿತನಾದಾಗ ಹೀಗೆ ಅವಳಿಗೆ ದುಃಖವು ನಿರಂತರವಾಗಿ ಬಾಧಿಸುತ್ತಲೇ ಇದೆ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ