ಮಹಾಭಾರತ ೩೪
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೩೪
*ಯದಿ ದತ್ತಂ ಯದಿ ಹುತಂ ವಿದ್ಯತೇ ಯದಿ ನಸ್ತಪಃ ತೇನ ತಿಷ್ಠಂತು ನಗರೇ ಪಾಂಡವಾಃ ಶರದಾಂ ಶತಮ್*
_ಪಾಂಡವರು ಹಸ್ತಿಪುರವನ್ನು ಪ್ರವೇಶಿಸಿದಾಗ ಜನರಾಡಿಕೊಳ್ಳುತ್ತಿದ್ದ ಮಾತು. ನಾವು ಒಂದು ವೇಳೆ ಏನಾದರೂ ದಾನ-ಯಜ್ಞ-ತಪಸ್ಸುಗಳನ್ನು ಮಾಡಿದ್ದರೆ ಅದರ ಫಲದಿಂದ ಪಾಂಡವರು ಈ ಪಟ್ಟಣದಲ್ಲಿ ನೂರು ವರ್ಷ ನೆಲೆಸಲಿ. ತಮ್ಮ ಪುಣ್ಯವನ್ನು ಧಾರೆ ಎರೆದಾದರೂ ಅವರನ್ನು ಉಳಿಸಿಕೊಳ್ಳಬೇಕೆಂಬ ಧರ್ಮಪ್ರಜ್ಞೆ ಆಗಿನ ಆ ಜನರಲ್ಲಿತ್ತು. ರಾಜನು ಕೆಟ್ಟವನಿದ್ದರೂ ಆಡಳಿತ ಒಳ್ಳೆಯದಿಲ್ಲದಿದ್ದರೂ ಪ್ರಜೆಗಳ ಧರ್ಮಪ್ರಜ್ಞೆ ಸ್ಥಿರವಾಗಿತ್ತು. ಈಗಿನ ಜನರು ಉಳಿದವರನ್ನಿರಲಿ ತಮ್ಮ ತಂದೆ ತಾಯಿಯರನ್ನೇ ಯಾವಾಗ ಸ್ಮೃತಿಮಾತ್ರರಾಗುವರೋ ಎಂದು ಯೋಚಿಸುತ್ತಾರೆ. ಪುಣ್ಯವಿರಲಿ ನಾವು ಯಾರೂ ಹತ್ತು ರೂಪಾಯಿ ನೀಡಲು ಹತ್ತು ಬಾರಿ ಯೋಚಿಸುತ್ತೇವೆ. ಪಾಂಡವರ ನಡೆ-ನುಡಿ ಜನರ ಮೇಲೆ ಬೀರಿದ ಪ್ರಭಾವ ಅಂತಹುದು._
*ಪ್ರತಸ್ಥಿರೇ ತತೋ ಘೋರಂ ವನಂ ತನ್ಮನುಜರ್ಷಭಾಃ*
*ಮಂಡಯಾಂಚಕ್ರಿರೇ ತದ್ವೈಪುರಂ ಸ್ವರ್ಗವದಚ್ಯುತಾಃ*
_ಇವೆರಡೂ ಬೇರೆ ಬೇರೆ ಶ್ಲೋಕದ ಉತ್ತರಾರ್ಧಗಳು. ಧೃತರಾಷ್ಟ್ರ ಕರೆದು ಕೊಟ್ಟ ಅರ್ಧರಾಜ್ಯ ಹೇಗಿತ್ತೆಂದರೆ ಒಳಗೆ ಹೋಗಲು ಹಿಂಜರಿಯುವ ಘೋರವಾದ ಕಾನನ. ಆದರೆ ಪಾಂಡವರು ಅದನ್ನೇ ಸ್ವರ್ಗವನ್ನಾಗಿಸಿದರು. ಎಂದಿಗೂ ಧೃತಿಗೆಡದ ಆ ಐವರು ಕೃಷ್ಣನನ್ನು ಮುಂದಿಟ್ಟುಕೊಂಡು ಆ ವನವನ್ನು ಸ್ವರ್ಗದಂತೆ ಅತ್ಯಂತ ವಾಸಯೋಗ್ಯವಾಗಿಸಿದರು. ಜೀವನದಲ್ಲಿ ಏನು ದೊರೆತರೂ ಅದರಲ್ಲೇ ಸ್ವರ್ಗ ಕಾಣುವ ಧನಾತ್ಮಕ ಮನೋಭಾವಕ್ಕೆ ಇದು ಉತ್ತಮ ಉದಾಹರಣೆ. ಪಾಲಿಗೆ ಬಂದದ್ದು ಪಂಚಾಮೃತವೆಂದು ತಿಳಿದು ಆಸ್ವಾದಿಸಬೇಕೇ ಹೊರತು ಕೊರಗುವುದಲ್ಲ. ರಾಜವಂಶದಲ್ಲಿ ಜನಿಸಿದರೂ ಕಾಡು ದೊರಕಿತಲ್ಲ ಎಂದು ಪಾಂಡವರು ಕೊರಗಲಿಲ್ಲ ದೊಡ್ಡಪ್ಪನನ್ನು ಹಳಿಯಲಿಲ್ಲ. ಬೆಂಗಾಡಾಗಿದ್ದ ಆ ಪ್ರದೇಶ ಈಗ ದೇಶದ ರಾಜಧಾನಿಯೆನಿಸಿ ಇಂದ್ರಪ್ರಸ್ಥ ಹೋಗಿ ದೆಹಲಿಯಾಗಿದೆ. ಸಿಕ್ಕ ಅವಕಾಶಗಳನ್ನು ಸಂಪೂರ್ಣ ವಿನಿಯೋಗಿಸಿ ಕಾರ್ಯವನ್ನು ಪೂರ್ಣಗೊಳಿಸುವ ಪಾಂಡುಪುತ್ರರ ಈ ಕಾರ್ಯ ನಮಗೆಲ್ಲ ಮಾದರಿ.ನಾವಾದರೋ ಎಷ್ಟು ದೊರಕಿದರೂ ಏನೋ ಒಂದು ಕೊರತೆ ಕಂಡು ಬಾರಿಬಾರಿಗೂ ಗೊಣಗುತ್ತೇವೆ. ದೇವರನ್ನು ನೆನೆದು ಮಾಡುವ ಕರ್ಮ ಪೂರ್ಣಫಲದಾಯಕ ಎನ್ನುವುದಕ್ಕೂ ಇದು ನಿದರ್ಶನ. ಪಾಂಡವರು ಸ್ವತಃ ಬುದ್ಧಿವಂತರು ಪರಾಕ್ರಮಿಗಳಾದರೂ ಕೃಷ್ಣನ ನೇತೃತ್ವದಲ್ಲಿ ಇವೆಲ್ಲವನ್ನೂ ನೆರೆವೇರಿಸಿದರು.ಸಾಕ್ಷಾತ್ ವ್ಯಾಸರನ್ನು ಕರೆದು ಶಾಂತಿ ಕರ್ಮ ಮಾಡಿಸಿ ನಗರವನ್ನು ಅಳತೆ ಮಾಡಿಸಿದರು.ಮುಂದಿನ ಕೃತ್ಯ ಮುಂದೆ ನೋಡೋಣ..._
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ