ಮಹಾಭಾರತ ೩೯
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೩೯
*ತಪೋಧನೈಶ್ಚ ಯೇ ಶಾಪಾಃ ಕ್ರುದ್ಧೈರುಕ್ತಾ ಮಹಾತ್ಮಭಿಃ ನಾಕ್ರಾಮಂತಿ ತಯೋಸ್ತೇಪಿ ವರದಾನೇನ ಜೃಂಭತೋಃ*
_ಸುಂದೋಪಸುಂದರು ವರಬಲದಿಂದ ಕೊಬ್ಬಿ ಯಾರು ಯಾರು ಯಜ್ಞ ಮಾಡುತ್ತಿದ್ದರೋ, ಯಾರು ಮಾಡಿಸುತ್ತಿದ್ದರೋ ಅವರನ್ನೆಲ್ಲ ಕೊಂದು ಹಾಕಿದರು. ಮಹಾತ್ಮರಾದ ತಪೋಧನರು ಕೊಟ್ಟ ಶಾಪಗಳಾವುವೂ ವರಬಲದಿಂದ ಕೊಬ್ಬಿದ ಅವರಿಗೆ ತಟ್ಟಲಿಲ್ಲ. ಆಗ ಹೆದರಿದ ಜ್ಞಾನಿಗಳೆಲ್ಲ ವ್ರತ- ನಿಯಮ ಬಿಟ್ಟು ಓಡಿಹೋದರು. ಭೂಲೋಕದಲ್ಲಿ ಇದ್ದ ಎಲ್ಲಾ ತಪಸ್ವಿಗಳೂ, ಜಿತೇಂದ್ರಿಯರೂ, ಶಮಪರಾಯಣರೂ, ಸುಂದೋಪಸುಂದರ ಭಯದಿಂದ ದಿಕ್ಕುದಿಕ್ಕಿಗೆ ಓಡಿದರು. ಇವೆಲ್ಲವನ್ನು ನೋಡಿದಾಗ ರಾಕ್ಷಸರ ಬಲ ಹೆಚ್ಚಿದ್ದಾಗ ನಮ್ಮ ಬಳಿ ಎಷ್ಟು ದೈವಬಲ ಇದ್ದರೂ ಶರಣಾಗಲೇ ಬೇಕೆನ್ನುವುದು ಅರಿವಾಗುತ್ತದೆ.ಕಾಲ ಕೆಟ್ಟಿದೆ ಎಂದು ಬಾರಿಬಾರಿಗೆ ನುಡಿಯುವ ನಾವು ಈ ರಾಕ್ಷಸರ ಉಪಟಳವಿಲ್ಲದೆ ಸುಖವಾಗಿ ಬದುಕುತ್ತಿದ್ದೇವೆಂಬ ಸತ್ಯವನ್ನೂ ಮರೆಯುತ್ತೇವೆ.ಆಗಿನ ಸಜ್ಜನರ ಕಷ್ಟ ನಮಗೆ ಎಳ್ಳಷ್ಟೂ ಬಂದಿಲ್ಲವೇನೋ!_
*ನಿವೃತ್ತಯಜ್ಞಸ್ವಾಧ್ಯಾಯಾ ಪ್ರನಷ್ಟ ನೃಪತಿದ್ವಿಜಾ ಉತ್ಸನ್ನೋತ್ಸವಯಜ್ಞಾ ಚ ಬಭೂವ ವಸುಧಾ ತದಾ*
_ಆಗ ಭೂಲೋಕದಲ್ಲಿ ಯಜ್ಞಗಳು, ವೇದ ಶಾಸ್ತ್ರಾದಿಗಳ ಅಧ್ಯಯನ, ಓದಿದ್ದರ ಪುನರ್ಮನನ. ಎಲ್ಲಾ ನಿಂತುಹೋದವು. ಕ್ಷತ್ರಿಯರೂ, ಬ್ರಾಹ್ಮಣರು ನಾಶವಾದರು. ಉತ್ಸವಗಳೂ, ದೇವರ ಪೂಜೆ, ಹಬ್ಬ-ಹರಿದಿನಗಳ ಆಚರಣೆ ಎಲ್ಲವೂ ನಿಂತಿತು. ಅಂಗಡಿಗಳು ವ್ಯಾಪಾರ ಇಲ್ಲದೆ ಮುಚ್ಚಿಹೋದವು. ದೇವತಾಕಾರ್ಯಗಳೆಲ್ಲ ನಿಂತುಹೋದವು. ವಿವಾಹ ಉಪನಯನ ಮುಂತಾದ ಕಾರ್ಯಗಳೂ ನಿಂತವು. ಭಯದಿಂದ ಎಲ್ಲೆಡೆ ಹಾಹಾಕಾರ ಉಂಟಾಯಿತು. ವ್ಯವಸಾಯ,ಪಶುಪಾಲನೆ ನಿಂತು ಪಟ್ಟಣಗಳು ಹಾಗೂ ಆಶ್ರಮಗಳು ಹಾಳಾದವು. ಭೂಮಿ ಎಲುಬು ಮತ್ತು ಅಸ್ಥಿಪಂಜರದಿಂದ ತುಂಬಿಹೋಗಿ ನೋಡಲು ಭಯಾನಕವಾಯಿತು. ಪಿತೃಕಾರ್ಯಗಳು ನಿಂತವು. ವಷಟ್ಕಾರಗಳು ಅಂದರೆ ಶ್ರೌತಯಜ್ಞಗಳಲ್ಲಿ ಮಾಡುವ ಘೋಷಗಳು ನಿಂತವು. ಸುಂದೋಪಸುಂದರ ಆ ಕೆಲಸ ನೋಡಿ ಸೂರ್ಯ ಚಂದ್ರರು, ಗ್ರಹಗಳು, ನಕ್ಷತ್ರಗಳು, ತಾರೆಗಳು, ದೇವತೆಗಳೆಲ್ಲಾ ವಿಷಾದ ಹೊಂದಿದರು. ಹೀಗೆ ಅತ್ಯಂತ ಕ್ರೂರಕೆಲಸ ಮಾಡಿ ಎಲ್ಲಾ ದಿಕ್ಕುಗಳನ್ನು ಜಯಿಸಿ ಕುರುಕ್ಷೇತ್ರದಲ್ಲಿ ಅವರೀರ್ವರು ನೆಲೆಸಿದರು. ಆ ಕಾಲದ ಕಲ್ಪನೆ ಮಾಡಿದರೇನೇ ಮನದಲ್ಲಿ ಭಯ ಮೂಡುತ್ತದೆ. ಅಂತಹುದರಲ್ಲಿ ಆಗಿನ ಜನರು ಹೇಗೆ ಇವನ್ನೆಲ್ಲಾ ಎದುರಿಸಿದರೇನೋ!_
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ