ರಾಮಾಯಣ ೮೭
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೮೭
*ಅಂಗದಸ್ತು ರಣೇ ಶತ್ರುಂ ನಿಹಂತುಂ ಸಮುಪಸ್ಥಿತಃ ರಾವಣಿಂ ನಿಜಘಾನಾಶು ಸಾರಥಿಂ ಚ ಹಯಾನಪಿ*
_ರಣವು ತಾರಕಕ್ಕೇರಿ ಇಂದ್ರಜಿತುವು ಅಂಗದನೊಡನೆ ಹೋರಾಡುತ್ತಿದ್ದನು. ಅಂಗದನು ತನ್ನ ಪ್ರತಿಭಟನಾದ ಇಂದ್ರಜಿತುವನ್ನು ಮುಗಿಸಿಬಿಡಬೇಕೆಂದು ಅವನನ್ನು ಅಪ್ಪಳಿಸಿ ಅವನ ಸಾರಥಿಯನ್ನೂ ಕುದುರೆಗಳನ್ನೂ ಒಂದೇ ಪ್ರಹಾರದಿಂದ ಕೆಡಹಿದನು. ಆಗ ಹೆದರಿದ ಇಂದ್ರಜಿತುವು ಕೂಡಲೇ ರಥದಿಂದ ನೆಗೆದು ಅಂತರ್ಧಾನನಾದನು. ವಾಲಿಯ ಮಗನಾದ ಅಂಗದನು ಅಪ್ಪನಂತೆಯೇ ಮಹಾಪರಾಕ್ರಮಿ ಆಗಿದ್ದನು. ದೇವತೆಗಳನ್ನೂ ಸೋಲಿಸಿದ ಇಂದ್ರಜಿತುವನ್ನೂ ಓಡಿಸಿದ ಅಂಗದನ ಪರಾಕ್ರಮ ಅದ್ಭುತವಾದದ್ದು. ಅನಂತರ ಕೋಪಗೊಂಡ ಇಂದ್ರಜಿತುವು ಅಂತರ್ಧಾನನಾಗಿ ರಾತ್ರಿಯ ಹೊತ್ತು ಮಾಯಾಯುದ್ಧದಲ್ಲಿ ತೊಡಗಿದನು. ವಾನರವೀರರು ಹುಡುಕಹೊರಟು ಅವನ ಬಾಣಗಳಿಂದ ಗಾಯಗೊಂಡರು. ರಾಮಲಕ್ಷ್ಮಣರು ಇಂದ್ರಜಿತುವಿನ ಸರ್ಪಾಸ್ತ್ರಗಳಿಂದ ಬಂಧಿತರಾದರು._
*ನ ಹ್ಯವಿದ್ಧಂ ತಯೋರ್ಗಾತ್ರೇ ಬಭೂವಾಂಗುಲಮಂತರಮ್ ನಾನಿರ್ಭಿನ್ನಂ ನ ಚಾಸ್ತಬ್ಧಮಾಕರಾಗ್ರಾದಜಿಹ್ಮಗೈಃ*
_ಇಂದ್ರಜಿತುವಿನ ನಾಗಾಸ್ತ್ರಗಳಿಂದ ರಾಮಲಕ್ಷ್ಮಣರ ದೇಹದಲ್ಲಿ ಕೈಬೆರಳ ತುದಿಯಿಂದ ಹಿಡಿದು ತರಿಯಲ್ಪಡದ ಗಾಯವಿಲ್ಲದ ಕಿರುಬೆರಳಿನಷ್ಟು ಜಾಗವೂ ಇರಲಿಲ್ಲ. ಇಡೀ ದೇಹವನ್ನೇ ಗುರಿಯಾಗಿಸಿ ನಿರಂತರ ಶರಪ್ರಯೋಗ ಮಾಡಿ ಅವರ ದೇಹದಿಂದ ರಕ್ತದ ಪ್ರವಾಹವೇ ಹರಿಯುವಂತೆ ಮಾಡುತ್ತಾನೆ. ಹೀಗೆ ಇಬ್ಬರನ್ನೂ ಮಾಯಾಯುದ್ಧದ ಮೂಲಕ ನಾಗಪಾಶಗಳಿಂದ ಬಂಧಿಸುವಲ್ಲಿ ಇಂದ್ರಜಿತು ಯಶಸ್ವಿಯಾದನು._
*ಸತ್ಯಧರ್ಮಾಭಿರಕ್ತಾನಾಂ ನಾಸ್ತಿ ಮೃತ್ಯುಕೃತಂ ಭಯಮ್*
_ವಿಭೀಷಣನ ಮಾತು. ಸುಗ್ರೀವನು ದಾಶರಥಿಗಳ ಆ ಅವಸ್ಥೆಯನ್ನು ನೋಡಿ ಕಂಗೆಟ್ಟಾಗ ಅಳಲು ಪ್ರಾರಂಭಿಸಿದಾಗ ಸಮಾಧಾನ ಹೇಳುತ್ತಾ ಹೀಗೆ ನುಡಿಯುವನು. ಗೆಳೆಯ, ಸತ್ಯಧರ್ಮಗಳಲ್ಲಿ ದೃಢನಿಷ್ಠೆಯುಳ್ಳವರಿಗೆ ಎಂದಿಗೂ ಅಪಮೃತ್ಯುವಿನ ಭಯವಿಲ್ಲ. ಎಂತಹ ಸುಂದರ ಮಾತು. ಸತ್ಯಮಾರ್ಗದಲ್ಲಿ ನಡೆಯುತ್ತಾ ಧರ್ಮಬುದ್ಧಿಯನ್ನು ತೊರೆಯದೇ ಯಾರು ಜೀವನ ನಡೆಸುವರೋ ಅವರಿಗೆ ಆಪತ್ತುಗಳು ಸಾಕಷ್ಟು ಎದುರಾಗಬಹುದು. ಆದರೆ ಕೊನೆಗೆ ವಿಜಯ ಅವರನ್ನೇ ಆಶ್ರಯಿಸುತ್ತದೆ. ಅಪಮೃತ್ಯು ಅವರನ್ನೆಂದೂ ಬಾಧಿಸದು. ಹಾಗಾಗಿ ಪ್ರಜ್ಞೆ ತಪ್ಪಿರುವ ಇವರ ಬಗೆಗೆ ಚಿಂತಿಸದಿರು. ಹೀಗೆ ಹೇಳುತ್ತಾ ಆ ಧರ್ಮಾತ್ಮನು ಮಂತ್ರಪೂರಿತ ಜಲದಿಂದ ಅಮಂಗಳವನ್ನು ಪರಿಹರಿಸಲೆಂದು ಸುಗ್ರೀವನ ಕಣ್ಣುಗಳನ್ನು ಒರೆಸಿದನು. ರಾಮ-ಸುಗ್ರೀವ-ವಿಭೀಷಣರಲ್ಲಿದ್ದ ಆತ್ಮೀಯತೆ ಇದೊಂದು ಘಟನೆಯಿಂದಲೇ ನಾವು ಚೆನ್ನಾಗಿ ಅರ್ಥೈಸಬಹುದು._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ