ಮಹಾಭಾರತ ೪೨

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೪೨

*ವೇದವೇದಾಂಗವಿದ್ವಾಂಸಸ್ತಥೈವಾಧ್ಯಾತ್ಮಚಿಂತಕಾಃ ಚೌಕ್ಷಾಕ್ಷ ಭಗವದ್ಭಕ್ತಾಃ ಸೂತಾಃ ಪೌರಾಣಿಕಾಶ್ಚ ಯೇ*

_ಅರ್ಜುನ ಪ್ರಾಯಶ್ಚಿತ್ತವೆಂದು ಕಾಡಿಗೆ ಹೊರಟಾಗ ವೇದ-ವೇದಾಂಗ ತಿಳಿದವರು, ಅಧ್ಯಾತ್ಮಚಿಂತಕರು, ಪರಿಶುದ್ಧ ಮನಸ್ಸಿನ ಭಗವದ್ಭಕ್ತರೂ, ಸೂತರೂ ಪುರಾಣಿಕರೂ ಅವನನ್ನು ಹಿಂಬಾಲಿಸಿದರು. ಈ ಸಂಗತಿ ನೋಡಿದಾಗ ಪ್ರಸಿದ್ಧರಾದ ಸೂತಪುರಾಣಿಕರು ಒಬ್ಬರೇ ಅಲ್ಲ.ಅನೇಕ ಸೂತರು ಪುರಾಣ ಪ್ರವಚನ ಮಾಡುತ್ತಿದ್ದುದು ಅರಿವಿಗೆ ಬರುತ್ತದೆ. ಕ್ಷತ್ರಿಯ ಪುರುಷನಿಂದ ಬ್ರಾಹ್ಮಣ ಸ್ತ್ರೀಗೆ ಹುಟ್ಟಿದ ಜನರನ್ನು ಸೂತರು ಎಂದು ಕರೆಯುತ್ತಿದ್ದರು. ವಸ್ತುತಃ ಇವರು ಚಾಲನೆಯ ಕೆಲಸ ಮಾಡುತ್ತಿದ್ದುದು ಅಲ್ಲಲ್ಲಿ ಪ್ರಸಿದ್ಧವಾಗಿದೆ.ಕರ್ಣನ ತಂದೆ ಸೂತ ಅದಕ್ಕೆ ಉದಾಹರಣೆ. ಆದರೆ ಅನೇಕರು ಪುರಾಣ ಪ್ರವಚನದಂತಹ ಶ್ರೇಷ್ಠ ಜ್ಞಾನ ಕಾರ್ಯದಲ್ಲೂ ನಿರತರಾಗಿದ್ದುದು ಆ ಕಾಲದ ಸಮಾನತೆಯ ಸಂಕೇತ ಅನ್ನಬಹುದು. ಅಂತರ್ಜಾತಿ ವಿವಾಹಗಳು, ಜಾತಿ ಸಾಂಕರ್ಯ ಆ ಕಾಲದಲ್ಲೂ ಇತ್ತು. ಈಗಿನಂತೆ ಯಾವ ಜಾತಿಯವರಿಗೂ ಅಂಧಾಭಿಮಾನ ಇರಲಿಲ್ಲ. ಪರಸ್ಪರ ತಾವು ಅನುಸರಿಸುವ ವೃತ್ತಿಯ ಬಗೆಗೆ ಅಭಿಮಾನ ಉಳ್ಳವರಾಗಿರುತ್ತಿದ್ದರೇ ಹೊರತು ಜಾತಿಯ ಮೇಲಲ್ಲ. ವಿಪರ್ಯಾಸವೆಂದರೆ ಈಗ ವೃತ್ತಿಗಿಂತ ಬೇರೆಯ ಕಡೆಗೇ ಹೆಚ್ಚು ಯೋಚನೆ.ಕಥೆಗಳನ್ನು ಹೇಳುವವರೂ, ವನವಾಸಿಗಳಾದ ಶ್ರಮಣರೂ( ಭಿಕ್ಷೆಯಿಂದ ಜೀವನ ನಡೆಸುವ ಯತಿಗಳು) ಬೇರೆ ಬೇರೆ ಅವತಾರಗಳ ಕಥೆಯನ್ನು ಹಾಡುತ್ತಾ ಮಧುರವಾಗಿ ಹೇಳುವ ದ್ವಿಜರೂ ಅನೇಕ ಜನ ಅರ್ಜುನನ್ನು ಹಿಂಬಾಲಿಸಿದರು. ಹೀಗೆ ಅರ್ಜುನನ ಶಿಕ್ಷೆ ಕಷ್ಟವಾಗದೆ ಶಿಷ್ಟವಾಯಿತು._

*ಅಪಕೃಷ್ಟೋ ಮಹಾಬಾಹುರ್ನಾಗರಾಜಸ್ಯ ಕನ್ಯಯಾ ಅಂತರ್ಜಲೇ ಮಹಾರಾಜ ಉಲೂಪ್ಯಾ ಕಾಮಯಾನಯಾ*

_ಹೀಗೆ ಮುಂದುವರೆಯುತ್ತಾ ಗಂಗಾದ್ವಾರ ತಲುಪಿದರು ಅರ್ಜುನ ಹಾಗೂ ಜೊತೆಗಾರರು. ಅಲ್ಲಿ ಅನೇಕ ಯಜ್ಞಗಳನ್ನು, ವ್ರತಗಳನ್ನು ನಡೆಸಿದರು. ಒಮ್ಮೆ ಅರ್ಜುನನು  ಗಂಗೆಯಲ್ಲಿ ಸ್ನಾನ ಮಾಡಿ ಪಿತೃತರ್ಪಣ ನೀಡಿ, ಅಗ್ನಿಕಾರ್ಯ ಮಾಡಲು ಉದ್ದೇಶಿಸಿ ಮೇಲೆ ಬರುವುದರಲ್ಲಿದ್ದನು. ಆದರೆ ಆ ಸಮಯದಲ್ಲಿ ನಾಗರಾಜನ ಕನ್ಯೆಯಾದ ಉಲೂಪಿಯು ಅವನನ್ನು ಬಯಸಿದವಳಾಗಿ ನೀರಿನೊಳಗೆ ಎಳೆದುಕೊಂಡು ಹೋದಳು‌. ಹಾಗೆ ನಾಗಲೋಕಕ್ಕೆ ಹೋದಾಗ ಅಲ್ಲಿ ಕೌರವ್ಯನೆಂಬ ನಾಗನ ಮನೆಯಲ್ಲಿ ಪ್ರಜ್ವಲಿತವಾಗಿದ್ದ ಅಗ್ನಿಯನ್ನು ನೋಡಿ ಅಗ್ನಿಕಾರ್ಯವನ್ನು ನೆರವೇರಿಸಿದನು. ಅಂತಹ ಅವನ ನಿಷ್ಠೆಯು ಅಗ್ನಿಯ ಪ್ರೀತಿಗೆ ಪಾತ್ರವಾಯಿತು. ಇಲ್ಲಿ ಅರ್ಜುನನ ಕರ್ಮನಿಷ್ಠೆ ಅದ್ಭುತ ವಿಷಯ. ನಾವು ಬೇರೆ ಪ್ರದೇಶಗಳಿಗೆ ಅಥವಾ ಬೇರೆಯವರ ಮನೆಗೆ ಹೋಗಿದ್ದಾಗ ನಮ್ಮೆಲ್ಲ ಪೂಜಾದಿಗಳನ್ನು ಮರೆತು ಅವರೇನು ಅಂದುಕೊಳ್ಳುವರೋ, ಇವರು ಏನು ಮಾತಾಡುವರೋ ಎಂದು ಚಿಂತಿಸಿ ನಿತ್ಯಕರ್ಮಗಳನ್ನೂ ಪರಿತ್ಯಾಗ ಮಾಡುತ್ತೇವೆ.( ಮನೆಯಲ್ಲಿ ಮಾಡುವ ಧ್ಯಾನ- ಸ್ತೋತ್ರ ಪಠಣ, ಸಂಧ್ಯಾವಂದನೆ ಇತ್ಯಾದಿ) ಆದರೆ ಅರ್ಜುನ ಹೆಣ್ಣೊಬ್ಬಳು ಬಯಸಿ ಬಂದಾಗಲೂ ಮೊದಲು ತನ್ನ ಕರ್ಮವನ್ನು ಚಿಂತಿಸಿ ನಡೆಸುವ ಪರಿ ನಮಗೆಲ್ಲ ಆದರ್ಶ. ಇಲ್ಲಿ ಉಲ್ಲೇಖಿತವಾದ ಗಂಗಾದ್ವಾರವೇ ಹರಿದ್ವಾರವೆಂದು ಕೆಲವರ ಮತ. ಕೆಲವರು ಗಂಗಾದ್ವಾರ ಬೇರೆ ಕಡೆ ಪ್ರಸಿದ್ಧ( ಶುಕಸ್ಥಲೀ ) ಎಂಬಲ್ಲಿ ಎಂದೂ ಅಭಿಪ್ರಾಯ ಪಡುತ್ತಾರೆ._

http://shreenidhiabhyankar.blogspot.in/

🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩