ಮಹಾಭಾರತ ೪೦
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೪೦
*ದೃಷ್ಟ್ವಾ ಚ ವಿಶ್ವಕರ್ಮಾಣಂ ವ್ಯಾದಿದೇಶ ಪಿತಾಮಹಃ ಸೃಜ್ಯತಾಂ ಪ್ರಾರ್ಥನೀಯೇಹ ಪ್ರಮದೇತಿ ಮಹಾತಪಾಃ*
_ದೇವಗಣ ಮತ್ತು ಋಷಿಗಣದ ಕೋರಿಕೆಯ ಮೇರೆಗೆ ಮನದಲ್ಲಿ ನಿಶ್ಚಯಿಸಿದ ಬ್ರಹ್ಮನು ರಾಕ್ಷಸರ ನಾಶಕ್ಕಾಗಿ ಒಬ್ಬಳನ್ನು ಸೃಷ್ಟಿಸುವಂತೆ ವಿಶ್ವಕರ್ಮನಿಗೆ ಆಜ್ಞಾಪಿಸಿದನು. ಅವಳನ್ನು ಕಂಡಕೂಡಲೇ ಎಲ್ಲರೂ ಹಾತೊರೆಯುವಂತೆ ಇರಬೇಕು ಎಂದೂ ಎಚ್ಚರಿಸಿದನು. ಪಿತಾಮಹನಿಗೆ ನಮಸ್ಕರಿಸಿ ವಿಶ್ವಕರ್ಮನು ಮೂರು ಲೋಕಗಳಲ್ಲಿಯೂ ಸ್ಥಾವರ - ಜಂಗಮಗಳಲ್ಲಿ ಯಾವ ಯಾವ ಸುಂದರವಸ್ತುಗಳುಂಟೋ ಅದೆಲ್ಲವನ್ನೂ ಆಯಾ ಸ್ಥಾನದಿಂದ ಪ್ರಯತ್ನಪೂರ್ವಕವಾಗಿ ತಂದು ಒಂದುಗೂಡಿಸಿದನು._
*ಕೋಟಿಶಶ್ಚಾಪಿ ರತ್ನಾನಿ ತಸ್ಯಾ ಗಾತ್ರೇ ನ್ಯವೇಶಯತ್ ತಾಂ ರತ್ನಸಂಘಾತಮಯೀಮಸೃಜದ್ದೇವರೂಪಿಣೀಮ್*
_ಕೋಟಿಗಟ್ಟಲೇ ರತ್ನಗಳನ್ನು ತಂದು ಅವಳ ಶರೀರದಲ್ಲಿ ಅಳವಡಿಸಿದನು. ರತ್ನರಾಶಿಯವಳೂ ದೇವರೂಪಿಣಿಯೂ ಆದ ಅವಳನ್ನು ಹೀಗೆ ಸೃಷ್ಟಿಸಿದನು ವಿಶ್ವಕರ್ಮ. ಅವಳ ಶರೀರದಲ್ಲಿ ಒಂದು ಸೂಕ್ಷ್ಮಭಾಗವೂ ರೂಪರಹಿತವಾಗಿ ಅಥವಾ ನೋಡುವವರ ದೃಷ್ಟಿ ನೆಟ್ಟುಹೋಗದಿರುವಂತೆ ಇರಲಿಲ್ಲ. ಅಂತಹ ಅಪ್ರತಿಮ ಸೌಂದರ್ಯ ಅವಳಲ್ಲಿತ್ತು. ರತ್ನಗಳ ತಿಲಾಂಶವನ್ನು ಅಂದರೆ ಎಳ್ಳಿನಷ್ಟು ಭಾಗವನ್ನು ಸೇರಿಸಿ ನಿರ್ಮಿಸಿದ ಕಾರಣ ಅವಳಿಗೆ ಬ್ರಹ್ಮನು ತಿಲೋತ್ತಮೆ ಎಂದು ನಾಮಕರಣ ಮಾಡಿದನು. ಅನಂತರ ಅವಳು ಬ್ರಹ್ಮನ ಆಜ್ಞೆಯಂತೆ ಸುಂದೋಪಸುಂದರ ಬಳಿ ಹೋಗಲು ಅನುವಾಗಿ ದೇವಸಮೂಹಕ್ಕೆ ಪ್ರದಕ್ಷಿಣೆ ಬಂದಳು. ಆಗ ಒಂದು ವಿಚಿತ್ರ ನಡೆಯಿತು._
*ಏವಂ ಚತುರ್ಮುಖಃ ಸ್ಥಾಣುರ್ಮಹಾದೇವೋsಭವತ್ಪುರಾ ತಥಾ ಸಹಸ್ರನೇತ್ರಶ್ಚ ಬಭೂವ ಬಲಸೂದನಃ*
_ದೇವತೆಗಳಿಗೆ ಪ್ರದಕ್ಷಿಣೆ ಹಾಕುವಾಗ ಇಂದ್ರ ಮತ್ತು ಭಗವಂತನಾದ ರುದ್ರ ಧೈರ್ಯದಿಂದ ಅಲ್ಲಿ ಕುಳಿತಿದ್ದರು. ಉಳಿದವರು ಅವಳ ದೃಷ್ಟಿ ಎದುರಿಸಲಾಗದೆ ಮೊದಲೇ ಹೋಗಿದ್ದರು. ತಿಲೋತ್ತಮೆ ಪಕ್ಕದಲ್ಲಿ ಹೋಗುತ್ತಿದ್ದಾಗ ಅವಳನ್ನು ನೋಡುವ ಆಸೆಯಿಂದ ಮಹೇಶನಿಗೆ ಕಟಾಕ್ಷಯುಕ್ತವಾದ ಒಂದು ತಲೆ ದಕ್ಷಿಣದ ಕಡೆ ಮೂಡಿತು.ಅನಂತರ ಪಶ್ಚಿಮದ ಕಡೆಗೆ ಹೋದಾಗ ಅಲ್ಲಿ ಒಂದು ತಲೆ. ಹೀಗೆ ಶಿವನಿಗೆ ನಾಲ್ಕು ತಲೆಗಳು ಹುಟ್ಟಿಕೊಂಡವು. ಅದೇ ಸಮಯದಲ್ಲಿ ಮಹೇಂದ್ರನಿಗೆ ಪಾರ್ಶ್ವದಲ್ಲಿ, ಹಿಂದುಗಡೆ, ಮುಂದುಗಡೆ ಹೀಗೆ ಎಲ್ಲಾ ಕಡೆಗಳಲ್ಲಿ ಕೆಂಪಾದ ತುದಿಯುಳ್ಳ ವಿಶಾಲವಾದ ಸಾವಿರ ಕಣ್ಣುಗಳು ಉಂಟಾದವು. ಹೀಗೆ ಶಿವನು ಚತುರ್ಮುಖನಾಗಿ, ಇಂದ್ರನು ಸಹಸ್ರಾಕ್ಷನಾಗಲು ಕಾರಣವಾದ ಅಪ್ರತಿಮ ಸೌಂದರ್ಯ ಆ ತಿಲೋತ್ತಮೆಯದು. ಬ್ರಹ್ಮನನ್ನು ಬಿಟ್ಟು ಉಳಿದೆಲ್ಲಾ ದೇವ ಹಾಗೂ ಋಷಿಗಣ ಅವಳು ಹೋದ ಕಡೆಗಳಲ್ಲಿ ತಮ್ಮ ದೃಷ್ಟಿಯನ್ನು ಹಾಯಿಸಿದರು. ಅವಳನ್ನು ನೋಡಿ ಅವಳ ರೂಪಸಂಪತ್ತಿನಿಂದಲೇ ರಾಕ್ಷಸರ ನಾಶವೆಂಬ ತಮ್ಮ ಕಾರ್ಯ ಸಿದ್ಧಿಸಿತೆಂದು ಭಾವಿಸಿದ ದೇವತೆಗಳನ್ನು ಅನಂತರ ಬ್ರಹ್ಮನು ಬೀಳ್ಕೊಟ್ಟನು. ಆ ತಿಲೋತ್ತಮೆ ಕೆಂಪು ಬಣ್ಣದ ಒಂದೇಬಟ್ಟೆ ಧರಿಸಿ ಅವರನ್ನು ಆಕರ್ಷಿಸಲು ಅವರಿದ್ದ ಕಾಡಿಗೆ ಬರುತ್ತಾಳೆ. ಇದೇ ಕಾರಣವೋ ಏನೋ ಇಂದಿಗೂ ಸ್ತ್ರೀಯರು ಆಕರ್ಷಣೆಯ ದೃಷ್ಟಿಯಿದ್ದಲ್ಲಿ ಅಥವಾ ಸಿನೆಮಾಗಳಲ್ಲಿ ಕೆಂಪು ವಸ್ತ್ರಗಳನ್ನು ಹೆಚ್ಚು ಧರಿಸುತ್ತಾರೆ._
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ