ಮಹಾಭಾರತ ೪೧
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೪೧
*ಗುರೋರನುಪ್ರವೇಶೋ ಹಿ ನೋಪಘಾತೋ ಯವೀಯಸಃ ಯವೀಯಸೋನುಪ್ರವೇಶೋ ಜ್ಯೇಷ್ಠಸ್ಯ ವಿಧಿಲೋಪಕಃ*
_ಆದದ್ದಾಗಲಿ,ವನವಾಸ ಅಥವಾ ವನದಲ್ಲಿ ಮರಣವೇ ಆಗಲಿ ಧರ್ಮದ ರಕ್ಷಣೆಗಾಗಿ ಅಣ್ಣನ ಬಳಿಗೆ ಹೋಗುವುದೇ ಸರಿಯೆಂದು ನಿಶ್ಚಯಿಸಿದ ಅರ್ಜುನನು ಆಯುಧ ಪಡೆದು ಕಳ್ಳರನ್ನು ಓಡಿಸಿ ಬ್ರಾಹ್ಮಣನ ಹಣವನ್ನು ಮರಳಿ ಕೊಡಿಸುತ್ತಾನೆ. ಅನಂತರ ಅಣ್ಣನ ಬಳಿ ಹೋಗಿ ತನ್ನ ತಪ್ಪಿಗೆ ಶಿಕ್ಷೆ ವಿಧಿಸೆಂದಾಗ ಧರ್ಮಜ ಹೇಳುವ ಮಾತು- ಹಿರಿಯನ ಬಳಿಗೆ ಕಿರಿಯ ಪ್ರವೇಶ ಮಾಡುವುದು ಅನಿಷ್ಟಕರವೇನಲ್ಲ.ಆದರೆ ಕಿರಿಯನ ಬಳಿಗೆ ಹಿರಿಯ ಪ್ರವೇಶಿಸಿದರೆ ಅದು ಹಿರಿಯನಿಗೆ ಧರ್ಮನಾಶಕ. ಹಾಗಾಗಿ ನನಗೇನೂ ನಿನ್ನ ಬಗೆಗೆ ಅಸಮಾಧಾನವಿಲ್ಲ ಹೊರತು ಹೆಮ್ಮೆಯೇ ಇದೆ. ನೀನು ವನಗಮನದ ಯೋಚನೆ ಬಿಡು. ಇಲ್ಲಿ ಗಮನಿಸಬೇಕಾದ ಅಂಶ. ಹಿರಿಯರು ತಪ್ಪು ಮಾಡಿದಲ್ಲಿ ಅದಕ್ಕೆ ಶಿಕ್ಷೆ ಕೊಡಲೇಬೇಕು. ಏಕೆಂದರೆ ಲೋಕ ಅವರನ್ನು ಅನುಸರಿಸುತ್ತದೆ. ಕಿರಿಯರನ್ನು ತಿದ್ದಿ ಹೇಳಿ ಸರಿದಾರಿಗೆ ತರಬಹುದು. ಆದರೆ ಹಿರಿಯರನ್ನು ಹಾಗೆ ತರುವವರು ಯಾರು! ಹಾಗಾಗಿ ಹಿರಿತನವೆಂದು ಅಧಿಕಾರ ಚಲಾಯಿಸದೇ ಜವಾಬ್ದಾರಿ ಹೆಚ್ಚಿತೆಂದು ಸದಾ ಕಣ್ಣಾಗಿರಬೇಕಾದುದು ಅವಶ್ಯಕ._
*ನ ವ್ಯಾಜೇನ ಚರದ್ಧರ್ಮಮಿತಿ ಮೇ ಭವತಃ ಶ್ರುತಮ್ ನ ಸತ್ಯಾದ್ವಿಚಲಿಷ್ಯಾಮಿ ಸತ್ಯೇನಾಯುಧಮಾಲಭೇ*
_ಪಾಂಡವರ ಒಬ್ಬೊಬ್ಬರ ಗುಣಗಳೂ ಸಾಟಿಯಿಲ್ಲದವು. ಅಣ್ಣ ಅಷ್ಟಂದರೂ ಅರ್ಜುನನ ಮಾತು- ಕಪಟದಿಂದ ಧರ್ಮವನ್ನು ಆಚರಿಸಬಾರದು ಎಂದು ನೀನೇ ಉಪದೇಶಿಸಿರುವೆ. ನಾನು ಸತ್ಯವನ್ನೇ ಆಯುಧವನ್ನಾಗಿ ಹೊಂದಿದ್ದೇನೆ. ನಾನು ಸತ್ಯದ ದಾರಿಯಿಂದ ಹಿಂದೆ ಸರಿಯಲಾರೆ. ಒಂದು ನಿಯಮ ಎಂದಾದಮೇಲೆ ಅದರ ಪಾಲನೆ ಸತ್ಯ ಮಾರ್ಗ. ನೀನೇ ಅದನ್ನು ಉಪದೇಶಿಸಿರುವೆ. ಈಗ ನಿಯಮ ಭಂಗವನ್ನು ಸರಿಯೆಂದು ಹೇಗೆ ಸ್ವೀಕರಿಸಲಿ? ಸತ್ಯದ ಮೇಲಿನ ಅವನ ನಿಷ್ಠೆ ಗಮನಿಸಿ. ನಾವಾದರೆ ನಿಯಮಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಾಟು ಮಾಡಿ ಅವಶ್ಯವಿದ್ದಾಗ ಸ್ವೀಕರಿಸಿ ಬೇಡವಾದಾಗ ತಿರಸ್ಕರಿಸಿ ನಮಗೆ ಬೇಕಾದಂತೆ ವರ್ತಿಸುವೆವು. ಆದರೆ ಅರ್ಜುನ ಹಾಗಲ್ಲ. ಧರ್ಮವನ್ನು ಎಂದಿಗೂ ಬಿಡಲಾರ ಅವನು.ಅವನೇ ನಮಗೆ ಮಾರ್ಗದರ್ಶಕನಾಗಲಿ._
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ