ಕಿರಾತಾರ್ಜುನೀಯ
🌸 ಕಿರಾತಾರ್ಜುನೀಯದ ಒಂದು ಸಾಯಕ 🌸
*उपजापसहान्विलँघयन् स विधाता नृपतीन्मदोद्धत: । सहते न जनोप्यध:क्रियां किमु लोकाधिकधाम राजकम् ।।*
_ಧರ್ಮಜನು ಭೀಮನಿಗೆ ಹೇಳುವ ಮಾತು. ಯಾದವಾದಿ ವೀರರು ದುರ್ಯೋಧನನನ್ನು ಆಶ್ರಯಿಸಿದರೆ ಯುದ್ಧದಲ್ಲಿ ನಮಗಾರು ಗತಿಯೆಂದು ಶಂಕಿಸದಿರು. ಅಧಿಕಾರದ ಮದದಿಂದ ಮೆರೆಯುತ್ತಿರುವ ಆ ದುರ್ಯೋಧನನು ತನ್ನನ್ನು ಆಶ್ರಯಿಸಿದ ರಾಜರನ್ನು ತಿರಸ್ಕರಿಸುತ್ತಾ ತನ್ನನ್ನು ತ್ಯಜಿಸುವಂತೆ ಮಾಡುತ್ತಾನೆ. ಏಕೆಂದರೆ ಲೋಕದಲ್ಲಿ ಸಾಮಾನ್ಯ ಜನರೇ ಅಥವಾ ಸ್ವಾಭಿಮಾನಿ ಜನರೇ ಅಪಮಾನವನ್ನು ಅಥವಾ ತಿರಸ್ಕಾರವನ್ನು ಸಹಿಸಲಾರರು. ತಾವಿದ್ದಲ್ಲಿ ಗೌರವವನ್ನು, ಪುರಸ್ಕಾರವನ್ನು ಸಹಜವಾಗಿ ಅಪೇಕ್ಷಿಸುತ್ತಾರೆ. ಅಂತಹುದರಲ್ಲಿ ಲೋಕದ ಆಳ್ವಿಕೆ ನಡೆಸುವ ರಾಜರ ಸಮೂಹ ದುರ್ಯೋಧನನಂತಹವರನ್ನು ಎಂದಿಗೂ ಸಹಿಸುವುದಿಲ್ಲ. ನಿಶ್ಚಯವಾಗಿ ಅವನನ್ನು ತ್ಯಜಿಸಿ ಸಮರಕಾಲದಲ್ಲಿ ನಮ್ಮ ಬಳಿಗೆ ಬಂದೇ ಬರುವರು. ಲೋಕದಲ್ಲಿ ಯಾರೂ ಕೂಡ ಅವಮಾನವನ್ನು ಅಪೇಕ್ಷೆ ಪಡಲಾರರು. ಅಭಿಮಾನಿ ನರರು ಅಂತಹ ಘಟನೆಯನ್ನು ಅಥವಾ ಅವಮಾನಿಸಿದ ವ್ಯಕ್ತಿಯನ್ನು ಸುಲಭವಾಗಿ ಮರೆಯಲಾರರು. ಪ್ರತೀಕಾರಕ್ಕೆ ಅಥವಾ ತ್ಯಾಗಕ್ಕೆ ಸಮಯ ಸಂದರ್ಭವನ್ನು ಕಾಯುತ್ತಿರುತ್ತಾರೆ. ಪ್ರಕೃತ ಅಧಿಕಾರವು ದುರ್ಯೋಧನನಲ್ಲಿ ಇದೆ. ಇಂತಹ ಸಮಯದಲ್ಲಿ ಅವನನ್ನು ಆಶ್ರಯಿಸಿದವರನ್ನು ಸರಿಯಾಗಿ ಉಪಚರಿಸದೇ ಅವರ ಯೋಗ್ಯತೆಗನುಸಾರ ಪುರಸ್ಕರಿಸದೇ, ಅವರು ಪಕ್ಷಾಂತರ ಮಾಡಲು ಪರೋಕ್ಷವಾಗಿ ಅವನೇ ಅನುವು ಮಾಡಿಕೊಡುತ್ತಾನೆ. ಏಕೆಂದರೆ ಅವನ ಸ್ವಭಾವವೇ ಉಳಿದವರನ್ನು ಹೀಗಳೆಯುವಂತಹದು. ಹೀಗಿರುವಾಗ ರಣಸಮಯದಲ್ಲಿ ನಾವು ರಾಜರನ್ನು ಮಿತ್ರರನ್ನಾಗಿಸಲು ಹೆಚ್ಚು ಪರಿಶ್ರಮ ಪಡಬೇಕಾದ ಅವಶ್ಯಕತೆ ಇಲ್ಲ. ದುರ್ಯೋಧನನ ವರ್ತನೆಯಿಂದ ಬೇಸತ್ತ ಅವರು ಅಲ್ಪ ಪ್ರಯತ್ನದಿಂದ ಅಥವಾ ನಮ್ಮ ವಿನೀತತೆಯಿಂದ ನಮ್ಮೆಡೆಗೆ ಒಲಿಯುತ್ತಾರೆ. ಹಾಗಾಗಿ ಗೂಢಚಾರರನ್ನು ಕಳುಹಿಸಿ ಅಥವಾ ಬೇರೆ ಮಾರ್ಗ ಅನುಸರಿಸಿ ದುರ್ಯೋಧನನ ಮಿತ್ರರನ್ನು ಅಗಲಿಸುವ ಅವಶ್ಯಕತೆ ಇಲ್ಲವೇ ಇಲ್ಲ. ಅದು ಸಹಜವಾಗಿ ಸಿದ್ಧವಾಗುತ್ತದೆ. ಲೋಕದಲ್ಲಿ ನಾವಾದರೂ ಅಷ್ಟೇ. ಅವಮಾನವನ್ನೆಂದೂ ಸಹಿಸಲಾರೆವು. ನಮ್ಮ ಮಿತ್ರರನ್ನು ಅಥವಾ ಬಂಧುಗಳನ್ನು ತಿರಸ್ಕರಿಸದೆ, ಅವಮಾನಿಸದೆ ಸದ್ವರ್ತನೆಯಿಂದ ಗೌರವಿಸುವ ನಡತೆ ತೋರಿದರೆ ನಮ್ಮ ಆತ್ಮೀಯರು ಅಥವಾ ಸಹಾಯಕರು ಹೆಚ್ಚಾಗುತ್ತಾರೆ. ಯಾರನ್ನೂ ನಿಂದಿಸದೆ ಜೀವನ ನಡೆಸೋಣ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ