ಸ್ವಪ್ನವಾಸವದತ್ತ ೧

🌼 ಸ್ವಪ್ನವಾಸವದತ್ತ ಎಸಳು-೧ 🌼

*उदयनवेन्दुसवर्णावासवदत्ताबलौ  बलस्य त्वाम् । पद्मावतीर्णपूर्णौ वसन्तकम्रौ भुजौ पाताम् ।।*

_ಸ್ವಪ್ನವಾಸವದತ್ತದ ಮಂಗಲಶ್ಲೋಕ. ಈ ಶ್ಲೋಕದಲ್ಲಿ ನಾಟಕದ ಪ್ರಮುಖ ಪಾತ್ರಗಳನ್ನು ಈ ಶ್ಲೋಕದಲ್ಲಿ ಉಲ್ಲೇಖಿಸಿ ನಾಟಕಕ್ಕೆ ಮೊದಲಿಗೆ ದೇವರನ್ನೂ ಸ್ತುತಿಸುತ್ತಿದ್ದಾನೆ. ಉದಯನ-ವಾಸವದತ್ತಾ- ಪದ್ಮಾವತೀ- ವಸಂತಕ ಈ ನಾಲ್ಕು ಪಾತ್ರಗಳು ನಾಟಕದಲ್ಲಿ ಪ್ರಮುಖವಾಗಿವೆ. ಪ್ರಕೃತ ಉದಯ ನವೆಂದು ಅಂದರೆ ಉದಯಿಸುತ್ತಿರುವ ಹೊಸ ಚಂದಿರನಂದದಿ ಶೋಭಿಸುವ, ಆಸವ ಅಂದರೆ ಮದ್ಯದಿಂದ ಉಂಟಾದ ದೇಹಾಲಸ್ಯವುಳ್ಳ ಅಥವಾ ಚುರುಕುತನವನ್ನು ಕಳೆದುಕೊಂಡಿರುವ, ಕಮಲದಂತೆ ಕೋಮಲವಾಗಿರುವ ಅಥವಾ ಅಷ್ಟು ಕೆಂಪಗಿರುವ ಬಾಹುಗಳುಳ್ಳ, ವಸಂತಕಾಲದಂತೆ ನೋಡಲು ಸದಾ ಸುಂದರನಾಗಿರುವ ಬಲರಾಮನ ಎರಡು ಬಾಹುಗಳು ನಿಮ್ಮನ್ನು ಸದಾ ರಕ್ಷಿಸಲಿ. ಇಲ್ಲಿ ಕವಿಯು ಕೆಲವು ವಿಶೇಷಗಳನ್ನು ತೋರಿಸಿದ್ದಾನೆ. ಸಾಮಾನ್ಯವಾಗಿ ದಶಾವತಾರ ಅಥವಾ ಇಷ್ಟದೇವತೆಯನ್ನು ಸ್ತುತಿಸುತ್ತಾರೆ. ಬಲರಾಮನ ಸ್ತುತಿ ಬಹಳ ಅಪರೂಪದ ಸಂಗತಿ. ಕವಿ ಇಲ್ಲಿ ಅದನ್ನು ಬಳಸಿದ್ದಾನೆ. ಸ್ತುತಿ ಮಾಡುವಾಗ ಸುಮ್ಮನೆ ಏನೇನೋ ಹೇಳದೆ ನಿಜ ಸಂಗತಿಯನ್ನೂ ಸೇರಿಸಿ ಸ್ತುತಿಸಿದ್ದಾನೆ. ಬಲರಾಮನು ಮದ್ಯಪ್ರಿಯನೆಂಬುದು ಪ್ರಸಿದ್ಧ. ಅದೇ ಅವನ ಆಲಸ್ಯಕ್ಕೆ ಕಾರಣ ಎಂದಿದ್ದಾನೆ. ಮದ್ಯಕ್ಕೆ ಪೂರಕವಾಗಿ ಚಂದ್ರನ ಸಾದೃಶ್ಯವನ್ನೂ ವರ್ಣಿಸಿದ್ದಾನೆ. ಎರಡೂ ರಾತ್ರಿ ಪ್ರಸ್ತುತವಾದ ವಿಷಯಗಳು. ಕಮಲದಂತೆ ಕೋಮಲ ಅಥವಾ ಕೆಂಬಣ್ಣ ಎಂದಿರುವನೇ ಹೊರತು ಕಮಲದ ಕಾಂತಿಯನ್ನಲ್ಲ. ಏಕೆಂದರೆ ಕಮಲ ಹಗಲು ಅರಳುವಂತಹದು. ಇನ್ನು ನಿಮ್ಮನ್ನು ರಕ್ಷಿಸಲಿ ಎನ್ನುವ ಪ್ರಯೋಗವೂ ಅಪರೂಪ. ನಮ್ಮನ್ನು ಯಾರೋ ದೇವರು ರಕ್ಷಿಸಲಿ ಎನ್ನುವ ಪ್ರಯೋಗ ಸಾಮಾನ್ಯ. ಕವಿ ಇಲ್ಲಿ ನಾಟಕ ನೋಡುವ ಪ್ರೇಕ್ಷಕರಿಗೆ ಬಲರಾಮನು ಬಲ ತರಲೆಂದು ಹಾರೈಸುತ್ತಿದ್ದಾನೆ. ಭಾಸನು ಇಂತಹ ನವೀನ ಪ್ರಯೋಗಗಳಿಂದ ನಾಟಕಕಾರರಲ್ಲಿ ಮುಖ್ಯನಾಗಿದ್ದಾನೆ. ಪದಗಳ ಮೂಲಕ ಕಥೆಯನ್ನು ಅಥವಾ ಪಾತ್ರಧಾರಿಗಳನ್ನು ಸೂಚಿಸುವ ಕಾರಣ ಇಲ್ಲಿ ಬಹು ವಿರಳವಾದ ಮುದ್ರಾ ಎಂಬ ಅಲಂಕಾರವೂ ಕಂಡುಬಂದಿದೆ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩