ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

*क्व चिराय परिग्रह: श्रियां क्व च दुष्टेन्द्रियवाजिवश्यता । शरदभ्रचलाश्चलेन्द्रियैरसुरक्षा हि बहुच्छला: श्रिय: ।।*

_ಧರ್ಮಜನ ಮಾತು. ಸಂಪತ್ತು ಅಥವಾ ಅಧಿಕಾರ ಯಾರ ಬಳಿಯೂ ಬಹುಕಾಲ ಉಳಿಯಲಾರದು. ಲಕ್ಷ್ಮಿಯು ಚಂಚಲಳು.‌ಅವಳು ಯಾರನ್ನೂ ಚಿರ ಕಾಲ ಆಶ್ರಯಿಸುವುದಿಲ್ಲ. ಜಿತೇಂದ್ರಿಯರಾದ, ದೃಢಮನಸ್ಕರಾದ ವ್ಯಕ್ತಿಗಳನ್ನೂ ಕಾಲಾಂತರದಲ್ಲಿ ಲಕ್ಷ್ಮಿಯು ತೊರೆಯುವಳು. ಇನ್ನು ದುಷ್ಟವಾದ ಇಂದ್ರಿಯಗಳೆಂಬ ಅಶ್ವಗಳ ನಿಯಂತ್ರಣ ಯಾರಿಗಿಲ್ಲವೋ ಅವರನ್ನು ಲಕ್ಷ್ಮಿಯು ಆಶ್ರಯಿಸುವ ಮಾತು ಕಷ್ಟವೇ ಸರಿ. ಲಕ್ಷ್ಮಿಯನ್ನಾದರೂ ಉಳಿಸಿಕೊಳ್ಳಬಹುದು ಆದರೆ ಇಂದ್ರಿಯಗಳ ನಿಯಂತ್ರಣವನ್ನಲ್ಲ. ಅವುಗಳು ಮದವೇರಿದ ಕುದುರೆಯಂತೆ ಎತ್ತೆತ್ತಲೋ ಸಂಚರಿಸುತ್ತವೆ. ಹಾಗಾಗಿಯೇ ದುಷ್ಟ ಎಂಬ ವಿಶೇಷಣ. ಕಾಮಾದಿ ಅರಿಷಡ್ವರ್ಗಗಳಿಗೆ ಒಳಗಾಗದಂತೆ ಅವುಗಳನ್ನು ಹಿಡಿದಿಟ್ಟುಕೊಳ್ಳುವುದು ಸಾಹಸದ ಕೆಲಸ. ಹಾಗಾಗಿ ಅಧಿಕಾರವನ್ನು ಅಥವಾ ಪದವಿಯನ್ನು ಅಥವಾ ಕೀರ್ತಿಯನ್ನು ಅಥವಾ ರಾಜ್ಯಲಕ್ಷ್ಮಿಯನ್ನು ಬಯಸುವ ಮನುಷ್ಯರು ಮೊದಲಿಗೆ ತಮ್ಮ ಇಂದ್ರಿಯಗಳನ್ನು ನಿಯಂತ್ರಿಸಬೇಕು. ಇಂದ್ರಿಯಗಳು ಯಾವಾಗ ನಮ್ಮ ಮನದ ಮಾತನ್ನು ಆಲಿಸುತ್ತವೆಯೋ ಆಗ ಲಕ್ಷ್ಮಿಯು ಒಲಿದು ಬರುವಳು. ಈ ಕಾರಣ ನಾವು ಸಮಾಧಾನವನ್ನು ಹಾಗೂ ಜಿತೇಂದ್ರಿಯತ್ವವನ್ನು ಸಂಪಾದಿಸಬೇಕು. ಇವೆರಡು ಸಂಪಾದನೆಯಾದರೆ ಉಳಿದ ಬಯಕೆಗಳೆಲ್ಲ ತಾನಾಗೇ ಈಡೇರುವವು. ಶರತ್ಕಾಲದ ಮೋಡಗಳಲ್ಲಿ ನೀರು ಹೆಚ್ಚಿಲ್ಲದೆ ಗಾಳಿಗೆ ಅವು ಎತ್ತೆತ್ತಲೋ ತೇಲಿ ಹೋಗುತ್ತವೆ. ಅದರಂತಾಗಬಾರದು ನಮ್ಮ ಇಂದ್ರಿಯಗಳು. ಆಶ್ವಯುಜ ಹಾಗೂ ಕಾರ್ತಿಕ ಮಾಸಗಳಿಗೆ ಶರದೃತು ಬರುತ್ತದೆ. ಈ ಸಮಯದಲ್ಲಿ ಮಳೆ ಕಡಿಮೆ. ಏಕೆಂದರೆ ಮೋಡಗಳು ಬಹುಪಾಲು ನೀರಿನಿಂದ ತುಂಬಿರುವುದಿಲ್ಲ. ಆ ಮೋಡಗಳಂತೆ ನಿಯಂತ್ರಣವಿಲ್ಲದ ಇಂದ್ರಿಯಗಳು ಸಂಪತ್ತಿನ ಮಳೆಯನ್ನು ಹೇಗೆ ತಾನೇ ಸುರಿಸಬಲ್ಲವು. ಅಂತಹ ಸಂಪತ್ತು ಅಸುರಕ್ಷಿತವೂ ಹೌದು. ಯಾವಾಗ ನಮ್ಮನ್ನು ಬಿಟ್ಟುಹೋಗುವುದೆಂದು ತಿಳಿಯುವುದಿಲ್ಲ. ಅಸು ಅಂದರೆ ಪ್ರಾಣ. ಪ್ರಾಣವನ್ನು ಒತ್ತೆ ಇಟ್ಟು ಅದನ್ನು ರಕ್ಷಿಸಬೇಕಾಗುವುದು. ಇನ್ನೊಂದು ಅರ್ಥ ಸುಖವಾಗಿದ್ದುಕೊಂಡು  ರಕ್ಷಿಸಲು ಅಸಮರ್ಥವಾದ ಕಾರಣ ಅಸುರಕ್ಷ ಎಂದು. ಹಾಗಾಗಿ ಮೊದಲು ಪಂಚ ಜ್ಞಾನ ಹಾಗೂ ಪಂಚ ಕರ್ಮೇಂದ್ರಿಯಗಳನ್ನು ಅಧೀನ ಮಾಡಿಕೊಂಡು ಅನಂತರ ಸಂಪತ್ತಿನ ಅಧೀನತೆಗೆ ಗಮನ ಹರಿಸಬೇಕು._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩