ಮಹಾಭಾರತ ೩೬

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೩೬

*ಭಕ್ಷ್ಯತಾಂ ಭುಜ್ಯತಾಂ ನಿತ್ಯಂ ರಮ್ಯತಾಂ ಗೀಯತಾಮಿತಿ. ಪ್ರೀಯತಾಂ ದೀಯತಾಂ ಚೇತಿ ವಾಚ ಆಸನ್ಗೃಹೇ ಗೃಹೇ*

_ಬ್ರಹ್ಮನ ವರದಿಂದ ಮತ್ತರಾದ ಸುಂದೋಪಸುಂದರು ಆನಂದದಿಂದ ತಮ್ಮ ನಿವಾಸಿಗಳಿಗೆ ತೆರಳಿ ತಮ್ಮ ಮಿತ್ರರಿಗೆಲ್ಲ ಹೀಗೆಂದು ಹೇಳಿ ಕೌಮುದೀ ಮಹೋತ್ಸವವನ್ನು ಆಚರಿಸಿದರು. ( ಕೌಮುದೀ ಮಹೋತ್ಸವದ ಉಲ್ಲೇಖ ಮುದ್ರಾರಾಕ್ಷಸ ನಾಟಕದಲ್ಲೂ ಬರುತ್ತದೆ) ಈ ಮಾತುಗಳನ್ನು ನೋಡಿದರೆ ಅವರ ಪ್ರವೃತ್ತಿ ಎಂತಹದೆನ್ನುವುದು ಅರಿವಾಗುತ್ತದೆ. ' ತಿನ್ನಿರಿ- ಕುಡಿಯಿರಿ- ಹಾಡಿ- ಅನುಭವಿಸಿ- ಸಂತೋಷ ಪಡಿ- ದಾನ ಮಾಡಿ ಇತ್ಯಾದಿಗಳೇ ಅವರ ಉಪದೇಶ. ಇದರಲ್ಲಿ ಕೊನೆಯ ದಾನ ಅದೂ ಒಳ್ಳೆಯ ವಸ್ತುಗಳಾದ ಪಕ್ಷ ಒಪ್ಪಬಹುದು. ಇನ್ನು ಉಳಿದೆಲ್ಲವೂ ಪಾಶ್ಚಾತ್ಯರ ಸಂಸ್ಕೃತಿಯ ಪ್ರತಿರೂಪದಂತಿದೆ. ಸಿಕ್ಕಿಸಿಕ್ಕಿದ್ದನ್ನು ತಿನ್ನುವುದು, ಎಲ್ಲವನ್ನೂ ಮನಬಂದಂತೆ ಕಬಳಿಸುವುದು, ಪರಿಣಾಮ ಯೋಚಿಸದೇ ಕುಡಿಯುವುದು ಒಟ್ಟಾರೆ ಭಗವಂತನನ್ನು- ಸುತ್ತಲಿನವರನ್ನು ಮರೆತು *ನಾನು* ಎಂಬ ಅಂಶದಲ್ಲೇ ಜೀವನ ಕಳೆಯುವ ಒಂದು ಪದ್ಧತಿ. ಇದು ರಾಕ್ಷಸೀ ಜೀವನ. ನಾವೂ ಅವರಂತೆಯೇ ಜೀವನ ನಡೆಸಿದರೆ ಹೆಸರಿಗೆ ಮಾತ್ರ ಮಾನವರಾಗುವೆವು ಅಷ್ಟೇ._

*ತತ್ರ ತತ್ರ ಮಹಾಪಾನೈರುತ್ಕೃಷ್ಟತಲನಾದಿತೈಃ ಹೃಷ್ಟಂ ಪ್ರಮುದಿತಂ ಸರ್ವಂ  ದೈತ್ಯಾನಾಮಭವತ್ಪುರಮ್*

_ಅಲ್ಲಲ್ಲಿ ಭಾರೀ ಚಪ್ಪಾಳೆ, ಧ್ವನಿಗಳಿಂದ ಕೂಡಿದ ಮಹಾಪಾನಗೋಷ್ಠಿಗಳೂ, ರಾಕ್ಷಸರ ಕಿರುಚಾಟಗಳಿಂದ ಆ ಪಟ್ಟಣ ತುಂಬಿಹೋಯಿತು. ಈಗಿನ ಪಬ್ ಗಳಲ್ಲಿನ ಡಿಜೆ ಸಂಗೀತದ ಹಿನ್ನೆಲೆಯ ಪಾನ-ನೃತ್ಯಗಳೂ, ಸ್ವೇಚ್ಛಾಚಾರಗಳೂ ಅಥವಾ ರೇವ್ ಪಾರ್ಟಿ ಹೆಸರಿನ ಶ್ರೀಮಂತರ ಅನಾಚಾರದ ಕೂಟಗಳು ಆಗಿನ ರಾಕ್ಷಸರ ಬಳುವಳಿಯೇ ಆಗಿವೆ. ಹೆಸರುಗಳು ಮಾತ್ರ ಬೇರೆ ಆಗಿವೆ. ರಾಕ್ಷಸರಂತೂ ಕಾಮರೂಪಿಗಳಾಗಿ ಮೆರೆಯುತ್ತಾ ವರ್ಷವನ್ನು ದಿನದಂತೆ ಕಳೆದರು. ಅನಂತರ ಆ ಈರ್ವರೂ ಸ್ವರ್ಗವನ್ನು ಗೆದ್ದು, ಭುಮಿಯ ಮೇಲಿನ ನಾಗರನ್ನೂ, ಸಮುದ್ರದೊಳಗಿನ ಮ್ಲೇಚ್ಛರನ್ನೂ ಜಯಿಸಿ, ಸೇವಕರಿಗೆ ಕಠಿಣವಾಗಿ ಆಜ್ಞಾಪಿಸಿದರು._

*ರಾಜರ್ಷಯೋ ಮಹಾಯಜ್ಞೈರ್ಹವ್ಯಕವ್ಯೈರ್ದ್ವಿಜಾತಯಃ ತೇಜೋ ಬಲಂ ಚ ದೇವಾನಾಂ ವರ್ಧಯಂತಿ ಶ್ರಿಯಂ ತಥಾ*

_ರಾಜರ್ಷಿಗಳು ಮಹಾಯಜ್ಞಗಳಿಂದಲೂ, ಬ್ರಾಹ್ಮಣರು ಹವ್ಯ-ಕವ್ಯಗಳಿಂದಲೂ ( ಹವ್ಯ= ಹೋಮದಲ್ಲಿ ನೀಡುವ ಆಹುತಿ, ಕವ್ಯ= ಶ್ರಾದ್ಧಾದಿಗಳಲ್ಲಿ ಪಿತೃಗಳಿಗೆ ನೀಡುವ ತರ್ಪಣ ಪಿಂಡ ಮೊದಲಾದವು) ದೇವತೆಗಳ ತೇಜಸ್ಸು-ಬಲ-ಐಶ್ವರ್ಯ ಹೆಚ್ಚುತ್ತದೆ. ಹಾಗಾಗಿ ನಾವು ಅಂತಹ ಎಲ್ಲಾ ಅಸುರದ್ವೇಷಿಗಳನ್ನು ಕೊಂದುಹಾಕೋಣ. ಈಗಲೂ ಮೂಢನಂಬಿಕೆ ಎನ್ನುತ್ತಾ ಅನೇಕ ಅರೆಬೆಂದ ಮಡಕೆಗಳ ವಿರೋಧ ನೋಡಿದರೆ ಇವರೂ ರಾಕ್ಷಸರೇನೋ ಎನ್ನುವ ಭ್ರಮೆ ಬರುತ್ತದೆ._

http://shreenidhiabhyankar.blogspot.in/

🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩