ಮಹಾಭಾರತ ೩೫
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೩೫
*ನಾರದಸ್ತ್ವಥ ದೇವರ್ಷಿರಾಜಗಾಮ ಯದೃಚ್ಛಯಾ ಆಸನಂ ರುಚಿರಂ ತಸ್ಮೈ ಪ್ರದದೌ ಸ್ವಂ ಯುಧಿಷ್ಠಿರಃ*
_ಇಂದ್ರಪ್ರಸ್ಥದಲ್ಲಿ ಪಾಂಡವರನ್ನು ಸುವ್ಯವಸ್ಥಿತಗೊಳಿಸಿ ಕೃಷ್ಣನು ದ್ವಾರವತಿಗೆ ಹಿಂದಿರುಗಿ ಕೆಲ ಕಾಲವಾದ ಮೇಲೆ ನಾರದರೊಮ್ಮೆ ಬಂದರು. ಆಗ ಯುಧಿಷ್ಠಿರನು ತಾನೇ ಸ್ವತಃ ಎದ್ದು ನಿಂತು ತನ್ನ ಆಸನವನ್ನು ಅವರಿಗೆ ನೀಡಿ ಕುಳ್ಳಿರಿಸದನು. ಯುಧಿಷ್ಠಿರನ ವರ್ತನೆಯು ಒಂದೊಂದು ಕಲಿಯುವ ಅಂಶವನ್ನು ಒಳಗೊಂಡಿದೆ. ಹಿರಿಯರು ಅಥವಾ ನಮಗಿಂತ ಜ್ಞಾನಿಗಳು ಬಂದಾಗ ಸಹಜವಾಗಿ ಆಸನ ನೀಡುವ ಗುಣ ಬಹಳ ಅಪರೂಪದ್ದು. ನಾವೆಲ್ಲ ಗೊತ್ತಿದ್ದರೂ ನಮ್ಮ ನಮ್ಮ ಅಹಂ ಇದನ್ನು ಮಾಡಲು ಅಡ್ಡ ಬರುತ್ತದೆ. ಯುಧಿಷ್ಠಿರನು ಎಲ್ಲರಿಗಿಂತ ಉನ್ನತವಾದ ಆಸನದಲ್ಲಿ ಕುಳಿತಿದ್ದರೂ, ಸೇವಕರಿಗೆ ಅಥವಾ ತಮ್ಮಂದಿರಿಗೆ ಹೇಳಿ ಅವರನ್ನು ಉತ್ತಮವಾಗಿ ಸತ್ಕರಿಸಬಹುದಾದರೂ ಅದನ್ನು ಮಾಡದೇ ತಾನೇ ಮುಂದೆ ಬಂದು ಉಪಚರಿಸುತ್ತಾನೆ. ಒಬ್ಬರ ಮಾತಿಗಿಂತ ಅವರ ಕೃತಿಯೇ ಶ್ರೇಷ್ಠತೆಯನ್ನು ಸಾರುವುದೆನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನ. *ಅಭಿವಾದನಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ ಚತ್ವಾರಿ ತಸ್ಯ ವರ್ಧಂತೇ ಆಯುರ್ವಿದ್ಯಾಯಶೋಬಲಮ್* ಎಂಬಂತೆ ಜ್ಞಾನದಿಂದ ಶ್ರೇಷ್ಠರ, ಗುಣದಿಂದ ಶ್ರೇಷ್ಠರ ಸೇವೆಯು ನಮಗೆ ಆಯುಷ್ಯವನ್ನೂ, ವಿದ್ಯೆಯನ್ನೂ, ಯಶಸ್ಸನ್ನೂ, ದೈಹಶಕ್ತಿಯನ್ನೂ ಹೆಚ್ಚು ಮಾಡುವುದೇ ಹೊರತು ಕಡಿಮೆ ಮಾಡಲಾರದು._
*ಪಾಂಚಾಲೀ ಭವತಾಮೇಕಾ ಧರ್ಮಪತ್ನೀ ಯಶಸ್ವಿನೀ ಯಥಾ ವೋ ನಾತ್ರ ಭೇದಃ ಸ್ಯಾತ್ತಥಾ ನೀತಿರ್ವಿಧೀಯತಾಮ್*
_ಉಪಚಾರಗಳನ್ನು ಸ್ವೀಕರಿಸಿ ದ್ರೌಪದಿಯನ್ನೂ ಆಶಿರ್ವದಿಸಿ ನಾರದರು ದ್ರೌಪದಿಯೋರ್ವಳೇ ನಿಮ್ಮೈವರಿಗೂ ಕಾಂತೆಯಾಗಿದ್ದಾಳೆ, ಅವಳ ವಿಷಯದಲ್ಲಿ ಒಡಕುಂಟಾಗದಂತೆ ಜಾಗರೂಕರಾಗಿರಿ ಎನ್ನುತ್ತಾ ಈ ಕಥೆಯನ್ನು ನುಡಿದರು. ಹಿಂದೆ ತ್ರಿಲೋಕಖ್ಯಾತರೂ, ಶೂರರೂ, ಪರರಿಂದ ಅವಧ್ಯರಾದ ಹಿರಣ್ಯಕಶಿಪುವಿನ ವಂಶಜರಾದ ನಿಕುಂಭನ ಮಕ್ಕಳಾದ ಸುಂದ-ಉಪಸುಂದರೆಂಬ ರಾಕ್ಷಸರಿದ್ದರು. ಅವರು ಅಮರತ್ವ ಬಯಸಿಯೇ ಘೋರ ತಪಸ್ಸನ್ನು ಮಾಡಿದ್ದರಿಂದ ಬ್ರಹ್ಮನು ಅಮರತ್ವ ನೀಡದೇ ಪರಸ್ಪರ ವಧ್ಯತ್ವವನ್ನು ಅನುಗ್ರಹಿಸಿದ್ದನು. ಪರ ಅವಧ್ಯತ್ವವೂ ಸ್ವವಧ್ಯತ್ವವೂ ಅವರಿಗೆ ದೊರಕಿತು. ದೇವರು ಎಷ್ಟೇ ತಪಸ್ಸು ಮಾಡಿದರೂ ಬಯಸಿದ್ದನ್ನು ಕರುಣಿಸಲಾರ. ಹಾಗಾಗಿ ತಪವು ಆಸೆಯನ್ನು ಗೆಲ್ಲುವ ಉದ್ದೇಶ ಹೊಂದಿರಬೇಕೇ ಹೊರತು ಮತ್ತಷ್ಟು ಆಸೆಗಳನ್ನು ಹುಟ್ಟಿಸುವುದಕ್ಕಲ್ಲ. ಮುಂದುವರಿಯುತ್ತದೆ...._
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ