ರಾಮಾಯಣ ೮೯
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೮೯
*ಇದಂ ವಿಮಾನಂ ವೈದೇಹಿ ಪುಷ್ಪಕಂ ನಾಮ ನಾಮತಃ ದಿವ್ಯಂ ತ್ವಾಂ ಧಾರಯೇನ್ನೈವಂ ಯದ್ಯೇತೌ ಗತಜೀವಿತೌ*
_ರಾಮರು ಹತರಾದರೆಂದು ಸೀತೆ ಒಂದೇ ಸಮನೆ ಅಳುತ್ತಿದ್ದಾಗ ತ್ರಿಜಟೆಯು ಸಮಾಧಾನ ಮಾಡುತ್ತಾ ಹೇಳುವ ಮಾತು. ಅಮ್ಮಾ, ರಾಮ-ಲಕ್ಷ್ಮಣರು ಸತ್ತಿಲ್ಲ. ಸತ್ತಿದ್ದರೆ ಕಪಿಗಳ ಮುಖದಲ್ಲಿ ಕ್ರೋಧಾದಿಗಳು ಕಂಡುಬರುತ್ತಿರಲಿಲ್ಲ. ಅಷ್ಟೇ ಅಲ್ಲದೆ ಒಂದು ವೇಳೆ ರಾಮ ಸತ್ತಿದ್ದರೆ ಈ ದಿವ್ಯವಾದ ವಿಮಾನ ನಿನ್ನನ್ನು ಹೊರುತ್ತಿರಲಿಲ್ಲ. ಪತಿಹೀನೆಯನ್ನು ಈ ವಿಮಾನ ಹೊರಲಾರದು. ಈ ಸಂಗತಿ ಗಮನಿಸಿದರೆ ಪುಷ್ಪಕವು ಹತ್ತಿಸಿಕೊಳ್ಳುವ ಮುನ್ನ ನರರ ಪೂರ್ವಾಪರವನ್ನು ಗಮನಿಸುತ್ತಿತ್ತೇನೋ ಎಂದು ಅನಿಸುತ್ತದೆ. ಈಗಿನ ಕೃತಕ ಬುದ್ಧಿಮತ್ತೆಯು ಆಗಲೇ ಪುಷ್ಪಕದಲ್ಲಿ ಇತ್ತೇನೋ! ಸೇನೆಯು ಇವರನ್ನು ರಕ್ಷಿಸುತ್ತಿರುವ ಕಾರಣ ಇವರಿನ್ನೂ ಸತ್ತಿಲ್ಲ. ಇವರು ಮೂರ್ಛಿತರಾಗಿದ್ದರೂ ಮುಖದ ಕಾಂತಿ ಇನ್ನೂ ಕಳೆಗುಂದಿಲ್ಲ. ಪ್ರಾಣ ಹೋಗಿದ್ದರೆ ಮುಖದ ಕಾಂತಿ ಕಳೆಗುಂದುತ್ತಿತ್ತು. ಹಾಗಾಗಿ ಭ್ರಾಂತಿ ಬಿಡು. ದುಃಖಿಸದಿರು._
*ಶಕ್ಯಾ ಸೀತಾಸಮಾ ನಾರೀ ಮರ್ತ್ಯಲೋಕೇ ವಿಚಿನ್ವತಾ ನ ಲಕ್ಷ್ಮಣಸಮೋ ಭ್ರಾತಾ ಸಚಿವಃ ಸಾಂಪರಾಯಿಕಃ*
_ರಾಮನು ಕೆಲಕಾಲದ ನಂತರ ಎಚ್ಚೆತ್ತು ಕಾಂತಿಹೀನನಾದ ತಮ್ಮನ ಮೊಗವನ್ನು ಕಂಡು ದುಃಖಿಸುತ್ತಾ ಈ ಮಾತನ್ನು ನುಡಿಯುತ್ತಾನೆ. ಅಯ್ಯೋ ಇನ್ನು ನನಗೆ ಸೀತೆಯಿಂದೇನಾಗಬೇಕು! ಅಥವಾ ನಾನಾದರೂ ಏಕೆ ಬದುಕಿರಬೇಕು! ಈ ಭೂಲೋಕದಲ್ಲಿ ಹುಡುಕಿದರೆ ಸೀತೆಯಂತಹ ಇನ್ನೊಬ್ಬ ನಾರಿ ದೊರೆತಾಳು! ಆದರೆ ಲಕ್ಷ್ಮಣನಂತಹ ತಮ್ಮನು ದೊರಕುವನೇ! ಅಣ್ಣನ ಮಾತನ್ನೇ ವೇದವಾಕ್ಯವೆಂದು ಭಾವಿಸುತ್ತಾ, ತಂದೆಯಂತೆಯೇ ಅಣ್ಣನನ್ನು ಗೌರವಿಸುತ್ತಾ, ಅಣ್ಣನ ಸುಖಕ್ಕಾಗಿ ತನ್ನ ಸುಖವನ್ನು ತ್ಯಾಗ ಮಾಡುವ, ಅತ್ಯಂತ ಪ್ರೀತಿಪಾತ್ರನಾದ ತಮ್ಮ ಮತ್ತೊಬ್ಬ ದೊರಕುವನೇ? ರಾಮನಿಗೆ ಲಕ್ಷ್ಮಣನ ಮೇಲೆ ಇದ್ದ ಅಪಾರ ಪ್ರೀತಿ ಇಲ್ಲಿ ಅಭಿವ್ಯಕ್ತವಾಗಿದೆ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ