ಮಹಾಭಾರತ ೩೭
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೩೭
*ಮಮ ಭಾರ್ಯಾ ತವ ಗುರುರಿತಿ ಸುಂದೋಭ್ಯಭಾಷತ ಮಮ ಭಾರ್ಯಾ ತವ ವಧೂರುಪಸುಂದೋಭ್ಯಭಾಷತ*
_ಮದೋನ್ಮತ್ತರಾದ ಅವರು ಮದ್ಯವನ್ನು ಸೇವಿಸುತ್ತಾ ಸ್ತ್ರೀಯರೊಡನೆ ವಿಹರಿಸುತ್ತಾ ಬಹುಕಾಲ ಸುಖಿಸುತ್ತಿದ್ದ ಅವರೊಮ್ಮೆ ವಿಂಧ್ಯಪರ್ವತದ ತಪ್ಪಲಲ್ಲಿ ವಿಹರಿಸುತ್ತಿದ್ದಾಗ ಒಬ್ಬಳು ಅಪ್ಸರೆಯನ್ನು ನೋಡುತ್ತಾರೆ. ಬ್ರಹ್ಮನು ರತ್ನಗಳಿಂದ ಎಳ್ಳಿನ ಪ್ರಮಾಣದಷ್ಟು ಸೌಂದರ್ಯವನ್ನು ಸೇರಿಸಿ ಅವಳನ್ನು ನಿರ್ಮಿಸಿದ್ದನು. ಸುಂದೋಪಸುಂದರು ಅವಳನ್ನು ಅವಳ ಅನುಪಮ ಕಾಯವನ್ನು ಕಂಡೊಡನೆ ಒಂದೊಂದು ಕೈಯನ್ನು ಹಿಡಿದು ಎಳೆಯುತ್ತಾ ಮೇಲಿನಂತೆ ಬಡಬಡಿಸಿದರು. ಇವಳು ನನ್ನ ಹೆಂಡತಿ ನಿನಗೆ ಪೂಜ್ಯಳಾದವಳು, ಈಕೆ ನನ್ನ ಹೆಂಡತಿ ನಿನ್ನ ಸೊಸೆ. ಕೊನೆಗೆ ಹೀಗೆಯೇ ಮುಂದುವರಿದ ಕಲಹವು ಹೊಡೆದಾಟದಲ್ಲಿ ಪರ್ಯವಸಾನಗೊಂಡು ಅವರ ಅಂತ್ಯವನ್ನು ಅವರೇ ತಂದುಕೊಳ್ಳುವಂತಾಯಿತು. ಅನಂತರ ಬ್ರಹ್ಮನು ತಿಲೋತ್ತಮೆಯನ್ನು ಅಭಿನಂದಿಸಿ ಅವಳಿಗೆ ವರವನ್ನೂ ನೀಡಿದನು- ಭಾಮಿನಿ, ಇನ್ನು ಮುಂದೆ ಆದಿತ್ಯನು ಸಂಚರಿಸುವ ಎಲ್ಲಾ ಲೋಕಗಳಲ್ಲೂ ನೀನು ಸಂಚರಿಸುವಳಾಗು. ತೇಜೋಮಯಳಾದ ನಿನ್ನನ್ನು ಯಾರೂ ದಿಟ್ಟಿಸಿನೋಡಲಾರರು. ಸೂರ್ಯನಂತೆಯೇ ಕಾಂತಿವಂತಳಾಗು. ಈ ಕಥೆಯನ್ನು ಹೇಳಿ ನಾರದರು ಸಮಸ್ತ ವಿಷಯಗಳಲ್ಲಿ ಒಗ್ಗಟ್ಟಾಗಿರುವ ನೀವು ದ್ರೌಪದಿಯ ಕಾರಣಕ್ಕಾಗಿ ಭಿನ್ನರಾಗಬೇಡಿ ಎಂದು ಪಾಂಡವರಿಗೆ ಉಪದೇಶಿಸಿದನು._
*ದ್ರೌಪದ್ಯಾ ನಃ ಸಹಾಸೀನಮನ್ಯೋನ್ಯಂ ಯೋಭಿದರ್ಶಯೇತ್ ಸ ನೋ ದ್ವಾದಶವರ್ಷಾಣಿ ಬ್ರಹ್ಮಚಾರೀ ವನೇ ವಸೇತ್*
_ನಾರದರ ಎಚ್ಚರಿಕೆಯಿಂದ ಪಾಂಡವರು ತಮ್ಮತಮ್ಮೊಳಗೆ ಒಂದು ಒಪ್ಪಂದ ಮಾಡಿಕೊಂಡರು. ಇಂದಿನಿಂದ ನಮ್ಮಲ್ಲಿ ಒಬ್ಬನು ದ್ರೌಪದಿಯೊಡನಿರುವಾಗ ( ಏಕಾಂತದಲ್ಲಿ) ಮತ್ತೊಬ್ಬನು ನೋಡಿದರೆ ಅಂತಹವನು ಹನ್ನೆರಡು ವರ್ಷಗಳ ಕಾಲ ವನದಲ್ಲಿ ಬ್ರಹ್ಮಚಾರಿಯಾಗಿ ವಾಸ ಮಾಡಬೇಕು ಎಂಬುದಾಗಿ. ಈ ನಿಯಮದಂತೆ ಅರ್ಜುನನು ತೀರ್ಥಯಾತ್ರೆ ಹೊರಟಿದ್ದು. ಹೀಗೆ ನಾರದರು ಪಾಂಡವರ ಒಗ್ಗಟ್ಟನ್ನು ಮತ್ತಷ್ಟು ಬಲಪಡಿಸಿ ಹೊರಟುಹೋದರು. ಹೋದಲ್ಲೆಲ್ಲಾ ಲೋಕಕಲ್ಯಾಣಕ್ಕಾಗಿ ಕಲಹ ಉತ್ಪಾದಿಸುವ ನಾರದರು ಧರ್ಮಾತ್ಮರಾದ ಪಾಂಡವರ ನಡುವೆ ಕಲಹ ಉಂಟಾಗದಂತೆ ಪ್ರಚೋದಿಸಿದ್ದು ವಿಶೇಷ._
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ