ರಾಮಾಯಣ ೮೪

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೮೪

*ಕ್ಷಿಪ್ರಮದ್ಯ ಧುರಾಧರ್ಷಾಂ ಲಂಕಾಂ ರಾವಣಪಾಲಿತಾಮ್ ಅಭಿಯಾಮ ಜವೇನೈವ ಸರ್ವತೋ ಹರಿಭಿರ್ವೃತಾಃ*

_ಸುಗ್ರೀವನು ರಾವಣನಿಗೆ ತನ್ನ ಪರಾಕ್ರಮದ ರುಚಿ ತೋರಿ ಹಿಂತಿರುಗಿದ ಮೇಲೆ ರಾಮನು ಸೇನೆಯನ್ನೊಮ್ಮೆ ಅವಲೋಕಿಸಿ ಹೊರಡಲು ಅನುವಾಗುತ್ತಾನೆ. ಆದರೆ ಕೇವಲ ಕೆಟ್ಟ ಕೆಟ್ಟ ಶಕುನಗಳೇ ಆಕಾಶದಲ್ಲಿ ಕಂಡುಬರುತ್ತಿರುತ್ತವೆ. ಯುದ್ಧದಂತಹ ಕಾರ್ಯದಲ್ಲಿ ತೊಡಗುವಾಗ ಈ ಶಕುನಗಳ ವಿಷಯ ಏನು ಮಾಡುವುದೆನ್ನುವ ಚಿಂತೆಯಲ್ಲಿ ಸೇನಾಮುಖ್ಯರು ಇದ್ದಾಗ ರಾಮನಾಡುವ ಮಾತು. ನಿಶ್ಚಯಿಸಿದ ಕಾರ್ಯ ಸಾಧನೆಗೆ ಸಮಯವನ್ನು ಕಾಯುತ್ತಾ ಕುಳಿತರೆ ಆಗದು. ದುಷ್ಟ ದಮನಕ್ಕಾಗಿ ಹೊರಟ ನಮ್ಮನ್ನು ಯಾವುದೂ ತಡೆಯಲಾರದು. ಈ ಹರಿವೀರರೊಡನೆ ಏನಾದರಾಗಲಿ ಇಂದೇ ಲಂಕೆಯನ್ನು ಆಕ್ರಮಿಸೋಣ. *ವಿಘ್ನೈಃ ಪುನಃ ಪುನರಪಿ ಪ್ರತಿಹನ್ಯಮಾನಾಃ ಪ್ರಾರಬ್ಧಮುತ್ತಮಜನಾ ನ ಪರಿತ್ಯಜಂತಿ*  ಎಂಬಂತೆ ರಾಮನ ಉತ್ತಮತ್ವವು ಇಲ್ಲಿ ಸಾಬೀತಾಗುತ್ತದೆ. ಶಕುನಾದಿಗಳ  ಅಸ್ಪಷ್ಟತೆಯು ಏನಿದ್ದರೂ ಅಂದುಕೊಂಡ ಕಾರ್ಯಕ್ಕೆ ಆಗಲೇ ಹೊರಟುನಿಂತ ವೀರನವನು. ನಾವಾದರೆ ಒಂದು ಕಾರ್ಯಕ್ಕೆ ನೂರೆಂಟು ವಿಘ್ನಗಳನ್ನು ತಂದುಕೊಂಡು ಮಾಡುವುದೋ ಬೇಡವೋ ಎಂಬ ವಿಚಾರದಲ್ಲೇ ಸಮಯ ಕಳೆದು ಕೊನೆಗೆ ದುಃಖಿಸುತ್ತೇವೆ. ಅದೃಷ್ಟ ಇಲ್ಲ ಎಂದು ಬಾರಿಬಾರಿಗೆ ಹಲುಬುತ್ತೇವೆ. ಎಲ್ಲವನ್ನೂ ಕಾಯದೇ ನಿಂತನಿಲುವಿನಲ್ಲೇ ಕಾರ್ಯಸಿದ್ಧಿಗೆ ತೊಡಗುವುದು ಉತ್ತಮರ ಲಕ್ಷಣ._

*ವಾನರಾಣಾಂ ತು ಷಟ್ತ್ರಿಂಶತ್ಕೋಟ್ಯಃ ಪ್ರಖ್ಯಾತಯೂಥಪಾಃ*

_ಹಾಗೆಯೇ ಮುಂದುವರೆದು ರಾಮನು ರಾವಣರಕ್ಷಿತವಾದ ಉತ್ತರದಿಕ್ಕಿನಲ್ಲಿ ಲಂಕೆಯನ್ನು , ನೀಲನು ಪೂರ್ವದಿಕ್ಕಿನಲ್ಲಿ, ಅಂಗದನು ದಕ್ಷಿಣದಲ್ಲಿ, ಹನುಮಂತನು ಪಶ್ಚಿಮದ್ವಾರದಲ್ಲಿ, ಸುಗ್ರೀವನು ವಾಯವ್ಯದ ಸೇನೆಯ ಮಧ್ಯದ ಸ್ಥಳದಲ್ಲಿ ನಿಂತು ಆಕ್ರಮಿಸಿದರು. ಆ ಸಮಯದಲ್ಲಿ ಸುಗ್ರೀವನೊಡನೆ  ಮೂವತ್ತಾರು ಕೋಟಿ ವಾಯುವೇಗಶಾಲಿಗಳಾದ ವಾನರ ವೀರರಿದ್ದರು. ಇವರಲ್ಲದೆ ರಾಮನ ಆಜ್ಞೆಯಂತೆ   ಲಕ್ಷ್ಮಣನು ವಿಭಿಷಣನ ಜೊತೆಗೆ ಹೋಗಿ ಒಂದೊಂದು ಬಾಗಿಲಲ್ಲಿ ಒಂದೊಂದು ಕೋಟಿ ಸೈನಿಕರನ್ನು ಬೆಂಗಾವಲಾಗಿ ನಿಲ್ಲಿಸಿದನು. ಈ ಸೇನೆಯ ಅಗಾಧತೆ ಸಮುದ್ರದಷ್ಟೇ ಅಥವಾ ಅದನ್ನೂ ಮೀರುವಂತೆ ಇತ್ತೇನೋ!_

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩