ರಾಮಾಯಣ ೧೦೧

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೦೧

*ಕೃತಂ ತ್ವಯಾ ಕರ್ಮ ಮಹತ್ ಸುಭೀಮಂ ಹತಪ್ರವೀರಶ್ಚ ಕೃತಸ್ತ್ವಯಾಹಮ್ ತಸ್ಮಾತ್ ಪರಿಶ್ರಾಂತ ಇತಿ ವ್ಯವಸ್ಯನ್ ನ ತ್ವಾಂ ಶರೈರ್ಮೃತ್ಯುವಶಂ ನಯಾಮಿ*

_ರಾಮನು ರಾವಣನನ್ನು ಕುರಿತಾಡುವ ಮಾತು. ಸೌಮಿತ್ರಿಯೊಡನೆ ಹೋರಾಡಿದ ನಂತರ ರಾವಣನ ಜೊತೆಗೆ ಸ್ವತಃ ರಾಮನೇ ಹನುಮನ ಮೇಲೆ ಕುಳಿತು ಯುದ್ಧ ಮಾಡುತ್ತಾನೆ. ರಾಮನ ಬಾಣಗಳ ಬಿರುಸಿಗೆ ರಾವಣನ ರಥ, ಚಕ್ರ, ಕುದುರೆ, ಧ್ವಜಸ್ತಂಭ, ಶ್ವೇತಚ್ಛತ್ರ, ಪತಾಕೆ, ಸಾರಥಿ ಎಲ್ಲವೂ ನಾಶವಾದವು. ಮತ್ತೆರಡು ಅಶನಿಗಳಿಂದ ರಾವಣನ ಎದೆಗೆ ಅಪ್ಪಳಿಸಿದನು. ರಾವಣನು ನಿಶ್ಚೇಷ್ಟನಾಗಿ ಇರುವುದನ್ನು ಕಂಡು ಅವನ ಕಿರೀಟವನ್ನು ಕತ್ತರಿಸಿದನು. ಉಳಿದ ವೀರರಾದರೆ ಸಿಕ್ಕಿದ್ದೇ ಅವಕಾಶವೆಂದು ಎದುರಾಳಿಯನ್ನು ಕೊಂದುಬಿಡುತ್ತಿದ್ದರು. ಆದರೆ ರಾಮ ಎದುರಾಳಿ ಆ ಸ್ಥಿತಿಯಲ್ಲಿ ಇರುವಾಗ ಬಾಣ ಪ್ರಯೋಗಿಸುವವನಲ್ಲ. ಎದುರಾಳಿ ತನ್ನ ವಿಷಯದಲ್ಲಿ ಕೆಟ್ಟದ್ದನ್ನೇ ಮಾಡಿದ್ದರೂ ಸಮನಾಗಿ ಹೋರಾಡುವ ಸಾಮರ್ಥ್ಯ ಇಲ್ಲದೆ ನೆಲಕ್ಕೊರಗಿದಾಗ ಹೊಡೆಯುವುದು ಕ್ಷತ್ರಿಯೋಚಿತ ಧರ್ಮವಲ್ಲ. ಹಾಗಾಗಿಯೇ ರಾಮನು *ರಕ್ಷಿತಾ ಸ್ವಸ್ಯ ಧರ್ಮಸ್ಯ* ಎಂದು ಕರೆಸಿಕೊಂಡದ್ದು. ವಾಲಿಯ ಪ್ರಸಂಗದಲ್ಲಿ ಟೀಕೆ ಮಾಡುವವರಿಗೆಲ್ಲಾ ರಾಮ ಇಲ್ಲಿ ಉತ್ತರಿಸಿದ್ದಾನೆ. ಅವನು ರಾವಣನಿಗೆ ಹೀಗೆ ಹೇಳುತ್ತಿದ್ದಾನೆ- ರಾವಣ, ಈ ದಿನ ನೀನು ಭೀಕರ ಸಾಹಸವನ್ನು ಪ್ರದರ್ಶಿಸಿ ಅನೇಕ ಶತ್ರುವೀರರನ್ನು ಕೊಂದಿರುವೆ. ನೀನು ಯುದ್ಧದಲ್ಲಿ ಬಹಳ ದಣಿದಿರುವೆ. ಆದ್ದರಿಂದ ಈಗ ನಿನ್ನನ್ನು ಕೊಲ್ಲದೆ ಉಳಿಸುವೆನು. ನಿನಗೆ ಅನುಮತಿ ನೀಡಿದ್ದೇನೆ. ಲಂಕೆಗೆ ಹಿಂದಿರುಗಿ ವಿಶ್ರಾಂತಿ ತೆಗೆದುಕೋ. ಹೊಸ ರಥವನ್ನೇರಿ  ಹೊಸ ಧನುಸ್ಸನ್ನು ಹಿಡಿದು ಬಾ. ರಾಮನ ಕರುಣೆಯನ್ನು ಇಲ್ಲಿ ಕಾಣಬಹುದು. ಒಬ್ಬ ಪರಾಕ್ರಮಿ ಯುದ್ಧದಲ್ಲಿ ತುಂಬಾ ದಣಿದಿದ್ದಾನೆ. ಮತ್ತಷ್ಟು ತೊಂದರೆ ಕೊಟ್ಟು ಏಕೆ ಸಂಹರಿಸುವುದು‌ ಎಂಬ ಕರುಣೆ. ಅಷ್ಟಲ್ಲದೇ ತನ್ನ ಪರಾಕ್ರಮದ ಮೇಲೆ ಅವನಿಗಿರುವ ನಂಬಿಕೆ ಇವೆರಡನ್ನೂ ಇಲ್ಲಿ ಗಮನಿಸಬಹುದು._

*ಬ್ರಹ್ಮದಂಡ ಪ್ರಕಾಶಾನಾಂ ವಿದ್ಯುತ್ಸದೃಶವರ್ಚಸಾಮ್ ಸ್ಮರನ್ ರಾಘವಬಾಣಾನಾಂ ವಿವ್ಯಥೇ ರಾಕ್ಷಸೇಶ್ವರಃ*

_ರಾಮನಿಂದ ಸೋತು ಲಂಕೆಗೆ ಹಿಂದಿರುಗಿದ ರಾವಣನು ರಾಮನ ಅಮೋಘವಾದ ಶರಪ್ರಯೋಗವನ್ನೇ ಚಿಂತಿಸಿದನು. ಇಲ್ಲಿ ಬ್ರಹ್ಮದಂಡ ಎಂಬ ಉಲ್ಲೇಖ ಇದೆ. ಇದಕ್ಕೆ ಬ್ರಹ್ಮಾಸ್ತ್ರ ಅಥವಾ ವಸಿಷ್ಠರ ಬ್ರಹ್ಮ ದಂಡ ಅಥವಾ ಪ್ರಳಯಕಾಲದಲ್ಲಿ ಉದಿಸುವ ಅಗ್ನಿವರ್ಣದ ಧೂಮಕೇತು ಹೀಗೆಲ್ಲ ಅರ್ಥ ಇವೆ. ರಾಮನ ಅಂಬುಗಳು ರಾವಣನಿಗೆ ಹೀಗೆಯೇ ಕಂಡವಂತೆ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩