ಮಹಾಭಾರತ ೫೧
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೫೧
*ಕಿಮಿದಂ ಕುರುಥಾಪ್ರಜ್ಞಾಸ್ತೂಷ್ಣೀಂ ಭೂತೇ ಜನಾರ್ದನೇ ಅಸ್ಯ ಭಾವಮವಿಜ್ಞಾಯ ಸಂಕ್ರುದ್ಧಾ ಮೋಘಗರ್ಜಿತಾಃ*
_ಬಲರಾಮನ ಮಾತು. ಅರ್ಜುನನು ಸುಭದ್ರೆಯನ್ನು ಅಪಹರಿಸಿದ ಸುದ್ದಿ ತಿಳಿದ ವೃಷ್ಣಿ ವೀರರೆಲ್ಲರೂ ಯುದ್ಧ ಸನ್ನದ್ಧರಾಗಹೊರಟಾಗ ಮದ್ಯದ ನಶೆಯಲ್ಲಿದ್ದರೂ ರಾಮನು ಹೇಳುವ ಮಾತು. ಕೃಷ್ಣನು ಸಾಕ್ಷಾತ್ತಾಗಿ ಆಡಳಿತದಲ್ಲಿ ಇಲ್ಲದಿದ್ದರೂ ಪರೋಕ್ಷವಾಗಿ ಅವನ ಆಡಳಿತ ನಡೆಯುತ್ತಿತ್ತು. ಈ ಜನಾರ್ದನನು ಸಭೆಯಲ್ಲಿ ಏನೊಂದು ಮಾತನಾಡದೇ ಸುಮ್ಮನಿರುವಾಗ ಏಕೆ ಅವಿವೇಕಿಗಳೂ, ಕುಪಿತರೂ ಆದ ನೀವು ಘರ್ಜಿಸುವಿರಿ ಎನ್ನುತ್ತಾನೆ! ಕೃಷ್ಣನ ಅಭಿಪ್ರಾಯಕ್ಕೆ ಅಷ್ಟು ಗೌರವ ಅಲ್ಲಿರುತ್ತದೆ. ಅವನನ್ನು ಮೀರಿದರೆ ಆಪತ್ತು ಎದುರಾದೀತು ಎಂಬ ಭಯವೂ ಇತ್ತು._
*ಕೋ ಹಿ ತತ್ರೈವ ಭುಕ್ತ್ವಾನ್ನಂ ಭಾಜನಂ ಭೇತ್ತುಮರ್ಹತಿ ಮನ್ಯಮಾನಃ ಕುಲೇ ಜಾತಮಾತ್ಮಾನಂ ಪುರುಷಃ ಕ್ವಚಿತ್*
_ಇದೂ ಬಲನ ಮಾತೇ. ಅರ್ಜುನನ ಬಗ್ಗೆ ಪ್ರಸ್ತಾಪಿಸುತ್ತಾ ಹೇಳುವುದು. ಒಳ್ಳೆಯ ಕುಲದಲ್ಲಿ ಹುಟ್ಟಿದ ಯಾವ ವ್ಯಕ್ತಿಯು ತಾನೇ ಭೋಜನ ಮಾಡಿದೆಡೆಯಲ್ಲಿಯೇ ಭೋಜನ ಪಾತ್ರೆಯನ್ನು ಒಡೆದು ಹಾಕುವನು! ಪರರ ಆತಿಥ್ಯ ಸ್ವೀಕರಿಸಿದ ಮೇಲೆ ಅಲ್ಲಿಯ ವಸ್ತುಗಳಿಗೆ ಗೌರವ ಕೊಡುವುದು ಉತ್ತಮ ಗುಣ. ಪ್ರಕೃತ ಅರ್ಜುನನು ನಮ್ಮ ಆತಿಥ್ಯ ಪಡೆದು ನಮ್ಮ ಕನ್ಯೆಯನ್ನೇ ಅಪಹರಿಸಿದ್ದಾನೆ, ಇದು ಕುಲೀನರ ವರ್ತನೆಗೆ ತಕ್ಕುದಾದುದೇ ಎಂದು ಕೃಷ್ಣನಲ್ಲಿ ಅವನು ಕೇಳುತ್ತಿದ್ದಾನೆ. ಎಲ್ಲೋ ಯಾರ ಬಳಿಯೋ ಆತಿಥ್ಯ ಪಡೆದ ಮೇಲೆ ಅವರ ರೀತಿ-ರಿವಾಜುಗಳಿಗೆ ಗೌರವವಿತ್ತು ನಡೆಯುವುದು ಸಾಮಾಜಿಕತೆ. ಹಾಗಿಲ್ಲದಿದ್ದಾಗ ಇನ್ನೊಮ್ಮೆ ಆತಿಥ್ಯ ನೀಡಲು ಯೋಚನೆ ಮಾಡುವ ಪರಿಸ್ಥಿತಿ ಬರುತ್ತದೆ ಅಲ್ಲವೇ!_
*ಪ್ರದಾನಮಪಿ ಕನ್ಯಾಯಾಃ ಪಶುವತ್ಕೋನುಮಂಸ್ಯತೇ ವಿಕ್ರಯಂ ಚಾಪ್ಯಪತ್ಯಸ್ಯ ಕಃ ಕುರ್ಯಾತ್ಪುರುಷೋ ಭುವಿ*
_ಕೃಷ್ಣನು ಅವರೆಲ್ಲರನ್ನೂ ಸಮಾಧಾನಿಸುತ್ತಾ ಹೀಗೆ ನುಡಿಯುತ್ತಾನೆ. ಅರ್ಜುನನು ಈ ಕುಲಕ್ಕೆ ಅವಮಾನ ಮಾಡಿಲ್ಲ. ಹೆಚ್ಚಿನ ಗೌರವವನ್ನೇ ತಂದಿದ್ದಾನೆ. ಅರ್ಜುನನು ನಿಮ್ಮನ್ನು ಧನಲುಬ್ಧರೆಂದು ಭಾವಿಸಿ ಅಪಹರಿಸಿದ್ದಲ್ಲ. (ಕನ್ಯಾಶುಲ್ಕ ಹೆಚ್ಚು ಕೇಳಿಯಾರು ಎಂಬ ಹೆದರಿಕೆ) ಕೃಷ್ಣನ ಈ ಮಾತು ಅಚ್ಚರಿಗೆ ದೂಡುತ್ತದೆ. ಲೋಕದಲ್ಲಿ ಯಾರು ತಾನೇ ಕನ್ಯೆಯನ್ನು ಪಶುವಿನಂತೆ ದಾನಮಾಡುವುದನ್ನು ಅನುಮೋದಿಸುತ್ತಾನೆ? ಕನ್ಯೆಯ ಸಮ್ಮತಿ ಅಸಮ್ಮತಿಗಳೊಂದನ್ನೂ ಅವಲೋಕಿಸದೇ ಮಾಡಿದ ದಾನ ಪಶುವನ್ನು ಕೊಟ್ಟಂತೆಯೇ ಅಲ್ಲವೇ! ಕೃಷ್ಣನ ಈ ಮಾತು ಸ್ತ್ರೀವಾದಿಗಳಿಗೆ ಮಹಾಭಾರತದಲ್ಲಿ ರುಚಿ ಹತ್ತಿಸೀತು! ಭೂಲೋಕದಲ್ಲಿ ಯಾರು ತಾನೇ ಸಂತಾನವನ್ನು ವಿಕ್ರಯಿಸುತ್ತಾನೆ? ಯಾವ ಅಭಿಮಾನಿಯೂ ಯೋಗ್ಯ ಶುಲ್ಕಕ್ಕೆ ತನ್ನ ಮಗಳನ್ನು ಎಂದಿಗೂ ಕೊಡನು. ಪಣರೂಪದಲ್ಲಿ ಹಿಂದೆ ಕನ್ಯಾಶುಲ್ಕವನ್ನು ನಿಗದಿ ಮಾಡುತ್ತಿದ್ದರು. ಸೀತೆಯ ಸ್ವಯಂವರ, ಅಂಬಾಸ್ವಯಂವರ, ದ್ರೌಪದಿ ಸ್ವಯಂವರ ಮುಂತಾದ ಸಂದರ್ಭ. ಹಾಗಾಗಿ ಲೋಕವೀರನಾದ ಅರ್ಜುನನು ತಾನು ಬಯಸಿದ ಸುಭದ್ರೆಯನ್ನು ಹೊತ್ತೊಯ್ದನು. ಅವನನ್ನು ಪತಿಯನ್ನಾಗಿ ಬಯಸದವರು ಯಾರು! ಅವನ ರಥ ಶ್ರೇಷ್ಠವಾಗಿದೆ. ಅವನೊಡನೆ ನೀವು ಕೂಡಲೇ ಹೋಗಿ ಸಾಮೋಪಾಯದಿಂದ ಕರೆತನ್ನಿ. ಒಂದು ವೇಳೆ ಯುದ್ಧ ಮಾಡಿ ಸೋತರೆ ನಿಮ್ಮ ಕೀರ್ತಿಯೇ ನಾಶವಾಗುವುದು. ಒಂದು ಘಟನೆ ನಮ್ಮ ಕೈ ಮೀರಿದೆ ಎಂದ ಮೇಲೆ ಸಾಮೋಪಾಯ ಪ್ರಯೋಗವೇ ಸಾಧುವಾಗುತ್ತದೆ. ಅದು ಬಿಟ್ಟು ದುಃಖ, ಕಲಹ , ದ್ವೇಷ ಮೊದಲಾದವು ನಮಗೆಂದೂ ಒಳಿತನ್ನು ತರಲಾರವು. ಕೃಷ್ಣನ ಮನಶ್ಶಾಸ್ತ್ರೀಯ ವ್ಯಾಖ್ಯಾನವಿದು._
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ