ಮಹಾಭಾರತ ೫೫
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೫೫
*ಅಧ್ಯೇತಾರಂ ಪರಂ ವೇದಾಃ ಪ್ರಯೋಕ್ತಾರಂ ಮಹಾಧ್ವರಾಃ ರಕ್ಷಿತಾರಂ ಶುಭಂ ವರ್ಣಾಃ ಲೇಭಿರೇ ತಂ ಜನಾಧಿಪಮ್*
_ವ್ಯಾಸರ ಮತ್ತೊಂದು ವರ್ಣನೆ ಚೆನ್ನಾಗಿದೆ. ಯುಧಿಷ್ಠಿರ ಎಷ್ಟು ಒಳ್ಳೆಯ ಆಡಳಿತ ಕೊಡುತ್ತಿದ್ದನೆಂದರೆ ವೇದಗಳಿಗೆ ಒಬ್ಬ ಒಳ್ಳೆಯ ಓದುಗನಾಗಿ, ಮಹಾ ಮಹಾ ಯಜ್ಞಗಳಿಗೆ ಉತ್ತಮ ಪ್ರಯೋಕ್ತೃವಾಗಿ, ವರ್ಣಗಳಿಗೆ ಅಸಾಮಾನ್ಯ ರಕ್ಷಕನಾಗಿ ಪ್ರಜೆಗಳ ಆದರಕ್ಕೆ ಪಾತ್ರನಾಗಿದ್ದನು. ವೇದಗಳನ್ನು ಓದುವವರು ಬಹಳ ಮಂದಿ. ಆದರೆ ಅದನ್ನು ತಿಳಿದು ಆಚರಿಸುವವರು ಕೆಲವೇ ಕೆಲವು ಜನರು. ನಮ್ಮಲ್ಲಿ ಬುದ್ಧ ಬಸವಣ್ಣನವರನ್ನು ಆದರ್ಶ ಎಂದು ಹೇಳಿ ಮಾಂಸಾಹಾರ ಮದ್ಯಪಾನ ಯಥೇಚ್ಛ ಮಾಡುವವರಿಲ್ಲವೇ ಅದರಂತೆ! ಆದರೆ ಧರ್ಮಜನು ಹಾಗಿರಲಿಲ್ಲ. ವೇದದಲ್ಲಿ ಹೇಳಿದ ಕ್ರಮದಲ್ಲಿ ಸಾತ್ವಿಕ ಕರ್ಮಗಳನ್ನು ಹಾಗೂ ಪ್ರಜೆಗಳಿಗೆ ತೊಂದರೆ ಆಗದಂತಹ ಆಡಳಿತ ನೀಡುತ್ತಿದ್ದನು. ಯಾವುದೇ ಕೃತಿಗೆ ಬೆಲೆ ಬರುವುದು ಅದರಲ್ಲಿದ್ದುದು ಆಚರಣೆಗೆ ಬಂದಾಗ ಮಾತ್ರ. ಇವನ ಕಾಲದಲ್ಲಿ ಅದಾಗಿತ್ತು. ವೇದೋಕ್ತವಾದ ಬೇರೆ ಬೇರೆ ಕಾಮನೆಗಳನ್ನು ಪೂರೈಸುವ ಯಜ್ಞಗಳನ್ನು ಎಲ್ಲೋ ಕೆಲವು ಶ್ರೇಷ್ಠರು ಮಾತ್ರ ಆಚರಿಸುತ್ತಿದ್ದರು. ಯುಧಿಷ್ಠಿರನಾದರೋ ಅವೆಲ್ಲವನ್ನೂ ಆಚರಿಸಿ ಒಬ್ಬ ಪ್ರಯೋಗಶೀಲನಾಗಿ ಖ್ಯಾತಿ ಪಡೆದ. ಯಜ್ಞಗಳ ಆಚರಣೆಗೆ ಹಣ ಅಥವಾ ಶಕ್ತಿಗಿಂತ ಮಿಗಿಲಾಗಿ ಬೇಕಾದುದು ಶ್ರದ್ಧೆ ಹಾಗೂ ಸಮಾಧಾನ ಚಿತ್ತತೆ. ಉಪವಾಸ ಅಥವಾ ಬೇರೆ ಬೇರೆ ಬಗೆಯ ನಿಯಮಗಳನ್ನು ಯಥಾವತ್ತಾಗಿ ಆಚರಿಸಿ ಅನಂತರ ತ್ಯಾಗ ಮಾಡಿದಾಗ ಯಜ್ಞವು ಸಾರ್ಥಕವಾಗುತ್ತದೆ. ಅಂತಹ ಸಾರ್ಥಕತೆ ಧರ್ಮಜನ ಯಜ್ಞಗಳಲ್ಲಿತ್ತು. ವರ್ಣಗಳಿಗೆ ರಕ್ಷಕನೆಂದ ಕೂಡಲೇ ಜಾತಿವಾದಿಯೋ ಅಥವಾ ಮೇಲ್ವರ್ಗದವರ ಉದ್ಧಾರಕನೋ ಆಗಿದ್ದ ಎಂದರ್ಥವಲ್ಲ. ಅವರ ಕರ್ಮಗಳಲ್ಲಿ ಅವರಿಗೆ ಗೌರವ ಮೂಡುವಂತೆ ಆಡಳಿತ ನಡೆಸುತ್ತಿದ್ದನು. ಒಬ್ಬ ಕೃಷಿಕನಿಗೆ ತಾನು ಉತ್ತಮ ರೀತಿಯಲ್ಲಿ ಕೃಷಿ ಮಾಡಿಯೂ ಜೀವನ ನಡೆಸುವುದು ಕಷ್ಟವಾದರೆ ಅದು ಅವನ ವೃತ್ತಿಯನ್ನು ಕೊಂದಂತೆ ಸರಿ. ಅದೇ ರೀತಿ ವಾಣಿಜ್ಯ ನಡೆಸುವವನಿಗೆ, ಯೋಧನಿಗೆ, ಉಪಾಧ್ಯಾಯನಿಗೆ ಕೂಡ. ಅಂತಹ ಯಾವುದೇ ವೃತ್ತಿ ಅವನ ಜೀವನಕ್ಕೆ ಸಾಮಾಜಿಕ ಗೌರವಕ್ಕೆ ಕಾರಣವಾದರೆ ಏಕೆ ಯಾರಾದರೂ ತನ್ನ ವೃತ್ತಿಯನ್ನು ದೂಷಿಸುತ್ತಾರೆ? ಧರ್ಮಜನ ಆಡಳಿತದಲ್ಲಿ ಯಾವ ಜಾತಿ ಅಥವಾ ವೃತ್ತಿಯವರಿಗೂ ತಾವು ಮೇಲು ತಾವು ಕೀಳು ಎಂಬ ಭಾವನೆ ಕಾಡಿರಲಿಲ್ಲ. ಇನ್ನೊಂದಷ್ಟು ಉಪಮೆಗಳನ್ನು ನೀಡುತ್ತಾರೆ ವ್ಯಾಸರು- ಲಕ್ಷ್ಮಿಗೆ ಬಹುಕಾಲದ ನಂತರ ಒಂದು ಒಳ್ಳೆಯ ಆಶ್ರಯ ದೊರಕಿದಂತಾಯಿತು. ಬುದ್ಧಿಗೆ ಉತ್ತಮ ನೆಲೆ ಸಿಕ್ಕಿತು. ಧರ್ಮಗಳಿಗೆ ಬಂಧು ದೊರಕಿದಂತೆ ಆಯಿತು. ಜನರು ಅವನನ್ನು ಒಳ್ಳೆಯ ಮನುಷ್ಯನೆಂದು ಗೌರವಿಸುತ್ತಿರಲಿಲ್ಲ. ಜನರಿಗೆ ಪ್ರಿಯವಾಗುವಂತೆ ಆಡಳಿತ ನಡೆಸುತ್ತಿದ್ದ ಕಾರಣ ಗೌರವಿಸುತ್ತಿದ್ದರು. ಇದು ಬಹಳ ನೆನಪು ಇಟ್ಟುಕೊಳ್ಳಬೇಕಾದ ಅಂಶ. ಬರಿದೆ ನಾವು ಒಳ್ಳೆಯವರು ಎಂದು ಕರೆಸಿಕೊಂಡರೆ ಪ್ರಯೋಜನವಿಲ್ಲ. ನಮ್ಮ ಒಳ್ಳೆಯತನವು ಉಳಿದವರ ಉಪಯೋಗಕ್ಕೆ ಬಂದಾಗ ಮಾತ್ರ ಅದಕ್ಕೆ ಸಾರ್ಥಕತೆ. ಇಲ್ಲದಿದ್ದರೆ ಹಗಲಲ್ಲಿ ಉರಿಯುವ ಬೀದಿದೀಪದಂತೆ ಎಷ್ಟು ಬೆಳಕಿದ್ದರೂ ವ್ಯರ್ಥವಾಗುತ್ತದೆ. ಅನೇಕ ಜನರು ತಾವು ಒಳ್ಳೆಯವರು. ತಮಗೇಕೆ ತೊಂದರೆ ಎಂದೆಲ್ಲಾ ಭಾವಿಸಿ ಪರರನ್ನು ಉಪೇಕ್ಷಿಸುತ್ತಾರೆ. ಅಂತಹ ದೀನರ ಉಪೇಕ್ಷೆಯೂ ಪಾಪಕಾರಣವೇ ಆಗಿದೆ._
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ