ಮಹಾಭಾರತ ೫೩

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೫೩

*ಗುರುವತ್ಪೂಜಯಾಮಾಸ ಕಾಂಶ್ಚಿತ್ಕಾಂಶಿದ್ವಯಸ್ಯವತ್ ಕಾಂಶ್ಚಿದಭ್ಯವದತ್ಪ್ರೇಮ್ಣಾ ಕೈಶ್ಚಿದಪ್ಯಭಿವಾದಿತಃ*

_ಯಾದವ ವೀರರೆಲ್ಲ ಇಂದ್ರಪ್ರಸ್ಥಕ್ಕೆ ಬಂದಾಗ ಅತ್ಯಂತ ಪ್ರೀತಿಯಿಂದ ಅವರನ್ನು ಎದುರುಗೊಂಡು ಸತ್ಕರಿಸುತ್ತಾನೆ ಧರ್ಮಜ. ಬಲರಾಮನನ್ನು ಅಪ್ಪಿಕೊಂಡು, ಕೇಶವನ ತಲೆಯನ್ನು ಆಘ್ರಾಣಿಸಿ ಅನಂತರ ತೋಳಿನಿಂದ ಅಪ್ಪಿಕೊಳ್ಳುತ್ತಾನೆ. ಈಗ ನಾಮಕರಣವೇ ಮೊದಲಾದ ಕೆಲವು ಸಂಸ್ಕಾರಗಳಲ್ಲಿ ರೂಢಿಯಲ್ಲಿರುವ ನೆತ್ತಿ ಮೂಸುವ ವಿಧಾನ ಹಿಂದೆ ಸಾರ್ವತ್ರಿಕವಾಗಿತ್ತೋ ಏನೋ ಅಥವಾ ಅದು ಪ್ರೀತಿ ತೋರಿಸುವ ಸಂಕೇತವೋ ಏನೋ! ಕೆಲವರನ್ನು ಗುರುಜನರಂತೆ ಪೂಜಿಸಿದನು. ಕೆಲವರನ್ನು ಸ್ನೇಹಿತರಂತೆ ಆದರಿಸಿದನು.ಕೆಲವರನ್ನು ಪ್ರೀತಿಯಿಂದ ಮಾತನಾಡಿಸಿದನು, ಮತ್ತೆ ಕೆಲವರನ್ನು ತಾನೇ ನಮಸ್ಕೃತನಾದನು. ಹಿರಿಯರನ್ನು ತಾನೇ ಮುಂದಾಗಿ ನಮಿಸಿದನು. ಸಮಾನರನ್ನು ಗೌರವಿಸಿದನು. ಮಿತ್ರರನ್ನು ಆತ್ಮೀಯತೆಯಿಂದ ಕಂಡನು. ಕಿರಿಯರು ಇವನಿಗೇ ನಮಸ್ಕರಿಸಿದರು. ಹೀಗೆ ಧರ್ಮಜನು ಲೋಕ ಮೆಚ್ಚುವ ವರ್ತನೆ ಅಲ್ಲಿ ತೋರಿದನು._

*ಸ್ನಾಪನೋತ್ಸಾದನೇ ಚೈವ ಸುಯುಕ್ತಂ ವಯಸಾನ್ವಿತಮ್ ಸ್ತ್ರೀಣಾಂ ಸಹಸ್ರಂ ಗೌರೀಣಾಂ ಸುವೇಷಾಣಾಂ ಸುವರ್ಚಸಾಮ್*

_ಕೃಷ್ಣನು ಅನೇಕ ವಸ್ತುಗಳನ್ನು ಪಾಂಡವರಿಗೆ ಬಳುವಳಿಯಾಗಿ ಕೊಟ್ಟನು. ಸುವರ್ಣಾಲಂಕೃತವಾದ ಸಾರಥಿಗಳಿಂದ ಕೂಡಿದ ನಾಲ್ಕು ಕುದುರೆ ಹೂಡುವಂತಹ ಸಾವಿರ ರಥಗಳನ್ನೂ, ಮಥುರೆಯಲ್ಲಿ ಹುಟ್ಟಿದ ಹಾಲು ಕರೆಯುವ ಹತ್ತು ಸಾವಿರ ಗೋವುಗಳನ್ನೂ, ಚಂದ್ರಕಿರಣಗಳಿಗೆ ಸಮಾನವಾದ ಕಾಂತಿಯುಳ್ಳ ಬಿಳುಪಾದ ಸಾವಿರ ಹೆಣ್ಣು ಕುದುರೆಗಳನ್ನೂ, ಐದುನೂರು ಬಿಳಿಕೂದಲಿನ ಅಷ್ಟೇ ಸಂಖ್ಯೆಯ ಕಪ್ಪು ಕೂದಲಿನ ಹೇಸರಕತ್ತೆಗಳನ್ನೂ, ಇನ್ನೂ ಸಣ್ಣ ವಯಸ್ಸಿನ ಉತ್ತಮ ವೇಷಧಾರಿಗಳೂ ಕಾಂತಿಯುಳ್ಳವರೂ ಮೈ ಉಜ್ಜುವ ಹಾಗೂ ಸ್ನಾನ ಮಾಡಿಸುವ ಕೆಲಸದಲ್ಲಿ ನಿಪುಣರೂ ಆದ, ನೂರಾರು ಸುವರ್ಣ ಹಾರ ಧರಿಸಿದ ರೋಗರಹಿತರಾದ ಸೇವಾಕಾರ್ಯಗಳಲ್ಲಿ ದಕ್ಷರಾಗಿದ್ದ ಸಾವಿರ ಹುಡುಗಿಯರನ್ನೂ ಕೊಟ್ಟನು. ಹಿಂದೆ ಸ್ತ್ರೀಯರನ್ನು ಗೌರವವೆಂದು ನೀಡುವ ಪದ್ಧತಿ ಇತ್ತೇನೋ! ಅಷ್ಟು ಜನ ಸ್ತ್ರೀಯರಿಗೆ ಅಷ್ಟಷ್ಟು ವಿದ್ಯೆಗಳನ್ನು ಕಲಿಸಿದ್ದನ್ನು ನೋಡಿದರೆ ಸ್ತ್ರೀಯರನ್ನು ತರಬೇತಿಗೊಳಿಸುವ ಸಾಕಷ್ಟು ಶಾಲೆಗಳು ಇದ್ದಿರಬಹುದು. ಇಷ್ಟಲ್ಲದೇ ಹತ್ತು ಮಂದಿ ಹೊರುವಷ್ಟು ಗಣಿಯಿಂದ ತೆಗೆದ ಮತ್ತು ತಾನಾಗಿ ದೊರೆತ ಅಗ್ನಿಯಂತೆ ಹೊಳೆಯುವ ಚಿನ್ನವನ್ನು ಕೊಟ್ಟನು. ಚಿನ್ನದ ಸಮೃದ್ಧಿ ಹಾಗೂ ಗಣಿಗಾರಿಕೆಯ ಕಾರ್ಯವೂ ಚೆನ್ನಾಗಿಯೇ ಇತ್ತೇನೋ!_

http://shreenidhiabhyankar.blogspot.in/

🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩