ರಾಮಾಯಣ ೯೯
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೯೯
*ಹಿಮವಾನ್ ಮಂದರೋ ಮೇರುಸ್ತ್ರೈಲೋಕ್ಯಂ ವಾ ಸಹಾಮರೈಃ ಶಕ್ಯಂ ಭುಜಾಭ್ಯಾಮುದ್ಧರ್ತುಂ ನ ಸಂಖ್ಯೇ ಭರತಾನುಜಃ*
_ನೀಲನು ಪರಾಜಿತನಾದ ಮೇಲೆ ಲಕ್ಷ್ಮಣನಿಗೂ ರಾವಣನಿಗೂ ಘೋರವಾದ ಸಂಗರ ಏರ್ಪಡುತ್ತದೆ. ಲಕ್ಷ್ಮಣನು ರಾವಣನ ಹೊಡೆತಗಳಿಂದ ತಪ್ಪಿಸಿಕೊಳ್ಳುತ್ತಾ ಅವನ ಧನುಸ್ಸನ್ನು ಮುರಿದು ಬೇರೆ ಬಾಣಗಳಿಂದ ರಾವಣನನ್ನು ಮೂರ್ಛೆಗೊಳಿಸುತ್ತಾನೆ. ಸಾವರಿಸಿಕೊಂಡ ರಾವಣನು ಕೆಲ ಕ್ಷಣದಲ್ಲೇ ಬ್ರಹ್ಮದತ್ತವಾದ ಶಕ್ತಿ ಎಂಬ ಆಯುಧವನ್ನು ಪ್ರಯೋಗಿಸಿ ಲಕ್ಷ್ಮಣನನ್ನು ಚಲನೆಯಿಲ್ಲದಂತೆ ಮಾಡುತ್ತಾನೆ. ಅನಂತರ ಅವನನ್ನು ಎತ್ತಿಕೊಂಡು ಹೋಗಲು ಬಹಳ ಪ್ರಯತ್ನಪಟ್ಟರೂ ಸಾಧ್ಯವಾಗುವುದಿಲ್ಲ. ರಾವಣನು ಹಿಂದೆ ತನ್ನ ತೋಳುಗಳಿಂದ ಕೈಲಾಸವನ್ನೇ ಎತ್ತಿದ್ದನು. ಕವಿ ಅದನ್ನೇ ಇಲ್ಲಿ ಹೇಳುತ್ತಿದ್ದಾನೆ. ರಾವಣನು ಹಿಮಾಲಯವನ್ನು ಬೇಕಾದರೆ ಎತ್ತಬಹುದು, ಮೇರು ಮಂದರಗಳನ್ನು ಹೊತ್ತೊಯ್ಯಬಹುದು, ದೇವ ಸಹಿತವಾದ ತ್ರಿಲೋಕಗಳನ್ನು ಎತ್ತಬಹುದು, ಆದರೆ ರಣದಲ್ಲಿ ಬಿದ್ದ ಭರತಾನುಜನನ್ನು ಎತ್ತಲಾರದೇ ಹೋದನು. ಲಕ್ಷ್ಮಣನು ಶಕ್ತ್ಯಾಯುಧದಿಂದ ತಾಡಿತನಾದರೂ ಶ್ರೀಮನ್ನಾರಾಯಣನ ಅಂಶವೆನ್ನುವುದನ್ನು ಮನದಲ್ಲಿ ಚಿಂತಿಸಿದನು. ಹಾಗಾಗಿ ರಾವಣನಿಗೆ ಅವನನ್ನು ಎತ್ತಲಾಗಲಿಲ್ಲ. ರಾವಣನ ಅಂತಹ ಪ್ರಯತ್ನ ನೋಡಿದ ಹನುಮನು ಆ ಸಮಯದಲ್ಲಿ ಬಂದು ರಾವಣನನ್ನು ತನ್ನ ವಜ್ರಸದೃಶ ಮುಷ್ಟಿಯಿಂದ ಹೊಡೆದು ಮೂರ್ಛೆಗೊಳಿಸಿ ಲಕ್ಷ್ಮಣನೆಡೆಗೆ ಹೋದನು._
*ಶತ್ರೂಣಾಮಪ್ರಕಂಪ್ಯೋಪಿ ಲಘುತ್ವಮಗಮತ್ಕಪೇಃ ತಂ ಸಮುತ್ಸೃಜ್ಯ ಸಾ ಶಕ್ತಿಃ ಸೌಮಿತ್ರಿಂ ಯುಧಿ ದುರ್ಜಯಮ್*
_ಹನುಮನು ಲಕ್ಷ್ಮಣನನ್ನು ಸುಲಭವಾಗಿ ಎತ್ತಿ ರಾಮನ ಬಳಿ ಒಯ್ಯುತ್ತಾನೆ. ಶತ್ರುಗಳಿಂದ ಅಲ್ಲಾಡಿಸಲೂ ಅಸಾಧ್ಯನಾದ ಲಕ್ಷ್ಮಣನು ಹನುಮನ ಆತ್ಮೀಯತೆಯಿಂದಲೂ, ಪರಮಭಕ್ತಿಯಿಂದಲೂ ಅವನಿಗೆ ಹಗುರವಾದನು. ರಾವಣನು ಪ್ರಯೋಗಿಸಿದ ಆ ಶಕ್ತಿಯು ದುರ್ಜಯನಾದ ಸೌಮಿತ್ರಿಯನ್ನು ತ್ಯಜಿಸಿ ಪುನಃ ರಾವಣನನ್ನು ಸೇರಿತು._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ