ರಾಮಾಯಣ ೯೮

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೯೮

*ಏಷ ಮೇ ದಕ್ಷಿಣೋ ಬಾಹುಃ ಪಂಚಶಾಖಃ ಸಮುದ್ಯತಃ ವಿಧಮಿಷ್ಯತಿ ತೇ ದೇಹಾದ್ಭೂತಾತ್ಮಾನಂ ಚಿರೋಷಿತಮ್*

_ಹನುಮನ ಮಾತು. ಸ್ವತಃ ರಾವಣನೇ ಯುದ್ಧಕ್ಕೆ ಬಂದು ಕಪಿ ಸೇನಾನಿಯಾದ ನೀಲನನ್ನು ಅಂಬುಗಳಿಂದ ಮುಚ್ಚಿದ್ದಾನೆ. ಆಗ ಎದುರಾಗಿ ಹನುಮನು ಬಂದು ಆಡುವ ಮಾತು. ರಾವಣಾ, ಐದು ಕವಲುಗಳಿರುವ ನನ್ನ ಬಲತೋಳನ್ನು ಎತ್ತಿದ್ದೇನೆ. ಬಹುಕಾಲದಿಂದ ನಿನ್ನ ದೇಹದಲ್ಲಿ ನೆಲೆಸಿರುವ ಜೀವಾತ್ಮನನ್ನು ಇದು ಹೊರಗೆ ದಬ್ಬುವುದು‌. ಯುದ್ಧದ ರೀತಿಯನ್ನೂ ಕವಿ ಅಲಂಕಾರಿಕವಾಗಿ ವರ್ಣಿಸಿದ್ದಾನೆ. ಅವರಿಬ್ಬರ ನಡುವೆ ಯುದ್ಧ ಮುಂದುವರೆದು ಮೊದಲಿಗೆ ರಾವಣನು ತನ್ನ ಮುಷ್ಟಿಯಿಂದ ಬಲವಾಗಿ ಪ್ರಹರಿಸುತ್ತಾನೆ. ತತ್ತರಿಸಿದ ಹನುಮಂತನು ಕೆಲಕಾಲದಲ್ಲಿ ಚೇತರಿಸಿಕೊಂಡು  ರಾವಣನನ್ನು ಬಲವಾಗಿ ಪ್ರಹರಿಸುತ್ತಾನೆ. ಅವನ ಪೆಟ್ಟಿನ ರಭಸಕ್ಕೆ ರಾವಣನು ಅತ್ತಿಂದಿತ್ತ ತೂರಾಡುವನು. ಇದನ್ನು ಕಂಡ ದೇವಾದಿಗಳೆಲ್ಲ ಒಮ್ಮೆ ಹನುಮನನ್ನು ಶ್ಲಾಘಿಸುತ್ತಾರೆ. ರಾವಣನೂ ಚೇತರಿಸಿಕೊಂಡು ಹನುಮನ ಪರಾಕ್ರಮವನ್ನು ಮೆಚ್ಚುತ್ತಾನೆ. ಕೊಂಡಾಡಬಹುದಾದ ಶತ್ರುವೇ ಸರಿ ನೀನು ಎಂದೆಲ್ಲಾ ನುಡಿದು ಮತ್ತೆ ಪ್ರಹರಿಸಿದಾಗ ಹನುಮನು ಒಮ್ಮೆ ವಿಹ್ವಲನಾಗುತ್ತಾನೆ. ಅದನ್ನು ಕಂಡ ರಾವಣ ಮತ್ತೆ ನೀಲನೊಡನೆ ಕಾದಾಡತೊಡಗುವನು._

*ಪಿತೃಮಾಹಾತ್ಮ್ಯಸಂಯೋಗಾದಾತ್ಮನಶ್ಚಾಪಿ ತೇಜಸಾ ಜಾನುಭ್ಯಾಮಪತದ್ಭೂಮೌ ನ ಚ ಪ್ರಾಣೈರ್ವ್ಯಯುಜ್ಯತ*

_ರಾವಣನಿಗೂ ಅಗ್ನಿಯ ಅಂಶದಿಂದ ಹುಟ್ಟಿದ ನೀಲನಿಗೂ ಭಯಂಕರ ಯುದ್ಧ ನಡೆಯುತ್ತದೆ. ಅನಂತರ ನೀಲನು ತನ್ನ ಗಾತ್ರವನ್ನು ಬಹಳ ಚಿಕ್ಕದಾಗಿ ಮಾಡಿಕೊಂಡು ರಾವಣನ ಧನುಸ್ಸಿನ ತುದಿಯಲ್ಲೊಮ್ಮೆ, ಧ್ವಜದ ತುದಿಗೊಮ್ಮೆ ಹೀಗೆ ನೆಗೆಯುತ್ತಾನೆ. ರಾವಣನಿಗೆ ಅದನ್ನು ಕಂಡು ಏನೂ ಮಾಡಲು ತೋಚದೆ ಮತ್ತಷ್ಟು ಸಿಟ್ಟುಗೊಂಡು ನೀಲನೆಡೆಗೆ ಆಗ್ನೇಯಾಸ್ತ್ರವನ್ನು ಪ್ರಯೋಗಿಸುತ್ತಾನೆ. ಆಗ ನೀಲನು ಮೊಳಕಾಲೂರಿ ಬೀಳುತ್ತಾನೆ.ಉಳಿದವರಾದರೆ ಸಾಯುವ ಆ ಅಸ್ತ್ರವು ನೀಲನಿಗೆ ಮಾತ್ರ ಹೆಚ್ಚೇನೂ ಮಾಡಲಿಲ್ಲ. ಏಕೆಂದರೆ ಅದರ ಅಭಿಮಾನಿ ಅಗ್ನಿ ಅವನ ತಂದೆ. ಅಷ್ಟಲ್ಲದೇ ನೀಲನೂ ಮಹಾ ತೇಜಸ್ವಿಯೂ ಆಗಿದ್ದನು. ಹೀಗೆ ದೇವಾಂಶವೆನ್ನುವುದು ಕಪಿಗಳಿಗೆ ಯುದ್ಧದಲ್ಲಿ ಬೇರೆ ಬೇರೆ ರೀತಿಯಲ್ಲಿ ನೆರವಿಗೆ ಬಂದಿತು._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩