ರಾಮಾಯಣ ೧೦೪
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೦೪
*ಬ್ರಹ್ಮಶಾಪಾಭಿಭೂತಸ್ತು ಕುಂಭಕರ್ಣೋ ವಿಬೋಧ್ಯತಾಮ್*
_ಸಚಿವರ ಸಭೆ ಕರೆದ ರಾವಣನು ತನ್ನ ಸೈನಿಕರಿಗೆ ಆ ಕೂಡಲೇ ಕುಂಭಕರ್ಣನನ್ನು ಎಬ್ಬಿಸಲು ಆದೇಶಿಸುತ್ತಾನೆ. ಬ್ರಹ್ಮನ ಶಾಪದಿಂದ ಸದಾ ನಿದ್ರಾಪ್ರಿಯನಾಗಿರುವ ಅವನನ್ನು ಎಷ್ಟು ಪ್ರಯತ್ನಪಟ್ಟಾದರೂ ಎಬ್ಬಿಸಲು ಆದೇಶಿಸುವನು. ಇಲ್ಲಿ ವಾಲ್ಮೀಕಿಗಳ ವರ್ಣನೆ ಚೆನ್ನಾಗಿದೆ._
*ಕುಂಭಕರ್ಣಃ ಸದಾ ಶೇತೇ ಮೂಢೋ ಗ್ರಾಮ್ಯಸುಖೇ ರತಃ*
_ರಾವಣನ ಮಾತು. ಈ ಕುಂಭಕರ್ಣನು ಗ್ರಾಮ್ಯಸುಖದಲ್ಲಿ ನಿರತನಾಗಿ ಸದಾ ನಿದ್ರಿಸುತ್ತಿರುವನು. ಗ್ರಾಮ್ಯ ಅಂದರೆ ಇಲ್ಲಿ ಪ್ರಾಣಿಗಳ ಸುಖ ಎಂದರ್ಥ. ಆಹಾರ, ನಿದ್ರಾ, ಭಯ, ಮೈಥುನ ಈ ನಾಲ್ಕು ಸಾಮಾನ್ಯ ಅಂಶಗಳು ಪಶುಗಳಿಗೆ. ಕುಂಭಕರ್ಣನಿಗೆ ಭಯವೊಂದು ಬಿಟ್ಟು ಬೇರೆ ಮಾತ್ರ ಇದ್ದವು. ಹಾಗಾಗಿಯೇ ರಾವಣ ವ್ಯಂಗ್ಯ ಮಾಡುವುದು._
*ಮಾಂಸಾನಾಂ ಮೇರುಸಂಕಾಶಂ ರಾಶಿಂ ಪರಮತರ್ಪಣಮ್ ಮೃಗಾಣಾಂ ಮಹಿಷಾಣಾಂ ಚ ವರಾಹಾಣಾಂ ಚ ಸಂಚಯಾನ್*
_ನಾಲ್ಕು ಯೋಜನಗಳಷ್ಟು ವಿಶಾಲವಾಗಿದ್ದ ಕುಂಭಕರ್ಣನ ಗೃಹವನ್ನು ಪ್ರವೇಶಿಸಿ ಅವನೆದುರು ಪರ್ವತದಷ್ಟು ಎತ್ತರಕ್ಕೆ ಮಾಂಸದ ರಾಶಿಯನ್ನು ಹರಡುತ್ತಾರೆ. ಜಿಂಕೆ, ಕೋಣ, ಹಂದಿಗಳ ಮಾಂಸವನ್ನು ರಾಶಿ ರಾಶಿ ಜೋಡಿಸುತ್ತಾರೆ. ಅದರ ಜೊತೆಗೆ ಅನ್ನದ ರಾಶಿಯನ್ನೂ,ಕುಡಿಯಲು ರಕ್ತ ತುಂಬಿದ ಕೊಡಗಳನ್ನೂ, ಬಗೆಬಗೆಯ ಮದ್ಯಗಳನ್ನೂ ತಂದಿಟ್ಟರು. ಅವನ ಮೈಗೆಲ್ಲಾ ಗಂಧ ಬಳಿದು, ಅಲಂಕರಿಸಿ, ಸುವಾಸನೆಯ ಧೂಪ ಹಾಕಿ, ಸುಗಂಧವನ್ನು ಪೂಸಿ, ಪರಾಕು ಹೇಳುತ್ತಾ ಮೊದಲು ಪ್ರಯತ್ನಿಸಿದರು. ನಂತರ ಶಂಖ ಭೇರಿ ನಗಾರಿ ಊದಿ ಬಡಿದರು, ಬಾರಿಸಿದರು. ಸಿಂಹನಾದ ಮಾಡಿದರು. ಸಿಕ್ಕ ಸಿಕ್ಕ ಆಯುಧಗಳಿಂದ ತಿವಿದರು, ಗುದ್ದಿದರು, ಮುಷ್ಟಿಗಳಿಂದ ಗುದ್ದಿದರು. ಹತ್ತು ಸಾವಿರ ರಾಕ್ಷಸರು ಏಕಕಾಲದಲ್ಲಿ ವಾದ್ಯಗೋಷ್ಠಿ ಮಾಡಿದರೂ ಏಳಲೇ ಇಲ್ಲ ಅವನು. ಕುದುರೆ ಆನೆ ಒಂಟೆ ಕತ್ತೆ ಕರೆಸಿ ಕೂಗಿಸಿದರೂ ಪ್ರಯೋಜನ ಆಗಲಿಲ್ಲ. ಮರದ ಕುಂಟೆ ಹೇರಿ, ತೊಲೆಗಳಿಂದ ಎಳೆಸಿದರೂ ಎದ್ದಿಲ್ಲ ಅವನು. ಒಂದು ಸಾವಿರ ಭೇರಿ ಬಡಿದರೂ ಏಳಲಿಲ್ಲ. ನೂರಾರು ಕೊಡಗಳಲ್ಲಿ ನೀರು ತಂದು ಕಿವಿಗೆ ಸುರಿದರೂ ಎಚ್ಚರಿಕೆ ಆಗಲೇ ಇಲ್ಲ. ಕಬ್ಬಿಣದ ದೊಡ್ಡ ಸುತ್ತಿಗೆ ತಂದು ಎದೆ ತಲೆ ಕುಟ್ಟಿದರು, ಅನಂತರ ಸಾವಿರ ಆನೆಗಳನ್ನು ತಂದು ಅವನ ಮೈಮೇಲೆ ಏಕಕಾಲಕ್ಕೆ ಓಡಾಡಿಸಿ ತುಳಿಸಿದರು. ಆಗ ನಿಧಾನಕ್ಕೆ ಯಾರೋ ಮುಟ್ಟಿದರೆಂತೆನಿಸಿ ಎಚ್ಚರಗೊಂಡನು.ಕೊನೆಗೆ ಎದ್ದ ಕೂಡಲೇ ಹಸಿವೆ ಎಂದೆನಿಸಿ ಸಾಕಷ್ಟು ಬಾರಿ ಆಕಳಿಸಿ ಪೂರ್ಣ ಪ್ರಮಾಣದಲ್ಲಿ ಎದ್ದನು. ನಾವು ಈಗ ನೋಡುವ ಯಾವ ಬಗೆಯ ನಿದ್ರೆಯೂ ಕುಂಭಕರ್ಣನ ನಿದ್ರೆಗೆ ಸಾಟಿ ಸ್ವಲ್ಪವೂ ಆಗಲಾರದು. ಅವೆಲ್ಲವೂ ಸಾವಿರದ ಒಂದು ಅಂಶವಾಗುವುದೂ ಕಷ್ಟ. ಅಂತಹ ಭಯಾನಕ ನಿದ್ರೆ ಅವನದ್ದು._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ