ರಾಮಾಯಣ ೧೦೩
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೦೩
*ಶಪ್ತೋಹಂ ವೇದವತ್ಯಾ ಚ ಯದಾ ಸಾ ಧರ್ಷಿತಾ ಪುರಾ*
_ರಾವಣನು ತನ್ನ ಸೋಲಿಗೆ ಮತ್ತೆ ಕೆಲವು ಕಾರಣಗಳನ್ನು ಗುರುತಿಸುತ್ತಿದ್ದಾನೆ. ಹಿಂದೆ ಬ್ರಹ್ಮನ ಮಗಳಾದ ವೇದವತಿಯನ್ನು ಬಲಾತ್ಕರಿಸಿದಾಗ ಅವಳು 'ನಾನೇ ಇನ್ನೊಂದು ಜನ್ಮದಲ್ಲಿ ಬಂದು ನಿನ್ನನ್ನು ಸಂಹರಿಸುವೆನು' ಎಂದು ಶಪಿಸಿದ್ದಳು. ಆ ಮಹಾತ್ಮಳೇ ಈಗ ಜನಕಸುತೆಯಾಗಿ ಸೀತೆಯೆಂಬ ಹೆಸರಿನಿಂದ ಬಂದಿರಬಹುದೆಂದು ತೋರುತ್ತಿದೆ._
*ಉಮಾ ನಂದೀಶ್ವರಶ್ಚಾಪಿ ರಂಭಾ ವರುಣಕನ್ಯಕಾ ಯಥೋಕ್ತಾಸ್ತನ್ಮಯಾ ಪ್ರಾಪ್ತಂ ನ ಮಿಥ್ಯಾ ಋಷಿಭಾಷಿತಮ್*
_ಹಿಂದೆ ಪಾರ್ವತಿ, ನಂದೀಶ್ವರ, ರಂಭೆ ಮತ್ತು ವರುಣಕನ್ಯೆಯಾದ ಪುಂಜಿಕಸ್ಥಲೆ ಇವರೆಲ್ಲರೂ ಏನು ನುಡಿದಿದ್ದರೋ ಅದೆಲ್ಲವೂ ಈಗ ಪ್ರಾಪ್ತವಾಗುತ್ತಿದೆ. ವೇದವತಿ ಕುಶಧ್ವಜನೆಂಬ ಬ್ರಹ್ಮರ್ಷಿಯ ಮಗಳು. ನಾರಾಯಣನೇ ತನ್ನ ಪತಿಯಾಗಬೇಕೆಂದು ತಪಗೈಯುತ್ತಿದ್ದವಳನ್ನು ರಾವಣನು ಬಲಾತ್ಕರಿಸಿದ್ದನು. ಆಗ ಅವಳು ರಾವಣನಿಗೆ ಶಪಿಸಿ ಅಗ್ನಿಪ್ರವೇಶ ಮಾಡಿದ್ದಳು. ರಾವಣನು ಹಿಂದೆ ಕೈಲಾಸವನ್ನು ಕೈಯಲ್ಲಿ ಅಲುಗಾಡಿಸಿದ್ದಾಗ ಪಾರ್ವತಿಯು ಕುಪಿತಳಾಗಿ ಸ್ತ್ರೀಯಿಂದಲೇ ನಿನಗೆ ಮರಣ ಭಯ ಉಂಟಾಗಲಿ ಎಂದು ಶಪಿಸಿದ್ದಳು. ಹಾಗೆಯೇ ನಂದೀಶ್ವರನನ್ನು ವಾನರಮುಖದವನೆಂದು ರಾವಣನು ಹಾಸ್ಯ ಮಾಡಿದಾಗ ವಾನರರೇ ನಿನ್ನ ದರ್ಪವನ್ನು ಅಡಗಿಸುವರು ಎಂದು ಶಪಿಸಿದ್ದನು. ನಳಕೂಬರನ ಮನೆಗೆ ಹೋಗುತ್ತಿದ್ದಾಗ ರಂಭೆಯನ್ನು ರಾವಣನು ಹಿಡಿದು ಬಲಾತ್ಕರಿಸಿದಾಗ ನಳಕೂಬರನು ಇನ್ನು ಮುಂದೆ ಯಾವ ಸ್ತ್ರೀಯನ್ನಾದರೂ ನೀನು ಬಲಾತ್ಕರಿಸಿದರೆ ಅಂದೇ ನಿನ್ನ ಶಿರಸ್ಸು ಸೀಳಿಹೋಗಲಿ ಎಂದು ಶಪಿಸಿದ್ದನು. ಅಂತೆಯೇ ಪುಂಜಿಕಸ್ಥಲೆಯನ್ನು ರಾವಣನು ಪೀಡಿಸಿದಾಗ ಸ್ತ್ರೀ ನಿಮಿತ್ತ ನಿನ್ನ ಸಾವು ಸಂಭವಿಸಲೆಂದು ಬ್ರಹ್ಮನ ಶಾಪವಿರುತ್ತದೆ. ಅವೆಲ್ಲವೂ ಈಗ ರಾವಣನಿಗೆ ನೆನಪಾಗುತ್ತಿದೆ. ಬದುಕಿದ್ದಾಗ ಉತ್ತಮ ಕೆಲಸಗಳನ್ನು ಹೆಚ್ಚು ಮಾಡಿದ್ದರೆ ಸಾಯುವ ಕಾಲಕ್ಕೆ ಅವುಗಳು ನೆನಪಿಗೆ ಬಂದು ಸಮಾಧಾನವಾಗುತ್ತದೆ. ಅದೇ ರಾವಣನಂತೆ ದುಷ್ಟತನದಲ್ಲೇ ಬದುಕು ಸವೆಸಿದ್ದರೆ ಅದೇ ಮನದಲ್ಲಿ ಕಾಡುತ್ತದೆ. ಇಂತಹ ರಾವಣನನ್ನೂ ಯಾವುದ್ಯಾವುದೋ ರಾಮಾಯಣಗಳ ಹೆಸರಿನಲ್ಲಿ ವೈಭವೀಕರಿಸುವ ಮೂರ್ಖತನಕ್ಕೆ ಮದ್ದಿದೆಯೇ! ಅವನ ಚರಿತ್ರೆಯೇ ಅವನ ವ್ಯಕ್ತಿತ್ವವನ್ನು ಸಾರುತ್ತದೆ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ